ಜಮ್ಮು: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ವಾಹನ ಚಾಲನೆ ಪ್ರಾರಂಭವಾದ ಬಳಿಕ, ಚಳಿಗಾಲದ ರಾಜಧಾನಿ ಜಮ್ಮುವಿನಿಂದ ೪೪೭೭ ಯಾತ್ರಾರ್ಥಿಗಳ ಹೊಸ ತಂಡ ಶನಿವಾರ ಅಮರನಾಥ ಯಾತ್ರೆಗೆ ಹೊರಟಿದೆ.
"೩೨೯೮ ಪುರುಷರು, ೯೮೬ ಮಹಿಳೆಯರು ಮತ್ತು ೧೯೩ ಸಾಧುಗಳನ್ನು ಒಳಗೊಂಡಿರುವ ಯಾತ್ರಿಗಳ ತಂಡ ೧೩೬ ವಾಹನಗಳಲ್ಲಿ ಭಗವತಿ ನಗರ್ ಯಾತ್ರಿ ನಿವಾಸ್ ನಿಂದ ಹೊರಟಿತು ಮತ್ತು ಇವುಗಳಿಗೆ ಭದ್ರತಾ ಪಡೆಗಳು ರಕ್ಷಣೆ ಒದಗಿಸಿದ್ದವು" ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಯಾತ್ರಾರ್ಥಿಗಳನ್ನು ಹೊತ್ತ ವಾಹನಗಳು ಬೆಳಗ್ಗೆ ೪:೧೫ ಕ್ಕೆ ಯಾತ್ರಿ ನಿವಾಸ್ ನಿಂದ ಹೊರಟಿವೆ. ಸಂಜೆ ೩:೩೦ ರ ನಂತರ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಜವಾಹರ್ ಸುರಂಗ ಮಾರ್ಗವನ್ನು ಭದ್ರತಾ ಕಾರಣಗಳಿಂದ ಬಂದ್ ಮಾಡಲಾಗುತ್ತದೆ.
ನೆನ್ನೆ ರಾಂಬಾನ್ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಹೈವೇ ಮುಚ್ಚಲಾಗಿತ್ತಾದ್ದರಿಂದ ಯಾವುದೇ ಯಾತ್ರಾರ್ಥಿಗೆ ಕಣಿವೆಯಲ್ಲಿ ಅಡ್ಡಾಡಲು ಅವಕಾಶ ನೀಡಿರಲಿಲ್ಲ.
ಜೂನ್ ೨೯ ರಂದು ಪ್ರಾರಂಭವಾಗಿರುವ ಈ ೪೦ ದಿನಗಳ ಯಾತ್ರೆ ಶ್ರಾವಣ ಪೂರ್ಣಿಮೆ ದಿನವಾದ ಆಗಸ್ಟ್ ೭ಕ್ಕೆ ಅಂತ್ಯಗೊಳ್ಳಲಿದೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭೂಮಟ್ಟಕಿಂತ ೧೪,೦೦೦ ಅಡಿ ಎತ್ತರದಲ್ಲಿರುವ ಹಿಮಾಲಯದ ಗುಹಾಂತರ ದೇವಾಲಯದ ಹಿಮಲಿಂಗ ದರ್ಶನವನ್ನು ಈಗಾಗಲೇ ೧೦,೦೦೦ಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಡೆದಿದ್ದಾರೆ.