ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿಗೆ ಭದ್ರತೆ ಒದಗಿಸಿ: ಪೊಲೀಸರಿಗೆ ಡಿಸಿಡಬ್ಲ್ಯೂ

ಎಬಿವಿಪಿ ವಿರೋಧಿಸಿದ್ದಕ್ಕೆ ತನ್ನ ಮೇಲೆ ಅತ್ಯಾಚಾರ ಎಸಗುವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿರುವ ಕಾರ್ಗಿಲ್ ಹುತಾತ್ಮ ....
ಗುರ್ಮೆಹರ್ ಕೌರ್
ಗುರ್ಮೆಹರ್ ಕೌರ್
ನವದೆಹಲಿ: ಎಬಿವಿಪಿ ವಿರೋಧಿಸಿದ್ದಕ್ಕೆ ತನ್ನ ಮೇಲೆ ಅತ್ಯಾಚಾರ ಎಸಗುವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿರುವ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಹಾಗೂ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರ್ಮೆಹರ್ ಕೌರ್ ಗೆ ಸೂಕ್ತ ಭದ್ರತೆ ಒದಗಿಸುವಂತೆ ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯೂ) ಸೋಮವಾರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.
24 ವರ್ಷದ ಕೌರ್ ಅವರು ಇಂದು ಬೆಳಗ್ಗೆ ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಳ್ ಅವರನ್ನು ಭೇಟಿ ಮಾಡಿ, ತನ್ನ ಮೇಲೆ ಅತ್ಯಾಚಾರ ಎಸಗುವುದಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಎಬಿವಿಪಿ ಕಾರ್ಯಕರ್ತರಿಂದ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ದೂರು ನೀಡಿದ್ದರು.
ಈ ಸಂಬಂಧ ದೆಹಲಿ ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್ ಅವರಿಗೆ ಪತ್ರ ಬರೆದಿರುವ ಮಲಿವಾಳ್ ಅವರು, ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು, ಬೆದರಿಕೆ ಹಾಕಿದ ದುಷ್ಕರ್ಮಿಗಳ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಿ ಮತ್ತು ಯುವತಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಕಾರ್ಗಿಲ್ ಹುತಾತ್ಮ ಯೋಧ ಕ್ಯಾಪ್ಟನ್ ಮಂದೀಪ್ ಸಿಂಗ್ ಅವರ ಪುತ್ರಿಯಾಗಿರುವ ಕೌರ್ ಅವರು ದೆಹಲಿ ವಿಷವಿದ್ಯಾಲಯದ ರಾಮಜಾಸ್ ಕಾಲೇಜಿನಲ್ಲಿ ಆರ್ ಎಸ್ ಎಸ್ ವಿದ್ಯಾರ್ಥಿ ಘಟಕದ ಸದಸ್ಯರು ಫೆಬ್ರವರಿ ೨೨ ರಂದು ಹಲ್ಲೆ ಮಾಡಿದ ಹಿನ್ನಲೆಯಲ್ಲಿ ಎಬಿವಿಪಿ ವಿರುದ್ಧ ಫೇಸ್ ಬುಕ್ ಮೂಲಕ ಅಭಿಯಾನ ಪ್ರಾರಂಭಿಸಿದ್ದರು.
"ನಾನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ. ನಾನು ಎಬಿವಿಪಿಗೆ ಹೆದರುವುದಿಲ್ಲ. ನಾನೊಬ್ಬಳೇ ಅಲ್ಲ. ಭಾರತದ ಪ್ರತಿ ವಿದ್ಯಾರ್ಥಿ ನನ್ನೊಟ್ಟಿಗಿದ್ದಾರೆ" ಎಂದು ಬರೆದಿದ್ದರು. ಇದಕ್ಕೆ #ಸ್ಟೂಡೆಂಟ್ಸ್ ಎಗೇನ್ಸ್ಟ್ ಎಬಿವಿಪಿ ಎಂಬ ಹ್ಯಾಶ್ ಟ್ಯಾಗ್ ಕೂಡ ಸೇರಿಸಿದ್ದರು. ಇದಕ್ಕೆ ಎಬಿವಿಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com