ಎಬಿವಿಪಿ ವಿರೋಧಿಸಿದ್ದಕ್ಕೆ ಹುತಾತ್ಮ ಯೋಧನ ಪುತ್ರಿಗೆ ರೇಪ್ ಬೆದರಿಕೆ; ಮಹಿಳಾ ಆಯೋಗಕ್ಕೆ ದೂರು

ಎಬಿವಿಪಿ ವಿರುದ್ಧ ಅಭಿಯಾನ ಪ್ರಾರಂಭಿಸಿರುವ ಕಾರ್ಗಿಲ್ ಹುತಾತ್ಮನ ಪುತ್ರಿ ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರ್ಮೆಹರ್ ಕೌರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ರೇಪ್ ಬೆದರಿಕೆ
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರ್ಮೆಹರ್ ಕೌರ್
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರ್ಮೆಹರ್ ಕೌರ್
ನವದೆಹಲಿ: ಎಬಿವಿಪಿ ವಿರುದ್ಧ ಅಭಿಯಾನ ಪ್ರಾರಂಭಿಸಿರುವ ಕಾರ್ಗಿಲ್ ಹುತಾತ್ಮನ ಪುತ್ರಿ ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರ್ಮೆಹರ್ ಕೌರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ರೇಪ್ ಬೆದರಿಕೆ ಬಂದಿದ್ದು, ಸೋಮವಾರ ದೆಹಲಿ ಮಹಿಳಾ ಆಯೋಗಕ್ಕೆ (ಡಿ ಸಿ ಡಬ್ಲ್ಯು) ದೂರು ನೀಡಲಾಗಿದೆ. 
ಗುರ್ಮೆಹರ್ ಅವರು ಡಿ ಸಿ ಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಳಿವಾಳ್ ಬಳಿ ದೂರು ನೀಡಿದ್ದು, ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ವಿರುದ್ಧ ನಿಂತಿರುವುದಕ್ಕೆ ತಮಗೆ ರೇಪ್ ಬೆದರಿಕೆ ಬರುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಡಿ ಸಿ ಡಬ್ಲ್ಯು ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಕಾರ್ಗಿಲ್ ಯುದ್ಧದಲ್ಲಿ ಮೃತರಾಗಿದ್ದ ಯೋಧನ ಪುತ್ರಿ ದ ಲೇಡಿ ರಾಮ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದು ತಮ್ಮ ಫೇಸ್ಬುಕ್ ಪುಟದಲ್ಲಿ "ನಾನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ. ನಾನು ಎಬಿವಿಪಿಗೆ ಹೆದರುವುದಿಲ್ಲ. ನಾನೊಬ್ಬಳೇ ಅಲ್ಲ. ಭಾರತದ ಪ್ರತಿ ವಿದ್ಯಾರ್ಥಿ ನನ್ನೊಟ್ಟಿಗಿದ್ದಾರೆ" ಎಂದು ಬರೆದಿದ್ದರು. ಇದಕ್ಕೆ #ಸ್ಟೂಡೆಂಟ್ಸ್ ಎಗೇನ್ಸ್ಟ್ ಎಬಿವಿಪಿ ಎಂಬ ಹ್ಯಾಶ್ ಟ್ಯಾಗ್ ಕೂಡ ಸೇರಿಸಿದ್ದರು. 
ದೆಹಲಿ ವಿಷವಿದ್ಯಾಲಯದ ರಾಮಜಾಸ್ ಕಾಲೇಜಿನಲ್ಲಿ ಆರ್ ಎಸ್ ಎಸ್ ವಿದ್ಯಾರ್ಥಿ ಘಟಕದ ಸದಸ್ಯರು ಫೆಬ್ರವರಿ ೨೨ ರಂದು ಹಲ್ಲೆ ಮಾಡಿದ ಹಿನ್ನಲೆಯಲ್ಲಿ ಕೌರ್ ಎಬಿವಿಪಿ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದರು. 
ಅವರನ್ನು ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿ ಎಂದು ಹಂಗಿಸಿ ರೇಪ್ ಬೆದರಿಕೆ ಹಾಕಲಾಗಿದೆ. ನಾನು ಒಳ್ಳೆಯದ್ದಕ್ಕೆ ಹೋರಾಟ ಮಾಡುತ್ತಿರುವುದರಿಂದ ನನಗೆ ಯಾವುದೇ ಭಯವಿಲ್ಲ ಎಂದು ಕೌರ್ ಸೋಮವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
"ನೀವು ಅಧಿಕಾರದಲ್ಲಿರುವ ವಿದ್ಯಾರ್ಥಿ ಸಂಘ ಆಗಿರುವುದಕ್ಕೆ ನನ್ನ ಬೆದರಿಸಬಹುದು ಎಂಬುದು ಸರಿಯಲ್ಲ. 
"ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ದುಡಿಯುವುದು ವಿದ್ಯಾರ್ಥಿ ಸಂಘಟನೆಯ ಕೆಲಸ ಅವರನ್ನು ಬೆದರಿಸುವುದಲ್ಲ" ಎಂದು ಕೌರ್ ಹೇಳಿದ್ದಾರೆ. 
"ನನಗೆ ನೂರಾರು ಬೆದರಿಕೆಗಳು ಬರುತ್ತಿವೆ. ನಾನು ಅವರೆಲ್ಲರ ವಿರುದ್ಧ ದೂರು ನೀಡಲು ಪ್ರಾರಂಭಿಸಿದರೆ ಪೊಲೀಸರೇ ಅದನ್ನು ನಿಲ್ಲಿಸುವಂತೆ ಸೂಚಿಸಬಹುದು" ಎಂದು ಕೂಡ ಅವರು ಹೇಳಿದ್ದಾರೆ. 
ಎಬಿವಿಪಿ ಮತ್ತು ಕಾಲೇಜಿನಲ್ಲಿ ನಡೆದ ಹಿಂಸೆಯ ವಿರುದ್ಧ ನಿಂತಿರುವುದಕ್ಕೆ ಬೆದರಿಕೆಯ ಜೊತೆಗೆ ಸಾವಿರಾರು ಜನರ ಬೆಂಬಲವು ಕೌರ್ ಅವರಿಗೆ ದೊರೆತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com