ಕಂಬಳಕ್ಕೆ ಪ್ರತ್ಯೇಕ ಕಾನೂನು ತರಲು ಚಿಂತನೆ: ಜಯಚಂದ್ರ

ಕಂಬಳ ಕ್ರೀಡೆಗಾಗಿ ರಾಜ್ಯ ಸರಕಾರ ಪ್ರತ್ಯೇಕ ಕಾನೂನು ತರಲು ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಬುಧವಾರ ಹೇಳಿದ್ದಾರೆ.
ಟಿಬಿ ಜಯಚಂದ್ರ
ಟಿಬಿ ಜಯಚಂದ್ರ
ಬೆಂಗಳೂರು: ಕಂಬಳ ಕ್ರೀಡೆಗಾಗಿ ರಾಜ್ಯ ಸರಕಾರ ಪ್ರತ್ಯೇಕ ಕಾನೂನು ತರಲು ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಬುಧವಾರ ಹೇಳಿದ್ದಾರೆ.
ನಿಷೇಧಿತ ಕಂಬಳ ಆಚರಣೆಯನ್ನು ಕಾನೂನು ಬದ್ಧಗೊಳಿಸುವ ಸಂಬಂಧ ಇಂದು ವಿಧಾನಸೌಧದಲ್ಲಿ ನಡೆದ ಮಹತ್ವದ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಯಚಂದ್ರ ಅವರು, ಕಂಬಳಕ್ಕೆ ಕಾನೂನಿನ ಮಾನ್ಯತೆ ನೀಡಲು ಫೆಬ್ರವರಿ 6ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ವಿಧೇಯಕ ಮಂಡಿಸುವ ಚಿಂತನೆ ಇದ್ದು, ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಪಶುಸಂಗೋಪನಾ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಇಲಾಖೆ ಸಲ್ಲಿಸುವ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕಂಬಳ ಗ್ರಾಮೀಣ ಕ್ರೀಡೆಯಾಗಿದ್ದು ಇದರಲ್ಲಿ ಪ್ರಾಣಿ ಹಿಂಸೆ ಇರುವುದಿಲ್ಲ, ಸಾಮಾಜಿಕ ಮತ್ತು ಧಾರ್ಮಿಕ ಭಾವನೆಗಳು ಈ ಕ್ರೀಡೆ ಜೊತೆ ತಳುಕು ಹಾಕಿಕೊಂಡಿವೆ. ಜತೆಗೆ ಪ್ರಾಣಿಗಳಿಗೆ ತೊಂದರೆಯಾಗದಂತೆ ಕಂಬಳ ನಡೆಸಲು ಸರ್ಕಾರ ಈ ಹಿಂದೆಯೇ ಅನುಮತಿ ನೀಡಿತ್ತು ಎಂದರು.
ಕಂಬಳಕ್ಕೆ ಮಾನ್ಯತೆ ನೀಡುವ ಕಾನೂನು ತರಲು ಸರ್ಕಾರ ನಿರ್ಧರಿಸಿದ್ದು, ಪ್ರಾಣಿ ಹಿಂಸೆ ತಡೆ ಕಾನೂನು ಅಡಿ ತಿದ್ದುಪಡಿ ತರುವ ಮೂಲಕ ಕಂಬಳದ ಜೊತೆ ಎತ್ತಿನ ಗಾಡಿ ಸ್ಪರ್ಧೆಗೂ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. 
ಸಭೆಯಲ್ಲಿ ಕಾನೂನು ಇಲಾಖೆಯ ತಜ್ಞರು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸೇರಿದಂತೆ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com