ನವದೆಹಲಿ: ಆದಾಯ ಘೋಷಣಾ ಯೋಜನೆ (ಐಡಿಎಸ್)ಯಡಿ ಬರುವ ಮಾಹಿತಿಯನ್ನು ಗೌಪ್ಯವಾಗಿಟ್ಟು, ಯಾವ ಬೇರೆ ಇಲಾಖೆಗಳಿಗೂ ಅದನ್ನು ನೀಡುವುದಿಲ್ಲ ಎಂದು ಸರ್ಕಾರ ಗುರುವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
"ಈ ಯೋಜನೆಯಡಿ ಘೋಷಿಸಿಕೊಳ್ಳುವ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವ ವಿಷಯದ ಬಗ್ಗೆ ಇರುವ ಸಂದೇಹಗಳ ಬಗ್ಗೆ, ಸರಿಯಾದ ಮಾಹಿತಿಯನ್ನು ನೀಡಿದ್ದಲ್ಲಿ ಅದನ್ನು ಯಾರ ಜೊತೆಗೂ ಹಂಚಿಕೊಳ್ಳುವುದಿಲ್ಲ ಎಂದು ಮತ್ತೆ ಹೇಳುತ್ತಿದ್ದೇವೆ" ಎಂದು ಹಣಕಾಸು ಸಚಿವಾಲಯ ಹೇಳಿದೆ.
ಸೆಪ್ಟೆಂಬರ್ 30 ರವರೆಗೆ ಚಾಲನೆಯಲ್ಲಿರುವ ಈ ಯೋಜನೆಯಲ್ಲಿ, ಇಲ್ಲಿಯವರೆಗೂ ಸಂಪೂರ್ಣವಾಗಿ ತೆರಿಗೆ ಕಟ್ಟದವರು ಮುಂದೆಬಂದು, ಇಲ್ಲಿಯವರೆಗೂ ಹೇಳಿಕೊಳ್ಳದ ಆಸ್ತಿ ಮತ್ತು ಆದಾಯವನ್ನು ಘೋಷಿಸಿ ತೆರಿಗೆ ಕಟ್ಟಬಹುದಾಗಿದೆ.
"ಕೇಂದ್ರೀಕೃತ ಯೋಜನಾ ಕಚೇರಿ (ಸಿಪಿಸಿ-ಬೆಂಗಳೂರು)ಯಲ್ಲಿ ಆದಾಯ ತೆರಿಗೆ ಕಮಿಷನರ್ ಬಳಿ ಮಾಡಿದ ಆದಾಯ ಘೋಷಣೆಯನ್ನು, ಬೇರೆ ಯಾವುದೇ ವ್ಯಾಪ್ತಿಯ ಅಧಿಕಾರಿಗಳ ಜೊತೆ ಹಂಚಿಕೊಳ್ಳಲಾಗುವುದಿಲ್ಲ" ಎಂದು ಹೇಳಿಕೆ ತಿಳಿಸಿದೆ.
ಹಾಗೆಯೇ ಈ ಯೋಜನೆಯಡಿ ಕಟ್ಟಿದ ತೆರಿಗೆ ಹಣವನ್ನು ವಾರ್ಷಿಕ ಹೇಳಿಕೆಯಲ್ಲಿಯೂ ನಮೂದಿಸುವದಿಲ್ಲ ಎಂದು ಸಚಿವಾಲಯ ತಿಳಿಸಿದೆ.