ನವದೆಹಲಿ: ಯಾವುದೇ ವ್ಯಕ್ತಿಯ ಆಧಾರ್ ಕಾರ್ಡ್ ಮಾಹಿತಿ ಹೊಂದಿರುವ ಏಜೆನ್ಸಿಗಳು, ಅದರ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ-ಪ್ರಕಟಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
ಆಧಾರ್ ನೀತಿಯಡಿ, ಯಾವುದೇ ನಿವಾಸಿಯ 12 ಅಂಕಿಗಳ ಆಧಾರ್ ಗುರುತಿನ ಸಂಖ್ಯೆಯ ಗೌಪ್ಯತೆಯನ್ನು ಯಾವುದೇ ಸಮಯದಲ್ಲಿ ಕಾಪಾಡಬೇಕಿದೆ.
ಈ ನೀತಿಯ ನಿಯಮಗಳ ಪ್ರಕಾರ, ಯಾವುದೇ ಏಜೆನ್ಸಿ ಸಂಗ್ರಹಿಸಿರುವ ಬಯೋಮೆಟ್ರಿಕ್ ಮಾಹಿತಿಯನ್ನು ಬೇರೆ ಯಾರೊಂದಿಗೂ, ಯಾವ ಸನ್ನಿವೇಶದಲ್ಲಿಯೂ ಹಂಚಿಕೊಳ್ಳುವಂತಿಲ್ಲ. ಇದನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲಾಗುತ್ತದೆ.
ಹಾಗೆಯೇ ಆಧಾರ್ ಸಂಖ್ಯೆ ಪಡೆಯುವ ಏಜೆನ್ಸಿಗಳು, ಗುರುತಿಗಾಗಿ ಆಧಾರ್ ಮಾಹಿತಿಯನ್ನು ನೀಡುವುದು ಕಡ್ಡಾಯವೋ ಅಥವಾ ಆಯ್ಕೆಯ ವಿಷಯವೋ ಎಂಬುದನ್ನು ಕೂಡ ಜನರಿಗೆ ತಿಳಿಸಬೇಕಿದೆ.
ಹಾಗೆಯೇ ಆಧಾರ್ ಸಂಖ್ಯೆಯ ಮಾಹಿತಿಯನ್ನು ಪಡೆಯುವುದಕ್ಕೆ, ಸಂಗ್ರಹಿಸಿಕೊಳ್ಳುವುದಕ್ಕೆ ಮತ್ತು ಯಾವುದಾದರೂ ವಿಷಯದ ಸಲುವಾಗಿ ಬಳಸುವುದಕ್ಕೆ ಆ ಆಧಾರ್ ಸಂಖ್ಯೆ ಹೊಂದಿರುವ ವ್ಯಕ್ತಿಯ ಒಪ್ಪಿಗೆ ಪಡೆಯಬೇಕೆಂದು ನಿರ್ಬಂಧ ಹೇರಲಾಗಿದೆ.