ಬೆಂಗಳೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಯ ಫಲಿತಾಂಶದ ಮೂಲಕ ನಾವು ಜನರ ನಾಡಿಮಿಡಿತ ಅರಿಯಲು ಸಾಧ್ಯವಾಯಿತು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಗೆಲ್ಲಿಸಿದ ಮತದಾರನಿಗೆ ಕೋಟಿ ಕೋಟಿ ಧನ್ಯವಾದಗಳನ್ನು ಹೇಳಿದ್ದಾರೆ.
ಚುನಾವಣೆ ಫಲಿತಾಂಶದ ನಂತರ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಉಪ ಚುನಾವಣೆಯ ಫಲಿತಾಂಶದಿಂದ ಅಡಳಿತಪರವಾದ ಅಲೆ ಇದೆ ಎಂಬುದು ಸಾಬೀತಾಗಿದ್ದು, ಇದಕ್ಕೆ ಸರ್ಕಾರದ ಜನಪರ ಕಾರ್ಯಕ್ರಮಗಳೇ ಕಾರಣ ಎಂದು ಹೇಳಿದ್ದಾರೆ.
ನಾವು ಅಭಿವೃದ್ಧಿ ವಿಚಾರಗಳನ್ನು ಹಾಗೂ ಸರ್ಕಾರದ ಸಾಧನೆಗಳನ್ನು ಮಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದೇವೆ. ಆದರೆ ಬಿಜೆಪಿ ನಾಯಕರು ನಮ್ಮ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದರು. ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದರು. ಇನ್ನು ನನ್ನ ಹಾಗೂ ಅವರ ಮಧ್ಯ ಚುನಾವಣೆ ಎಂದಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಎರಡು ಕ್ಷೇತ್ರಗಳ ಮತದಾರರು ತುಂಬಾ ಪ್ರಬುದ್ಧರಾಗಿದ್ದು, ವೈಯಕ್ತಿಕ ಟೀಕೆ, ಜಾತಿ, ಧರ್ಮಕ್ಕೆ ಯಾವುದೇ ಬೆಂಬಲ ನೀಡಿಲ್ಲ. ನಮ್ಮ ವಿರುದ್ಧದ ಎಲ್ಲಾ ಆರೋಪಗಳಿಗೂ ಜನ ಉತ್ತರ ನೀಡಿದ್ದಾರೆ. ಸರ್ಕಾರದ ಕೆಲಸವನ್ನು ಮೆಚ್ಚಿ ಮತದಾರ ನಮ್ಮ 'ಕೈ'ಹಿಡಿದಿದ್ದಾರೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆ ಹೇಳಿದ್ದೆ. ಆದರೆ ಬಿಜೆಪಿಗೆ ಪಾಠ ಕಲಿಸಲು ಹಾಗೂ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ನನ್ನ ನೇತೃತ್ವದಲ್ಲೇ 2018ರ ಸಾರ್ವತ್ರಿಕ ಚುನಾವಣೆ ಎದುರಿಸುತ್ತೇವೆ ಮತ್ತು ನಾವೇ ಗೆಲ್ಲುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಎಲ್ಲಾ ನಾಯಕರಿಗೂ ಮತ್ತು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಜೆಡಿಎಸ್ ಕಾರ್ಯಕರ್ತರಿಗೂ ಧನ್ಯವಾದಗಳು ಎಂದು ಸಿಎಂ ಹೇಳಿದ್ದಾರೆ.