ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ ಅವರ ನೀಲಗಿರಿ ಜಿಲ್ಲೆಯ ಎಸ್ಟೇಟ್ ಸೆಕ್ಯುರಿಟಿ ಗಾರ್ಡ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಕಣಗರಾಜ್ ಅವರು ಶನಿವಾರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇಂದು ನೆರೆಯ ರಾಜ್ಯ ಕೇರಳದ ತ್ರಿಸೂರ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕಣಗರಾಜ್, ಆತನ ಪತ್ನಿ ವಿನುಪ್ರಿಯಾ ಹಾಗೂ ಪುತ್ರಿ ನೀತು ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಆರೋಪಿ ಹಾಗೂ ಕಣಗರಾಜ್ ಆಪ್ತ ಸಯನ್ ಅಲಿಯಾಸ್ ಶ್ಯಾಮ್ ಗಂಭೀರವಾಗಿ ಗಾಯಗೊಂಡಿದ್ದಾರೆ.
2012ರವರೆಗೆ ಜಯಲಲಿತಾ ಅವರ ಕಾರು ಚಾಲಕನಾಗಿದ್ದ ಕಣಗರಾಜ್, ಇತ್ತೀಚಿಗೆ ಜಯಲಲಿತಾ ಅವರ ಕೊಡನಾಡು ಟೀ ಎಸ್ಟೇಟ್ ಸೆಕ್ಯುರಿಟಿ ಗಾರ್ಡ್ ಓಂ ಬಹದ್ದೂರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ.
ಜಯಲಲಿತಾ ಅವರ ಕೊಡನಾಡಿನಲ್ಲಿರುವ ಎಸ್ಟೇಟ್ 900 ಎಕರೆಯದ್ದಾಗಿದ್ದು ಇಲ್ಲಿನ ರಾಜವೈಭವದ ಅರಮನೆಯಂತಹ ಬೃಹತ್ ಬಂಗಲೆಯಲ್ಲಿ ಜಯಾ ಆಗೀಗ ಬಂದು ಇರುತ್ತಿದ್ದರು. ನಿಧನಕ್ಕೆ ಮುನ್ನ ಕೆಲವು ವರ್ಷಗಳ ಹಿಂದಿನಿಂದಲೇ ಜಯಾ ಈ ಬಂಗಲೆಯಲ್ಲಿ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.