ಎಡಪ್ಪಾಡಿ, ಕೆ. ಪಳನಿಸ್ವಾಮಿ
ಪ್ರಧಾನ ಸುದ್ದಿ
ಪಳನಿಸ್ವಾಮಿಯಿಂದ ರಾಜ್ಯಪಾಲರ ಭೇಟಿ, ಸರ್ಕಾರ ರಚನೆಯ ಹಕ್ಕು ಮಂಡನೆ
ತಮಿಳುನಾಡು ಆಡಳಿತರೂಢ ಎಐಎಡಿಎಂಕೆ ಪಕ್ಷದಲ್ಲಿನ ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕ...
ಚೆನ್ನೈ: ತಮಿಳುನಾಡು ಆಡಳಿತರೂಢ ಎಐಎಡಿಎಂಕೆ ಪಕ್ಷದಲ್ಲಿನ ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರಧಾನ ಕಾರ್ಯದರ್ಶಿ ಶಶಿಕಲಾ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ಅವರು ಮಂಗಳವಾರ ತಮಿಳುನಾಡು ಉಸ್ತುವಾರಿ ರಾಜ್ಯಪಾಲ ಸಿ.ಎಚ್.ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ.
ಇಂದು ಸಂಜೆ 5.40ರ ಸುಮಾರಿಗೆ ತಮ್ಮ ಕೆಲವು ಬೆಂಬಲಿಗ ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಪಳನಿಸ್ವಾಮಿ, ತಮಗೆ 112 ಶಾಸಕರ ಬೆಂಬಲವಿರುವ ಪಟ್ಟಿಯನ್ನು ನೀಡಿ ನೂತನ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ ರಾಜ್ಯಪಾಲರು ಅವರಿಗೆ ಯಾವುದೇ ಭರವಸೆ ನೀಡಿಲ್ಲ ಎಂದು ರಾಜಭವನ ಮೂಲಗಳು ತಿಳಿಸಿವೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಮುಖ್ಯಮಂತ್ರಿ ಹುದ್ದೆಯ ರೇಸ್ ನಿಂದ ಹಿಂದೆ ಸರಿದ ಜಯಲಲಿತಾ ಆಪ್ತೆ, ರೆಸಾರ್ಟ್ ನಲ್ಲಿದ್ದ ತಮ್ಮ ಬೆಂಬಲಿಗ ಶಾಸಕರೊಂದಿಗೆ ಸಭೆ ನಡೆಸಿ, ಪಳನಿಸ್ವಾಮಿಯನ್ನು ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದರು.
ಮತ್ತೊಂದೆಡೆ ಶಶಿಕಲಾ ತಮ್ಮ ಬೆಂಬಲಿಗ ಶಾಸಕರೊಂದಿಗೆ ಕೋವತ್ತೂರಿನ ಗೋಲ್ಡನ್ ಬೇ ರೆಸಾರ್ಟ್ ನಲ್ಲೇ ವಾಸ್ತವ್ಯ ಹೂಡಿದ್ದು,ಮುನ್ನೆಚ್ಚರಿಕೆ ಕ್ರಮವಾಗಿ 10 ಕಿಲೋ ಮೀಟರ್ ವ್ಯಾಪ್ತಿವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ