ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ನಿರತ ಮಹಿಳೆಯರು
ಪ್ರಧಾನ ಸುದ್ದಿ
ಸಿಎಂ ಸಂಧಾನ ಸಭೆ ಯಶಸ್ವಿ, ಆಹೋರಾತ್ರಿ ಧರಣಿ ಹಿಂಪಡೆದ ಅಂಗನವಾಡಿ ಕಾರ್ಯಕರ್ತೆಯರು
ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಫ್ರೀಡಂ....
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಫ್ರೀಡಂ ಪಾರ್ಕ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಆಹೋರಾತ್ರಿ ಧರಣಿಯನ್ನು ಹಿಂಪಡೆಯಲಾಗಿದೆ.
ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಮತ್ತು ಈ ಸಂಬಂಧ ಏಪ್ರಿಲ್ 10ರಂದು ಸಭೆ ನಡೆಸುವುದಾಗಿ ಸಿಎಂ ತಿಳಿಸಿದ್ದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿರುವುದಾಗಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ಅವರು ತಿಳಿಸಿದ್ದಾರೆ.
ಸಿಎಂ ಜೊತೆ ಇಂದು ಸುಮಾರು 2 ಗಂಟೆಗಳ ಕಾಲ ನಾವು ಸಭೆ ನಡೆಸಿದ್ದು, ಈ ವೇಳೆ ನಮಗೆ ನೀಡುವ ಗೌರವಧನ ಹೆಚ್ಚಳ ಮಾಡುವುದಾಗಿ ಹಾಗೂ ಮಾತು ತಪ್ಪುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಭರವಸೆ ಈಡೇರಿಸದಿದ್ದರೆ ಮುಖ್ಯಮಂತ್ರಿಗಳ ಮನಗೆ ಮುತ್ತಿಗೆ ಹಾಕುವುದಾಗಿ ವರಲಕ್ಷ್ಮೀ ಎಚ್ಚರಿಸಿದ್ದಾರೆ.
ಕನಿಷ್ಠ ಮೂಲವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಕಳೆದ ಸೋಮವಾರದಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸರಿಯಾಗಿ ಸ್ಪಂದಿಸಿರಲಿಲ್ಲ. ಬಿಸಿಲಿನಿ ತಾಪ ಲೆಕ್ಕಿಸದೆ ಸಾವಿರಾರು ಮಹಿಳೆಯರು ಪುಟ್ಟ ಮಕ್ಕಳೊಂದಿಗೆ ನಡು ರಸ್ತೆಯಲ್ಲಿ ರಾತ್ರಿ ಕಳೆಯುತ್ತಾ ಹೋರಾಟ ಮುಂದುವರೆಸಿದ್ದರಿಂದ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಪೊಲೀಸರ ಮೂಲಕ ವರಲಕ್ಷ್ಮೀ ಹಾಗೂ ಇತರೆ ಕೆಲವು ಅಂಗನವಾಡಿ ಕಾರ್ಯಕರ್ತರನ್ನು ತಮ್ಮ ಗೃಹ ಕಚೇರಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿದರು. ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಈಗಲೇ ಭರವಸೆ ಈಡೇರಿಸಲು ಸಾಧ್ಯವಿಲ್ಲ. ಏಪ್ರಿಲ್ 10ರಂದು ಸಭೆ ನಡೆಸಿ ಖಂಡಿತ ಭರವಸೆ ಈಡೇರಿಸುವುದಾಗಿ ಮನವೊಲಿಸಿದ್ದಾರೆ.

