ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿಲ್ಲ: ಖರ್ಗೆ

ಕನಿಷ್ಠ ಮೂಲವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ....
ಮಲ್ಲಿಕಾರ್ಜುನ್ ಖರ್ಗೆ (ಸಂಗ್ರಹ ಚಿತ್ರ)
ಮಲ್ಲಿಕಾರ್ಜುನ್ ಖರ್ಗೆ (ಸಂಗ್ರಹ ಚಿತ್ರ)
ನವದೆಹಲಿ: ಕನಿಷ್ಠ ಮೂಲವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿದ್ದು, ಕಾರ್ಯಕರ್ತರ ಗೌರವಧನ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಗುರುವಾರ ಆರೋಪಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಆಹೋರಾತ್ರಿ ಧರಣಿಯನ್ನು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, ಕೇಂದ್ರ ಸರ್ಕಾರ ಬಡವರ ಎಲ್ಲಾ ಕಾರ್ಯಕ್ರಮಗಳಿಗೂ ಹಣ ಕಡಿಮೆ ಮಾಡುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಹಿಂದೆ 90:10 ಅನುಪಾತದಲ್ಲಿ ಗೌರವಧನ ನೀಡಲಾಗುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ಕೇವಲ 2 ಸಾವಿರ ರುಪಾಯಿ ಮಾತ್ರ ನೀಡುತ್ತಿದೆ. ಉಳಿದ 4 ಸಾವಿರ ರುಪಾಯಿಯನ್ನು ರಾಜ್ಯ ಸರ್ಕಾರವೇ ನೀಡಬೇಕಾಗಿದೆ ಎಂದರು.
ಇದು ಕೇಂದ್ರ ಸರ್ಕಾರ ಯೋಜನೆಯಾಗಿದ್ದು, ಈ ಹಿಂದಿನ 90:10 ಅನುಪಾತದಲ್ಲಿ ಕೇಂದ್ರ ಗೌರವಧನ ನೀಡಬೇಕು. ರಾಜ್ಯ ಸರ್ಕಾರದ ಬಳಿ ಹೆಚ್ಚು ಹಣವಿರುವುದಿಲ್ಲ ಎಂದು ಖರ್ಗೆ ಹೇಳಿದ್ದಾರೆ.
ಈ ಸಂಬಂಧ ನಾವು ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಮುಂದಾಗಿದ್ದೇವೆ. ಆದರೆ ಇದಕ್ಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಒಪ್ಪಲಿಲ್ಲ. ಕೇಂದ್ರ ಸರ್ಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸುವ ಮನಸ್ಸಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 1,24,144 ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇದ್ದಾರೆ ಎಂದು ಖರ್ಗೆ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com