ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ವೇತನ ಹೆಚ್ಚಳಕ್ಕೆ ಮಾಡಿದ್ದ ಸಮಿತಿಯ ಶಿಫಾರಸ್ಸನ್ನು ಶನಿವಾರ ಸಂಪುಟ ಒಪ್ಪಿಕೊಂಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಸಾಮಾನ್ಯ ಕಾರ್ಮಿಕರಿಗೆ ಸದ್ಯಕ್ಕೆ ವೇತನ ತಿಂಗಳಿಗೆ ೯೭೨೪ ರೂ ಇದ್ದು, ಇದನ್ನು ೧೩೩೫೦ ರೂಗೆ ಹೆಚ್ಚಿಸಲಾಗಿದೆ.
ಅರ್ಧ ಕುಶಲ ಕಾರ್ಮಿಕರು ಮತ್ತು ಕುಶಲ ಕಾರ್ಮಿಕರಿಗೆ ಕ್ರಮವಾಗಿ ಈಗ ಕನಿಷ್ಠ ವೇತನ ೧೦,೭೬೪ ರೂ ಮತ್ತು ೧೪,೬೯೮ ರೂ ಇದ್ದು ಅವುಗಳನ್ನು ೧೧೮೩೦ ರೂ ಮತ್ತು ೧೬,೧೮೨ ರೂಗೆ ಹೆಚ್ಚಿಸಲಾಗಿದೆ.
ಇದು ಕನಿಷ್ಠ ವೇತನದಲ್ಲಿ ಸರಾಸರಿ ೩೬-೩೭% ಹೆಚ್ಚಳವಾದಂತೆ ಎಂದಿರುವ ಕೇಜ್ರಿವಾಲ್ ಇದು ಕಾರ್ಮಿಕರಿಗೆ ವೇತನ ಹೆಚ್ಚಿಸುವತ್ತ ಆಮ್ ಆದ್ಮಿ ಪಕ್ಷದ ಐತಿಹಾಸಿಕ ನಿರ್ಧಾರ ಎಂದು ಕೂಡ ಹೇಳಿದ್ದಾರೆ.
ಈ ಹಿಂದಿನ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಕಾರ್ಮಿಕರ ವೇತನವನ್ನು ಹೆಚ್ಚಿಸುವ ದೆಹಲಿ ಸರ್ಕಾರದ ಕ್ರಮಕ್ಕೆ ತಡೆ ನೀಡಿದ್ದರು. ಆದರೆ ಸದ್ಯದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸೋಮವಾರ ಇದಕ್ಕೆ ಒಪ್ಪಿಗೆ ನೀಡಿದ್ದಾರೆ.
ದೆಹಲಿ ಬಜೆಟ್ ಅಧಿವೇಶನ ಮಾರ್ಚ್ ೬ ರಿಂದ ೧೦ರವರೆಗೆ ನಡೆಯಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.