ನವದೆಹಲಿ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಮತ್ತೆ ಆಘಾತವಾಗಿದ್ದು, ನಾಳೆಯಿಂದ ಮತ್ತೆ 36 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.
ಕಾವೇರಿ ವಿವಾದದ ವಿಚಾರಣೆ ನಡೆಸಿದ ನ್ಯಾ.ದೀಪಕ್ ಮಿಶ್ರಾ ಹಾಗೂ ನ್ಯಾ.ಉದಯ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ನ್ಯಾಯಾಲಯದ ಘನತೆಗೆ ಕರ್ನಾಟಕದಿಂದ ಧಕ್ಕೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲಾ ರಾಜ್ಯಗಳು ಪಾಲಿಸಬೇಕು. ಎಲ್ಲಾ ರಾಜ್ಯಗಳಂತೆ ಕರ್ನಾಟಕವೂ ಒಂದು ಹೇಳಿದೆ. ಅಲ್ಲದೆ ಮತ್ತೆ 6 ದಿನ ನಿತ್ಯ 6 ಸಾವಿರ ಕ್ಯೂಸೆಕ್ ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಮತ್ತೊಂದೆಡೆ ಮೂರು ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದು, ನಾಳೆ ಸಂಜೆ 4ಗಂಟೆಯೊಳಗೆ ಮಂಡಳಿಯ ಪ್ರತಿನಿಧಿಗಳ ಮಾಹಿತಿ ನಮಗೆ ಕೊಡಿ ಎಂದು ಕೋರ್ಟ್ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿದೆ.
ಇನ್ನು ಕೇಂದ್ರ ಸರ್ಕಾರ ಸಹ ಮಂಗಳವಾರದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವುದಾಗಿ ಉತ್ತರ ನೀಡಿದೆ.
ಕರ್ನಾಟಕದ ಪರ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಟಿಪ್ಪಣಿಯನ್ನು ಕೋರ್ಟ್ ಗೆ ಸಲ್ಲಿಸಿ, ಟಿಪ್ಪಣಿ ಬಿಟ್ಟು ಬೇರೆ ವಾದ ಮಾಡಲ್ಲ ಎಂದು ಹೇಳಿದರು.