ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಿಂದ ಯಮುನಾ ನದಿ ಪರಿಸರ ಹಾಳು; ಸರಿಪಡಿಸಲು 10 ವರ್ಷ ಬೇಕು: ತಜ್ಞರ ಸಮಿತಿ

ಕಳೆದ ವರ್ಷ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆ ಯಮುನಾ ನದಿ ತೀರದಲ್ಲಿ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದಾಗಿ...
ಶ್ರೀ ಶ್ರೀ ರವಿಶಂಕರ್ ಗುರೂಜಿ
ಶ್ರೀ ಶ್ರೀ ರವಿಶಂಕರ್ ಗುರೂಜಿ
Updated on
ನವದೆಹಲಿ: ಕಳೆದ ವರ್ಷ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆ ಯಮುನಾ ನದಿ ತೀರದಲ್ಲಿ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದಾಗಿ ಆ ಪ್ರದೇಶದ ಪರಿಸರಕ್ಕೆ ಗಂಭೀರ ಹಾನಿಯಾಗಿದ್ದು, ಅದನ್ನು ಸರಿಪಡಿಸಲು 13.29 ಕೋಟಿ ರುಪಾಯಿ ಖರ್ಚಾಗಲಿದೆ ಮತ್ತು ಅದಕ್ಕೆ 10 ವರ್ಷ ಸಮಯ ಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ(ಎನ್‌ಜಿಟಿ) ತಜ್ಞರ ಸಮಿತಿ ಹೇಳಿದೆ.
ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ತಜ್ಞರ ಸಮಿತಿ ಹಸಿರು ನ್ಯಾಯ ಮಂಡಳಿಗೆ ಈ ಮಾಹಿತಿ ನೀಡಿದ್ದು, ಪರಿಸರಕ್ಕಾದ ಹಾನಿ ಸರಿಪಡಿಸುವ ಪ್ರಕ್ರಿಯೆಗೆ ಸುಮಾರು 10 ವರ್ಷ ಬೇಕಾಗಬಹುದು ಎಂದೂ ಹೇಳಿದೆ.
ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಿಂದಾಗಿ ಯಮುನಾ ನದಿಯ ಪಶ್ಚಿಮದ 120 ಹೆಕ್ಟೇರ್ ತೀರ ಪ್ರದೇಶ ಮತ್ತು ಪೂರ್ವದ 50 ಹೆಕ್ಟೇರ್ ತೀರ ಪ್ರದೇಶಕ್ಕೆ ಗಂಭೀರ ಹಾನಿಯಾಗಿದೆ ಎಂದು ಸಮಿತಿ ಮಾಹಿತಿ ನೀಡಿದೆ.
ಮೂರು ದಿನಗಳ ವಿಶ್ವ ಸಂಸ್ಕೃತಿ ಉತ್ಸವ ಆಯೋಜಿಸಲು ಕಳೆದ ವರ್ಷ ಹಸಿರು ನ್ಯಾಯ ಮಂಡಳಿ ಅನುಮತಿ ನೀಡಿತ್ತು. ಆ ಸಂದರ್ಭ ಮಂಡಳಿಯು ಉತ್ಸವಕ್ಕೆ ನಿಷೇಧ ಹೇರಲು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿತ್ತು.
ಆದಾಗ್ಯೂ, ಉತ್ಸವದಿಂದ ಪರಿಸರಕ್ಕೆ ಆಗಬಹುದಾದ ಹಾನಿಯ ಮಧ್ಯಂತರ ಪರಿಹಾರವಾಗಿ 5 ಕೋಟಿ ರುಪಾಯಿ ನೀಡುವಂತೆ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆಗೆ ಎನ್ ಜಿಟಿ ಸೂಚಿಸಿತ್ತು.
ಈ ಹಿಂದೆ ನಾಲ್ಕು ಸದಸ್ಯರ ಸಮಿತಿ, ನದಿ ತೀರದ ಪುನರ್‌ನಿರ್ಮಾಣ ವೆಚ್ಚವಾಗಿ 100ರಿಂದ 120 ಕೋಟಿ ರುಪಾಯಿ ನೀಡಲು ಆರ್ಟ್ ಆಫ್ ಲಿವಿಂಗ್‌ಗೆ ಸೂಚಿಸುವಂತೆ ಶಿಫಾರಸು ಮಾಡಿತ್ತು. ನಂತರ, ಏಳು ಸದಸ್ಯರ ಮತ್ತೊಂದು ಸಮಿತಿ, ಸಂಸ್ಕೃತಿ ಉತ್ಸವದಿಂದಾಗಿ ನದಿ ತೀರ ಸಂಪೂರ್ಣ ಹಾನಿಗೊಳಗಾಗಿದೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com