ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ಬೇಡಿಕೆ ಭಾರತದ ಶಕ್ತಿ: ಪ್ರಧಾನಿ ಮೋದಿ

ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯೇ ಭಾರತದ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on
ಗಾಂಧಿನಗರ: ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯೇ ಭಾರತದ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಗುಜರಾತ್ ನ ಗಾಂಧಿನಗರದಲ್ಲಿ ವೈಬ್ರೆಂಟ್ ಗುಜರಾತ್ ಶೃಂಗ ಸಮ್ಮೇಳನದ 8ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಮೋದಿ, ಪ್ರಜಾಪ್ರಭುತ್ವ ಭಾರತದ ಅತಿ ದೊಡ್ಡ ಶಕ್ತಿ. ಕೆಲವರು ಹೇಳುತ್ತಾರೆ, ಪ್ರಜಾಪ್ರಭುತ್ವ ದೇಶದಲ್ಲಿ ಪರಿಣಾಮಕಾರಿ ಹಾಗೂ ತ್ವರಿತ ಆಡಳಿತ ನೀಡಲು ಸಾಧ್ಯವಿಲ್ಲ ಎಂದು. ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಅದು ಸಾಧ್ಯವಾಗಿದ್ದು, ಶೀಘ್ರ ಫಲಿತಾಂಶ ಸಹ ಸಿಕ್ಕಿದೆ ಎಂದರು.
ಮೇಕ್ ಇನ್ ಇಂಡಿಯಾವು ಈಗ ಭಾರತದ ಅತಿದೊಡ್ಡ ಬ್ರ್ಯಾಂಡ್ ಆಗಿದ್ದು, ಭಾರತವು ವಿಶ್ವದಲ್ಲಿ 6ನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಅಲ್ಲದೆ ಆಟೋ ಕೈಗಾರಿಕೆಯ ಮಾರಾಟ ಹಾಗೂ ಉತ್ಪಾದನೆ ದೃಷ್ಟಿಯಿಂದಲೂ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. 2014-15ರಲ್ಲಿ ಜಾಗತಿಕ ಆರ್ಥಿಕತೆಗೆ ಭಾರತ ಶೇ 12.4ರಷ್ಟು ಕೊಡುಗೆ ನೀಡಿದೆ. ವಿದೇಶಿ ಬಂಡವಾಳ ಅತಿ ಹೆಚ್ಚು ಹರಿದುಬರುತ್ತಿರುವ ಹತ್ತು ದೇಶಗಳಲ್ಲಿ ಭಾರತವೂ ಒಂದು ಎಂದರು.
ನಮ್ಮ ಸರ್ಕಾರ ಭಾರತೀಯ ಆರ್ಥಿಕತೆಯ ಸುಧಾರಣೆ ಮುಂದುವರೆಸಲು ಕಟಿ ಬದ್ಧವಾಗಿದ್ದು, ವ್ಯವಹಾರವನ್ನು ಸರಳಗೊಳಿಸಲು ಸರ್ಕಾರ ಅತ್ಯಂತ ಹೆಚ್ಚಿನ ಒತ್ತು ನೀಡುತ್ತಿದೆ. ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ನಾವು ಹೆಚ್ಚು ಆಸಕ್ತಿ ಹೊಂದಿದ್ದೇವೆ. ಇದಕ್ಕೆ ಪ್ರವಾಸೋದ್ಯಮ ಮೂಲ ಸವಲತ್ತುಗಳ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.
ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಅವರ ನೆಲವಾಗಿರುವ ಗುಜರಾತ್ ವ್ಯವಹಾರದ ಭೂಮಿ ಕೂಡಾ ಆಗಿದೆ ಎಂದು ಮೋದಿ ನುಡಿದರು.
ಭಾರತ ಮತ್ತು ಇತರ ರಾಷ್ಟ್ರಗಳ ಉನ್ನತ ಕೈಗಾರಿಕೋದ್ಯಮಿಗಳು, ಜಾಗತಿಕ ನಾಯಕರು, ನೊಬೆಲ್ ಪ್ರಶಸ್ತಿ ವಿಜೇತರು ನಾಲ್ಕು ದಿನಗಳ ವೈಬ್ರೆಂಟ್ ಗುಜರಾತ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಗಾಂಧಿನಗರದ ಮಹಾತ್ಮ ಮಂದಿರ ಸಮಾವೇಶ ಸಭಾಂಗಣದಲ್ಲಿ ನಡೆಯುತ್ತಿರುವ ಶೃಂಗ ಸಮ್ಮೇಳನ 2003ರಲ್ಲಿ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆರಂಭಗೊಂಡಿತ್ತು. 2015ರಲ್ಲಿ 25 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯ ಪ್ರಸ್ತಾಪಗಳು ಬಂದಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com