ತಮಿಳರ ಒತ್ತಾಯಕ್ಕೆ ಮಣಿದ ಕೇಂದ್ರ, ಜಲ್ಲಿಕಟ್ಟು ಸುಗ್ರೀವಾಜ್ಞೆಗೆ ಕಾನೂನು ಇಲಾಖೆ ಅಸ್ತು

ಕಡೆಗೂ ತಮಿಳುನಾಡಿನ ಜನರ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ವಿವಾದಿತ ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗಾಗಿ ಸುಗ್ರೀವಾಜ್ಞೆಗೆ....
ಮರೀನಾ ಬೀಚ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನ
ಮರೀನಾ ಬೀಚ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನ
ನವದೆಹಲಿ: ಕಡೆಗೂ ತಮಿಳುನಾಡಿನ ಜನರ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ವಿವಾದಿತ ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗಾಗಿ ಸುಗ್ರೀವಾಜ್ಞೆಗೆ ಹೊರಡಿಸಲು ಶುಕ್ರವಾರ ಕಾನೂನು ಸಚಿವಾಲಯ ಒಪ್ಪಿಗೆ ಸೂಚಿಸಿದ್ದು, ರಾಷ್ಟ್ರಪತಿಗಳ ಸಹಿಗೆ ಕಳುಹಿಸಲಾಗಿದೆ.
ಅಟರ್ನಿ ಜನರಲ್ ಮುಕುಲ್ ರೋಹ್ಟಗಿ ಸಲಹೆ ನಂತರ ತಮಿಳುನಾಡು ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಯ ಕರಡು ಪ್ರತಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಯೊಂದಿಗೆ ಕಾನೂನು ಸಚಿವಾಲಯ ಅನುಮೋದನೆ ನೀಡಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಳುಹಿಸಿದೆ. ಇದರೊಂದಿಗೆ ಕಳೆದ ನಾಲ್ಕು ದಿನಗಳಿಂದ ಜಲ್ಲಿಕಟ್ಟುಗಾಗಿ ನಡೆಯುತ್ತಿದ್ದ ತಮಿಳರ ಪ್ರತಿಭಟನೆಗೆ ಜಯ ಸಿಕ್ಕಂತಾಗಿದೆ.
ಸುಪ್ರೀಂ ಕೋರ್ಟ್ ನಿಂದ ನಿಷೇಧಕ್ಕೊಳಗಾಗಿರುವ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ರಕ್ಷಣೆಗೆ ತಮಿಳುನಾಡು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಪನ್ನೀರ್ ಸೆಲ್ವಂ ಅವರು ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಾಯಿಸಿದ್ದರು.
ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಒತ್ತಾಯಿಸಿ ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಇಂದು ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಸೇರಿದಂತೆ ತಮಿಳು ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com