ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ನೆನ್ನೆಯ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕದ ಜನತೆಗಷ್ಟೇ ಅಲ್ಲದೆ ತಟಸ್ಥ ವೀಕ್ಷಕರಿಗೂ ಆಕ್ರೋಶ ತರಿಸಿದೆ. ಒಂದು ದಿನದ ಹಿಂದೆಯಷ್ಟೇ ಕಾವೇರಿ ಮೇಲುಸ್ತುವಾರಿ ಸಮಿತಿ ತಮಿಳುನಾಡಿಗೆ ದಿನಕ್ಕೆ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿದ್ದರು, ನೆನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ 6000 ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿತ್ತು.
ಮೆಟ್ಟೂರು ಜಲಾಶಯದಲ್ಲಿ ಹೆಚ್ಚು ನೀರು ಶೇಖರವಾಗಿದೆ ಆದರೆ ಕನ್ನಂಬಾಡಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಕರ್ನಾಟಕ ಪರ ವಕೀಲ ನಾರಿಮನ್ ವಾದಿಸಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು ಸಫಲವಾಗಿರಲಿಲ್ಲ.
ಈಗ ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು, "ಕಾವೇರಿ ವಿವಾದದ ಈ ಆದೇಶದ ಮೂಲಕ ನ್ಯಾಯಾಧೀಶ ದೀಪಕ್ ಮಿಶ್ರ, ಡಿಕನ್ಸ್ ಹೇಳಿದ್ದ (ಆಲಿವರ್ ಟ್ವಿಸ್ಟ್ ನಲ್ಲಿ) 'ಕಾನೂನು ಕತ್ತೆ' ಎಂಬ ಮಾತನ್ನು ನಿಜಗೊಳಿಸಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
By his order in the Cauvery water dispute,Justice Deepak Mishra has confirmed Dickens' quote ( in 'Oliver Twist' ) : " The law is a ass "
ವಿಶ್ವವಿಖ್ಯಾತ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್ ಅವರ ಆಲಿವರ್ ಟ್ವಿಸ್ಟ್ ಜಗತ್ಪ್ರಸಿದ್ಧ ಕೃತಿಯಾಗಿದ್ದು, ಶಾಸ್ತ್ರೀಯ ಕಾದಂಬರಿಯಾಗಿ ಜನಜನಿತವಾಗಿದೆ. ಇದರ ಒಂದು ಮಾತು 'ಕಾನೂನು ಕತ್ತೆ' (ದಿ ಲಾ ಐಸ್ ಆಸ್) ಯನ್ನು ಉಲ್ಲೇಖಿಸಿ ಕಟ್ಜು ಅವರು ಸುಪ್ರೀಂ ಕೋರ್ಟ್ ಆದೇಶವನ್ನು ತರಾಟೆಗೆ ತೆಗೆದುಕೊಂಡಿರುವುದು ಕನ್ನಡಿಗರ ವಾದಕ್ಕೆ ತುಸು ಬಲ ತಂದಿದೆ.