ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ 25 ಬಾರಿ ಚಪ್ಪಲಿಯಿಂದ ಥಳಿಸಿದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ.
ಏರ್ ಇಂಡಿಯಾ ನೀಡಿದ ದೂರಿನ ಆಧಾರದ ಮೇಲೆ ನಾವು ಸಂಸದ ರವೀಂದ್ರ ಗಾಯಕ್ವಾಡ್ ಅವರ ವಿರುದ್ಧ ಐಪಿಸಿ ಸೆಕ್ಷನ್ 308, 355ರಡಿ ಕೇಸ್ ದಾಖಲಿಸಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡುವುದಾಗಿ ದೆಹಲಿ ಪೊಲೀಸ್ ವಕ್ತಾರ ದೀಪೇಂದ್ರ ಪಾಠಕ್ ಅವರು ತಿಳಿಸಿದ್ದಾರೆ.
ಈ ಮಧ್ಯೆ, ಏರ್ ಇಂಡಿಯಾ ದೂರಿಗೆ ಪ್ರತಿಯಾಗಿ ಸಂಸದ ಗಾಯಕ್ವಾಡ್ ಸಹ ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಏರ್ ಇಂಡಿಯಾ ಸಿಬ್ಬಂದಿ ನಾನು ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಹೊಂದಿದ್ದರೂ ಎಕೊನೊಮಿ ಕ್ಲಾಸ್ ನಲ್ಲಿ ಪ್ರಮಾಣ ಮಾಡುವಂತೆ ಮಾಡಿದ್ದಲ್ಲದೆ ನನ್ನನ್ನು ತಳ್ಳಿ, ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಸಂಸದನ ವರ್ತನೆಯನ್ನು ಖಂಡಿಸಿರುವ ಏರ್ ಇಂಡಿಯಾ ಸಿಬ್ಬಂದಿ ಆರ್ ಸುಕುಮಾರ್ ಅವರು, ಇದೊಂದು ಕ್ರೂರ ಹಿಂಸಾತ್ಮಕ ಪ್ರಕರಣವಾಗಿದ್ದು, ರವೀಂದ್ರ ಗಾಯಕ್ವಾಡ್ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ವ್ಯಕ್ತಿ ಮೇಲೆ ಹಲ್ಲೆ ನಡೆಸುವುದು ನನ್ನ ಜನ್ಮಸಿದ್ಧ ಹಕ್ಕು ಎನ್ನುವವರಿಗೆ ಪಾಠ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಗಾಯಕ್ವಾಡ್ ವಿರುದ್ಧ ತಿರುಗು ಬಿದ್ದಿರುವ ವಿಮಾನಯಾನ ಸಂಸ್ಥೆಗಳು, ಸಂಸದ ಇನ್ನು ಮುಂದೆ ಯಾವುದೇ ವಿಮಾನದಲ್ಲೂ ಪ್ರಯಾಣ ಮಾಡದಂತೆ ನಿಷೇಧ ಹೇರಿ ಆದೇಶ ಜಾರಿಗೆ ತಂದಿವೆ.
ದೇಶದ ವಿಮಾನಯಾನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಂಸದರೊಬ್ಬರನ್ನು ವಿಮಾನ ಪ್ರಯಾಣ ಮಾಡದಂತೆ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದ್ದು, ನಿನ್ನೆ ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿ ವಿವಾದಕ್ಕೀಡಾಗಿದ್ದ ಮಹಾರಾಷ್ಟ್ರದ ಒಸ್ಮಾನಾಬಾದ್ ನ ಶಿವಸೇನೆ ಪಕ್ಷದ ಸಂಸದ ರವೀಂದ್ರ ಗಾಯಕ್ವಾಡ್ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಆ ಮೂಲಕ ಸಂಸದ ರವೀಂದ್ರ ಗಾಯಕ್ವಾಡ್ ಇನ್ನು ಮುಂದೆ ದೇಶದಲ್ಲಿ ಯಾವುದೇ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸದಂತೆ ನಿಷೇಧ ಹೇರಲಾಗಿದೆ.