ನವದೆಹಲಿ: ಇನ್ನುಮುಂದೆ ಯಾವುದೇ ಭಾರತೀಯ ವ್ಯಕ್ತಿ ದೇಶದ ಅತ್ಯಂತ ಉನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಮಾಡಬಹುದು.
ಹೌದು. ಪ್ರತಿಷ್ಠಿತ ಪ್ರಶಸ್ತಿಗಳಿಗಾಗಿ ಲಾಬಿ, ಪ್ರಭಾವಕ್ಕೆ ಕಡಿವಾಣ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಈ ಬಾರಿ ಸಾರ್ವಜನಿಕರಿಗೆ ನಾಮ ನಿರ್ದೇಶನ ಮಾಡಲು ಅವಕಾಶ ನೀಡಿದ್ದು, ಆನ್ ಲೈನ್ ಮೂಲಕ ನಾಮ ನಿರ್ದೇಶನ ಪ್ರಕ್ರಿಯೆ ಆರಂಭಿಸಿದೆ. ಆದರೆ ಸಾಧಕರ ಹೆಸರು ಶಿಫಾರಸು ಮಾಡುವವರು ದೃಢಿಕರಣ ಮತ್ತು ಹೊಣೆಗಾರಿಕೆಗಾಗಿ ತಮ್ಮ ಆಧಾರ್ ಕಾರ್ಡ್ ವಿವರ ನೀಡಬೇಕಾಗಿದೆ.
ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸುವಂತೆ ಸಾರ್ವಜನಿಕರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ, ಅಲ್ಲದೆ ಪ್ರತಿಷ್ಠಿತ ಪ್ರಶಸ್ತಿಗಾಗಿ ನಡೆಯುತ್ತಿರುವ ಲಾಬಿ ಮತ್ತು ಪ್ರಭಾವವನ್ನು ತಡೆಯಲು ನಾಮ ನಿರ್ದೇಶನ ಪ್ರಕ್ರಿಯೆಯನ್ನು ಬದಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪದ್ಮ ಪ್ರಶಸ್ತಿಗಾಗಿ ಈಗಾಗಲೇ 1700 ನಾಮ ನಿರ್ದೇಶನಗಳು ಬಂದಿದ್ದು, ಸಾಧಕರ ಹೆಸರು ನಾಮ ನಿರ್ದೇಶನ ಮಾಡಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.
ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕೆಲಸ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ನಾಗರಿಕ ಸೇವೆ, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಗಳಲ್ಲಿನ ವಿಶೇಷ, ಅಸಾಧಾರಣ ಸಾಧನೆ ಮತ್ತು ಸೇವೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.