ಕಾವೇರಿ ಕಿಚ್ಚು: ಶನಿವಾರ ತುರ್ತು ಅಧಿವೇಶನ ಕರೆದ ರಾಜ್ಯ ಸರ್ಕಾರ

ತಮಿಳುನಾಡಿಗೆ ಮತ್ತೆ 42 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಈ ಆದೇಶ ಪಾಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ತಮಿಳುನಾಡಿಗೆ ಮತ್ತೆ 42 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಈ ಆದೇಶ ಪಾಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರ ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಶನಿವಾರ ವಿಧಾನ ಮಂಡಲದ ತುರ್ತು ಅಧಿವೇಶನ ಕರೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕಾನೂನು ಹೋರಾಟ ಮತ್ತು ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕೆ ಬೇಡವೇ ಎಂಬ ಬಗ್ಗೆ ಉಭಯ ಸದನಗಳ ಸದಸ್ಯರ ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.
ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಸಾಧ್ಯವಿಲ್ಲ ಎಂಬ ಸರ್ವಾನುಮತದ ನಿರ್ಣಯವನ್ನು ಅಧಿವೇಶನದಲ್ಲಿ ಕೈಗೊಂಡರೆ ಸುಪ್ರೀಂ ಕೋರ್ಟ್ ಅದನ್ನು ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಈ ಅವಕಾಶವನ್ನು ಬಳಸಿಕೊಳ್ಳಲು ಸರ್ಕಾರ ಉನ್ನತ ಮಟ್ಟದಲ್ಲಿ ಚರ್ಚೆ ಆರಂಭಿಸಿದೆ.
ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ್ದು, ಇಂತಹ ಸ್ಥಿತಿಯಲ್ಲೂ  ಕರ್ನಾಟಕ ತಮಿಳುನಾಡಿಗೆ ಸೆ.27 ವರೆಗೆ ಪ್ರತಿ ದಿನ 6 ಸಾವಿರ ಕ್ಯೂಸೆಕ್ ನೀರಿನಂತೆ ಒಟ್ಟು 42 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ನ ಈ ಆದೇಶ ಪಾಲಿಸಲು ಸಾಧ್ಯವಾಗದು ಎಂಬ ಒಕ್ಕೊರಲ ಅಭಿಪ್ರಾಯ ಸಂಪುಟ ಸಭೆಯಲ್ಲಿ ವ್ಯಕ್ತವಾಗಿದೆ.
ಸಿದ್ದರಾಮಯ್ಯರಿಂದ ಮಾಜಿ ಪ್ರಧಾನಿ ದೇವೇಗೌಡರ ಭೇಟಿ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮಾಜಿ ಪ್ರಧಾನಿಯೊಂದಿಗೆ ಚರ್ಚಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಇಂದು ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದು, ಈ ಸಭೆಗೂ ಮುನ್ನ ಅಂದರೆ 4 ಗಂಟೆಗೆ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ತೆರಳಿ, ಕಾವೇರಿ ವಿಚಾರದ ಚರ್ಚೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com