ತಿರುಮಲ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಬುಧವಾರ ತಿರುಪತಿ ತಿಮ್ಮಪ್ಪನಿಗೆ 5.5 ಕೋಟಿ ರುಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ತಿರುಮಲ ದೇವಸ್ಥಾನಕ್ಕಾಗಿ ಅತಿ ಹೆಚ್ಚು ಮೌಲ್ಯದ ಕಾಣಿಕೆ ನೀಡಿದ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇಂದು ಕುಂಟಂಬ ಸಮೇತ ತಿರುಪತಿ ತಿಮ್ಮಪ್ಪನ್ನ ದರ್ಶನ ಪಡೆದ ಚಂದ್ರಶೇಖರ್ ರಾವ್ ಅವರು, ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಪ್ರತಿಫಲವಾಗಿ ತಿರುಪತಿ ತಿಮ್ಮಪ್ಪನಿಗೆ 5.5 ಕೋಟಿ ಮೌಲ್ಯದ ಚಿನ್ನದ ಆಭರಣ ಹಾಗೂ ಪದ್ಮಾವತಿ ದೇವಿಗೆ ಬೆಲೆಬಾಳುವ ಮೂಗಿನ ನತ್ತು ಕಾಣಿಕೆಯಾಗಿ ನೀಡಿದ್ದಾರೆ.
ತಿಮ್ಮಪ್ಪನ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ತೆಲಂಗಾಣ ಸರ್ಕಾರದ ಪರವಾಗಿ ಈ ಕಾಣಿಕೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ಈ ಹಿಂದೆ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಅವರು 2009ರಲ್ಲಿ 30 ಕೆ.ಜೆ.ತೂಕದ 42 ಕೋಟಿ ಮೌಲ್ಯದ ವಜ್ರದ ಆಭರಣ ಕಾಣಿಕೆಯಾಗಿ ನೀಡಿದ್ದರು. ಅಲ್ಲದೆ ವಿಜಯನಗರ ರಾಜ ಕೃಷ್ಣದೇವರಾಯನ ನಂತರ ತಿರುಮಲ ದೇವಸ್ಥಾನಕ್ಕೆ ಅತಿ ಹೆಚ್ಚು ಮೌಲ್ಯದ ಕಾಣಿಕೆ ನೀಡಿದ ವ್ಯಕ್ತಿ ತಾವೇ ಎಂದು ಹೇಳಿಕೊಂಡಿದ್ದರು.
ಇನ್ನು 2010ರಲ್ಲಿ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ತಿರುಮಲ ತಿರುಪತಿ ದೇವಸ್ಥಾನಂಗೆ 50 ಕೋಟಿ ರುಪಾಯಿ ಚೆಕ್ ನೀಡಿದ್ದರು. 2012ರಲ್ಲಿ ಮದ್ಯದ ದೊರೆ ವಿಜಯ್ ಮಲ್ಯ ಅವರು ಮೂರು ಕೆಜಿ ಚಿನ್ನವನ್ನು ಕಾಣಿಕೆಯಾಗಿ ನೀಡಿದ್ದರು.