ಚೆನ್ನೈ: ಪ್ರಾಣಿಗಳಿಗಳ ನೈತಿಕ ಉಪಚಾರಕ್ಕಾಗಿ ಜನ (ಪೇಟ) ಸಂಸ್ಥೆ ರಾಷ್ಟ್ರ ವಿರೋಧಿಯಾಗಿದ್ದು ಅದನ್ನು ನಿಷೇಧಿಸುವಂತೆ ಸೋಮವಾರ ಕೇಂದ್ರ ಸರ್ಕಾರಕ್ಕೆ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಹಾಗು ತಮಿಳುನಾಡು ವಿಧಾನಸಭೆಯ ವಿರೋಧಪಕ್ಷ ಅಧ್ಯಕ್ಷ ಎಂ ಕೆ ಸ್ಟಾಲಿನ್ ಆಗ್ರಹಿಸಿದ್ದಾರೆ.
ಹಾಗೆಯೇ ಸದರಿ ಪ್ರಾಣಿ ಕಲ್ಯಾಣ ಸಮಿತಿಯನ್ನು ವಿಸರ್ಜನೆ ಮಾಡಿ ತಮಿಳುನಾಡಿನ ಪ್ರತಿನಿಧಿಗಳನ್ನು ಹೊಂದಿರುವ ಹೊಸ ತಂಡವನ್ನು ರಚಿಸುವಂತೆ ಕೂಡ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
"ಆಗ ಮಾತ್ರ ಪಾರಂಪರಿಕ ಕ್ರೀಡೆಗಳಾದ ಜಲ್ಲಿಕಟ್ಟು ಪ್ರಾಣಿಗಳಿಗೆ ಹಿಂಸೆ ನೀಡುವುದಿಲ್ಲ ಬದಲಾಗಿ ಮನುಷ್ಯ ಮತ್ತು ಪ್ರಾಣಿಗಳ ಸಾಂಸ್ಕೃತಿಕ ಸಂಬಂಧದ ಮಹತ್ವವನ್ನು ಎತ್ತಿ ಹಿಡಿಯುತ್ತದೆ ಎಂದು ಅರ್ಥವಾಗುವುದು" ಎಂದು ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಆಧಾರದ ಮೇಲೆ, ಸುರಕ್ಷಿತ ಕ್ರಮಗಳೊಂದಿಗೆ ಜಲ್ಲಿಕಟ್ಟು ರೀತಿಯ ಕ್ರೀಡೆಗಳನ್ನು ಆಯೋಜಿಸುವುದಕ್ಕೆ ಸುಪ್ರೀಂ ಕೋರ್ಟ್ ನ ಅನುಮತಿಯನ್ನು ಪಡೆಯಬಹುದು ಎಂದು ಕೂಡ ಸ್ಟಾಲಿನ್ ಹೇಳಿದ್ದಾರೆ.
ಹಾಗೆಯೇ ಸರ್ಕಾರೇತರ ಸಂಸ್ಥೆಗಳಾದ (ಎನ್ ಜಿ ಒ) ಪೇಟ ರೀತಿಯ ಸಂಸ್ಥೆಗಳನ್ನು ಕೂಡ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿರುವ ಅವರು ಆ ಸಂಸ್ಥೆಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ವಿರುದ್ಧ ಕೆಲಸ ಮಾಡುತ್ತಿದ್ದು ದೇಶ ವಿರೋಧಿ ಸಂಸ್ಥೆಗಳಾಗಿವೆ ಎಂದಿದ್ದಾರೆ.
ಭಾರತೀಯ ಸಾಂಸ್ಕೃತಿಕ ಆಚರಣೆಗಳನ್ನು ಅರ್ಥ ಮಾಡಿಕೊಳ್ಳದ ವಿದೇಶಿ ಸಂಸ್ಥೆಗಳಿಗೆ ಇಲ್ಲಿ ಕೆಲಸ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದು ಎಂದು ಕೂಡ ಸ್ಟಾಲಿನ್ ಹೇಳಿದ್ದಾರೆ.
ಹೋರಿ ಪಳಗಿಸುವ ಸ್ಪರ್ಧೆಯಾದ ಜಲ್ಲಿಕಟ್ಟು ನಿಷೇಧಿಸುವಲ್ಲಿ ಪೇಟ ಮುಂಚೂಣಿಯಲ್ಲಿ ಕೆಲಸ ಮಾಡಿದೆ.