ಹಿರಿಯ ಅಧಿಕಾರಿ ವಿರುದ್ಧ ಕಿರುಕುಳ ಆರೋಪ ಮಾಡಿದ್ದ ಯೋಧ ನಿಗೂಢ ಸಾವು

ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕಿರುಕುಳ ಆರೋಪ ಮಾಡಿದ್ದ ಕೇರಳದ ಕರುವೆಲಿಲ್ ನ ಸೇನಾ ಅಧಿಕಾರಿಯೊಬ್ಬರು ಗುರುವಾರ...
ರೋಯ್ ಮ್ಯಾಥ್ಯೂ
ರೋಯ್ ಮ್ಯಾಥ್ಯೂ
ಕೊಲ್ಲಂ: ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕಿರುಕುಳ ಆರೋಪ ಮಾಡಿದ್ದ ಕೇರಳದ ಕರುವೆಲಿಲ್ ನ ಸೇನಾ ಅಧಿಕಾರಿಯೊಬ್ಬರು ಗುರುವಾರ ಮಹಾರಾಷ್ಟ್ರದ ನಾಸಿಕ್‍ನಲ್ಲಿರುವ ಕ್ಯಾಂಪ್‍ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ನಾಸಿಕ್ ನ 214ನೇ ಆರ್ ಕೆಟಿ ರೆಜಿಮೆಂಟ್ ನಲ್ಲಿ ಗನ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದ 33 ವರ್ಷದ ಯೋಧ ರೋಯ್ ಮ್ಯಾಥ್ಯೂ ಅವರು ಕಳೆದ ಫೆ.25ರಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಆದರೆ ನಿನ್ನೆ ಕ್ಯಾಂಪ್ ಬಳಿ ರೋಯ್ ಶವ ಪತ್ತೆಯಾಗಿರುವುದಾಗಿ ರೆಜಿಮೆಂಟ್ ನ ಕಮಾಂಡಿಂಗ್ ಅಧಿಕಾರಿ ತಳಿಸಿರುವುದಾಗಿ ಯೋಧನ ಕುಟುಂಬ ತಿಳಿಸಿದೆ.
ಇಂದು ಬೆಳಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ಕಮಾಂಡಿಂಗ್ ಅಧಿಕಾರಿ ತಮಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ ಎಂದು ರೋಯ್ ಸಹೋದರ ಜಾನ್ ಅವರು ಹೇಳಿದ್ದಾರೆ.
ಕಳೆದ 12 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ರೋಯ್ , ಕೆಲವು ದಿನಗಳ ಹಿಂದೆಯಷ್ಟೇ ವಾಹಿನಿಯೊಂದರ ಸಂದರ್ಶನದಲ್ಲಿ ಹಿರಿಯ ಅಧಿಕಾರಿಯ ವಿರುದ್ಧ ಕಿರುಕುಳ ಆರೋಪ ಮಾಡಿದ್ದರು.
ಈ ಮಧ್ಯೆ, ರೋಯ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಯೋಧನ ಕುಟುಂಬದವರು ಒತ್ತಾಯಿಸಿದ್ದಾರೆ.
ನಾಸಿಕ್ ಶಿಬಿರದಲ್ಲಿ ಹಿರಿಯ ಅಧಿಕಾರಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರೋಯ್ ಅಲ್ಲಿನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದರು. ಇದಾದ ನಂತರ ಸೋಮವಾರ ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ತನ್ನ ಪತ್ನಿಗೆ ಕರೆ ಮಾಡಿ ತಾನು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಕರೆ ಮಾಡಿದ ಮರುದಿನ ಅವರು ನಾಪತ್ತೆಯಾಗಿದ್ದರು ಎಂದು ರಾಯ್ ಅವರ ಕುಟುಂಬ ಆರೋಪಿಸಿದೆ.
ಸೋಮವಾರ ಮರಾಠಿ ವಾಹಿನಿಯೊಂದರಲ್ಲಿ ಯೋಧನ ಸಂದರ್ಶನ ಪ್ರಸಾರವಾಗಿತ್ತು. ಹಿರಿಯ ಅಧಿಕಾರಿ ವಿರುದ್ಧ ಆರೋಪ ಮಾಡಿರುವ ಯೋಧನ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ವಾಹಿನಿ ಹೇಳಿತ್ತು. ಆದರೆ ಹಿರಿಯ ಅಧಿಕಾರಿಗಳಿಗೆ ಆ ಸಂದರ್ಶನ ನೀಡಿದ್ದು ರೋಯ್ ಎಂಬುದು ಗೊತ್ತಾಗಿದೆ. ಆನಂತರ ಫೋನ್ ಮಾಡಿದರೆ ಫೋನ್‍ ಸಂಪರ್ಕಕ್ಕೆ ಸಿಗಲಿಲ್ಲ ಎಂದು ರೋಯ್ ಅವರ ಪತ್ನಿ ಫಿನಿ ಮ್ಯಾಥ್ಯೂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com