ಖೋಟಾ ನೋಟುಗಳು ಎಲ್ಲಿ? ಆರ್ ಟಿ ಐ ಪ್ರಶ್ನೆಗೆ ಆರ್ ಬಿ ಐ ಗಲಿಬಿಲಿ

ನವೆಂಬರ್ ೮ ರ ನೋಟು ಹಿಂಪಡೆತ ನಿರ್ಧಾರದ ನಂತರ, ಪತ್ತೆ ಹಚ್ಚಿದ ಖೋಟಾ ನೋಟುಗಳ ಮೌಲ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವುದಾಗಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ನವೆಂಬರ್ ೮ ರ ನೋಟು ಹಿಂಪಡೆತ ನಿರ್ಧಾರದ ನಂತರ, ಪತ್ತೆ ಹಚ್ಚಿದ ಖೋಟಾ ನೋಟುಗಳ ಮೌಲ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವುದಾಗಿ ಆರ್ ಟಿ ಐ ಅರ್ಜಿ ಬಹಿರಂಗಪಡಿಸಿದೆ. 
"ಸದ್ಯಕ್ಕೆ ಈ ಪ್ರಶ್ನೆಗೆ ನಮ್ಮ ಬಳಿ ಯಾವುದೇ ಅಧಿಕೃತ ಮಾಹಿತಿ ಇಲ್ಲ" ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಈ ಪ್ರಶ್ನೆಗೆ ಆರ್ ಬಿ ಐ ನ ನೋಟು ವ್ಯವಸ್ಥಾಪಕ ವಿಭಾಗ (ನಕಲಿ ನೋಟುಗಳ ಕಣ್ಗಾವಲು ಪಡೆ) ತಿಳಿಸಿದೆ. ಹಿರಿಯ ಕಾರ್ಯಕರ್ತ ಅನಿಲ್ ವಿ ಗಲಗಲಿ ಈ ಅರ್ಜಿ ಸಲ್ಲಿಸಿದ್ದರು. 
ನವೆಂಬರ್ ೮ ರ ನೋಟು ಹಿಂಪಡೆತ ನಿರ್ಧಾರದ ನಂತರ, ಪತ್ತೆ ಹಚ್ಚಿದ ಖೋಟಾ ನೋಟುಗಳ ಮೌಲ್ಯ, ಯಾವ ಬ್ಯಾಂಕ್ ನಲ್ಲಿ ಪತ್ತೆ ಆಯಿತು, ದಿನಾಂಕಗಳ ಮಾಹಿತಿ ನೀಡಲು ಗಲಗಲಿ ಕೋರಿದ್ದರು. 
"ಆದರೆ, ಈಗ ೧೧ ವಾರಗಳ ನಂತರ, ಈ ಪ್ರಮುಖ ಸಂಗತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಆರ್ ಬಿ ಐ ತಿಳಿಸಿದೆ. ಆದುದರಿಂದ ನಕಲಿ ನೋಟುಗಳನ್ನು ನಿರ್ನಾಮ ಮಾಡಲು ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುತ್ತಿದ್ದೇವೆ ಎಂದು ಸರ್ಕಾರ ಹೇಳಿದ್ದು ಪೊಳ್ಳು ಎಂದು ಸಾಬೀತಾಗುತ್ತಿದೆ" ಎಂದು ಕೂಡ ಗಲಗಲಿ ಹೇಳಿದ್ದಾರೆ. 
ನೋಟು ಹಿಂಪಡೆತ ನಿರ್ಧಾರ ಖೋಟಾ ನೋಟುಗಳಿಗೆ ತಡೆ ಹಾಕಿ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಅವರು ಉಲ್ಲೇಖಿಸಿದ್ದಾರೆ. 
"ಈಗ ಆರ್ ಬಿ ಐ ಪ್ರತಿಕ್ರಿಯೆ ಸರ್ಕಾರ ತನ್ನ ಗುರಿಯಲ್ಲಿ ಸೋತಿರುವುದನ್ನು ತಿಳಿಸುತ್ತದೆ, ಈಗ ವಶಪಡಿಸಿಕೊಂಡಿರುವ ನಕಲಿ ನೋಟುಗಳ ಮೌಲ್ಯವನ್ನು ಪ್ರಧಾನಿಯವರೇ ತಿಳಿಸಬೇಕಿದೆ" ಎಂದು ಗಲಗಲಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com