ಅಲ್ವಾರ್ ಹತ್ಯೆ ಪ್ರಕರಣ; ನ್ಯಾಯ ದೊರಕಿಸುವ ಭರವಸೆ ನೀಡಿದ ರಾಜನಾಥ್ ಸಿಂಗ್

ರಾಜಸ್ಥಾನದ ಅಲ್ವಾರ್ ನಲ್ಲಿ ಗೋರಕ್ಷಕರು ಮುಸ್ಲಿಂ ವ್ಯಕ್ತಿಯನ್ನು ಹತ್ಯೆಮಾಡಿದ ಪ್ರಕರಣದಲ್ಲಿ, ಕೇಂದ್ರ ಸರ್ಕಾರ ನ್ಯಾಯದ ಭರವಸೆ ನೀಡುತ್ತದೆ ಎಂದು ಲೋಕಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್...
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ನವದೆಹಲಿ: ರಾಜಸ್ಥಾನದ ಅಲ್ವಾರ್ ನಲ್ಲಿ ಗೋರಕ್ಷಕರು ಮುಸ್ಲಿಂ ವ್ಯಕ್ತಿಯನ್ನು ಹತ್ಯೆಮಾಡಿದ ಪ್ರಕರಣದಲ್ಲಿ, ಕೇಂದ್ರ ಸರ್ಕಾರ ನ್ಯಾಯದ ಭರವಸೆ ನೀಡುತ್ತದೆ ಎಂದು ಲೋಕಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ. 
ದುಷ್ಕರ್ಮಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಶೂನ್ಯ ಅವಧಿಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ ನಂತರ ರಾಜನಾಥ್ ಪ್ರತಿಕ್ರಿಯಿಸಿದ್ದಾರೆ. 
"ಈ ವಿಷಯದಲ್ಲಿ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಎಫ್ ಐ ಆರ್ ದಾಖಲಾಗಿದೆ ಮತ್ತು ಈ ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ. ನ್ಯಾಯ ಉಳಿಯಲು ಕೇಂದ್ರ ಪ್ರಯತ್ನಿಸಲಿದೆ" ಎಂದು ಸಿಂಗ್ ಹೇಳಿದ್ದಾರೆ. 
ಇದಕ್ಕೂ ಮುಂಚೆ ಈ ಪ್ರಕರಣದ ಬಗ್ಗೆ ಮಾತನಾಡಿದ ಖರ್ಗೆ "ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಇದು ಗಂಭೀರ ವಿಷಯ. ಇದು ಸರಣಿಯಲ್ಲಿ ಐದನೇ ಇಂತಹ ಘಟನೆ. ಈ ಹಿಂದೆ ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ಇಂತಹ ಘಟನೆಗಳು ನಡೆದಿದ್ದವು" ಎಂದಿದ್ದಾರೆ. 
ಸಂತ್ರಸ್ತರಿಗೆ ಪರಿಹಾರ ಮತ್ತು ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ. 
ಗೋವುಗಳನ್ನು ಸಾಗಿಸುತ್ತಿದ್ದಾಗ ಶನಿವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗೋರಕ್ಷಕರು ೫೦ ವರ್ಷದ ಪೆಹಲು ಖಾನ್ ಎಂಬುವವರ ಮೇಲೆ ದೌರ್ಜನ್ಯ ಎಸಗಿ ಥಳಿಸಿದ್ದರು. 
ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖಾನ್ ಸೋಮವಾರ ಮೃತಪಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com