ಈಗ ಎಐಎಡಿಎಂಕೆ ಚಿಹ್ನೆಗಾಗಿ ಕಾದಾಟ: ಚುನಾವಣಾ ಆಯೋಗಕ್ಕೆ ಪನ್ನೀರ್ ಸೆಲ್ವಂ ಭೇಟಿ

ಮುಖ್ಯಮಂತ್ರಿ ಕುರ್ಚಿಗಾಗಿ ಹೋರಾಟ ನಡೆಸಿ ವಿಫಲರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರು...
ಓ ಪನ್ನೀರ್ ಸೆಲ್ವಂ
ಓ ಪನ್ನೀರ್ ಸೆಲ್ವಂ
ನವದೆಹಲಿ: ಮುಖ್ಯಮಂತ್ರಿ ಕುರ್ಚಿಗಾಗಿ ಹೋರಾಟ ನಡೆಸಿ ವಿಫಲರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರು ಈಗ ಎಐಎಡಿಎಂಕೆ ಪಕ್ಷದ 'ಎರಡೆಲೆ' ಚಿಹ್ನೆಗಾಗಿ ಕಾದಾಟ ಆರಂಭಿಸಿದ್ದಾರೆ.
ಈ ಸಂಬಂಧ ಇಂದು ಒಂಬತ್ತು ಸದಸ್ಯರ ನಿಯೋಗದೊಂದಿಗೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ, ವಿ.ಕೆ.ಶಶಿಕಲಾ ಕಾನೂನು ಬಾಹಿರವಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹೊಸದಾಗಿ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ.
ನಮ್ಮ ಪಕ್ಷದ ಬೈಲಾ ಪ್ರಕಾರ, ಶಶಿಕಲಾ ಅವರಿಗೆ ಪಕ್ಷದ ಸದಸ್ಯರನ್ನು ನೇಮಕ ಮಾಡುವ ಮತ್ತು ಉಚ್ಚಾಟಿಸುವ ಅಧಿಕಾರ ಇಲ್ಲ. ಸ್ವತಃ ಅವರೇ ಪಕ್ಷದಿಂದ ಐದು ವರ್ಷಗಳ ಕಾಲ ಉಚ್ಚಾಟನೆಯಾಗಿದ್ದಾರೆ. ಹೀಗಾಗಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಲು ಹೇಗೆ ಸಾಧ್ಯ? ನಮ್ಮ ಪಕ್ಷದ ಸಂವಿಧಾನದ ಪ್ರಕಾರ, ಒಂದು ವೇಳೆ ಪ್ರಧಾನ ಕಾರ್ಯದರ್ಶಿ ಹುದ್ದೆ ಖಾಲಿ ಉಳಿದರೆ, ಅವರ ನಂತರದ ಹಿರಿಯ ವ್ಯಕ್ತಿಯನ್ನು ಆ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಎಂದು ಪನ್ನೀರ್ ಸೆಲ್ವಂ ವಾದಿಸಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾದ ಆರ್ ಕೆ ನಗರ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಎಐಎಡಿಎಂಕೆಯಿಂದ ಶಶಿಕಲಾ ಸಂಬಂಧಿ ಟಿಟಿವಿ ಧಿನಕರನ್ ಅವರನ್ನು ಕಣಕ್ಕಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಅವರು ಇಂದು ಆಯೋಗಕ್ಕೆ ಭೇಟಿ ನೀಡಿ, ಪಕ್ಷದ ಚಿಹ್ನೆ ತಮಗೆ ನೀಡುವಂತೆ ಕೇಳಿಕೊಂಡಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ಜೈಲು ಸೇರುವ ಮುನ್ನ ಧಿನಕರನ್ ಅವರನ್ನು ಪಕ್ಷದ ಉಪ ಪ್ರಧಾನಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com