ಆಪ್ ಆಂತರಿಕ ಭಿನ್ನಮತ ಸ್ಫೋಟ: ಪಕ್ಷದಿಂದಲೇ ಪಿತೂರಿ ಎಂದ ಕುಮಾರ್ ವಿಶ್ವಾಸ್

ಸರಣಿ ಸೋಲಿನಿಂದ ಕಂಗೆಟ್ಟಿರುವ ಆಮ್ ಆದ್ಮಿ ಪಕ್ಷದಲ್ಲಿ ಇದೀಗ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಸಂಸ್ಥಾಪಕ ಸದಸ್ಯ....
ಮನಿಶ್ ಸಿಸೋಡಿಯಾ - ಕುಮಾರ್ ವಿಶ್ವಾಸ್
ಮನಿಶ್ ಸಿಸೋಡಿಯಾ - ಕುಮಾರ್ ವಿಶ್ವಾಸ್
Updated on
ನವದೆಹಲಿ: ಸರಣಿ ಸೋಲಿನಿಂದ ಕಂಗೆಟ್ಟಿರುವ ಆಮ್ ಆದ್ಮಿ ಪಕ್ಷದಲ್ಲಿ ಇದೀಗ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಸಂಸ್ಥಾಪಕ ಸದಸ್ಯ ಕುಮಾರ್ ವಿಶ್ವಾಸ್ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಮಾಧ್ಯಮಗಳ ಮುಂದೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕರೇ ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿರುವ ಕುಮಾರ್ ವಿಶ್ವಾಸ್ ಅವರು, ಶೀಘ್ರದಲ್ಲೇ ತಮ್ಮ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆಪ್ ನಾಯಕ, ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅಂತ ನನಗೆ ಗೊತ್ತು. ನನ್ನ ಗೌರವಕ್ಕೆ ಧಕ್ಕೆ ತರಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಮಾರ್ ವಿಶ್ವಾಸ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಜತೆ ಬಾಂಧವ್ಯ ಹೊಂದಿದ್ದು, ಪಕ್ಷದ ನಾಯಕರು ಇನ್ನೂ ಏಕೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆಪ್ ಶಾಸಕ ಅಮಾನತುಲ್ಲಾ ಖಾನ್ ಅವರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರ್ ವಿಶ್ವಾಸ್ ತಮ್ಮ ವಿರುದ್ಧದ ಸಂಚಿನಲ್ಲಿ ಅಮಾನತುಲ್ಲಾ ಖಾನ್ ಕೇವಲ ಮುಖವಾಡ ಅಷ್ಟೆ ಎಂದಿದ್ದಾರೆ.
ಅಮಾನತುಲ್ಲಾ ಖಾನ್, ಅರವಿಂದ್ ಕೇಜ್ರಿವಾಲ್ ಅಥವಾ ಮನಿಶ್ ಸಿಸೋಡಿಯಾ ವಿರುದ್ಧ ಈ ರೀತಿ ಹೇಳಿದ್ದರೆ 10 ನಿಮಿಷದಲ್ಲೇ ಪಕ್ಷದಿಂದ ಉಚ್ಚಾಟನೆಯಾಗುತ್ತಿದ್ದರು ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ.
ಇದೇ ವೇಳೆ ತಾವು ಆಮ್ ಆದ್ಮಿ ಪಕ್ಷದ ಸಂಚಾಲಕರಾಗಲು ಬಯಸಿದ್ದಾರೆ ಎಂಬುದನ್ನು ತಳ್ಳಿಹಾಕಿದ ಕುಮಾರ್ ವಿಶ್ವಾಸ್, 'ನಾನು ಈಗಾಗಲೇ ಅರವಿಂದ್ ಕೇಜ್ರಿವಾಲ್ ಮತ್ತು ಮನಿಶ್ ಸಿಸೋಡಿಯಾ ಅವರಿಗೆ 10 ಬಾರಿ ಹೇಳಿದ್ದೇನೆ. ನನಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಥವಾ ಸಂಚಾಲಕ ಹುದ್ದೆ ಬೇಡ'. ಅಲ್ಲದೆ ತಾವು ಯಾವುದೇ ಬೇರೆ ರಾಜಕೀಯ ಪಕ್ಷ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಕುಮಾರ್ ವಿಶ್ವಾಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮನಿಶ್ ಸಿಸೋಡಿಯಾ ಅವರು, ಅವರು ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಯಿಂದ ಪಕ್ಷದ ಕಾರ್ಯಕರ್ತರ ನೈತಿಕತೆ ಕುಗ್ಗುತ್ತಿದೆ. ಪಕ್ಷದಲ್ಲಿ ಅವರಿಗೇನಾದರೂ ಸಮಸ್ಯೆ ಇದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಿತ್ತು ಎಂದಿದ್ದಾರೆ.  
ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಮುಂದೆ ಹಾಜರಾಗುವಂತೆ ಕುಮಾರ್ ವಿಶ್ವಾಸ್ ಅವರಿಗೆ ಸೂಚಿಸಲಾಗಿತ್ತು. ಆದರೆ ಅವರು ಬರಲೇ ಇಲ್ಲ ಎಂದು ಸಿಸೋಡಿಯಾ ಟೀಕಿಸಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ಮ ಆದ್ಮಿ ಪಕ್ಷ ದಯನೀಯ ಸೋಲಿನ ಬಳಿಕ ಅರವಿಂದ ಕೇಜ್ರಿವಾಲ್ ಅವರನ್ನು ತೀಕ್ಷ್ಣವಾಗಿ ಟೀಕಿಸಿದ್ದ ಕುಮಾರ್ ವಿಶ್ವಾಸ್ ಅವರು ಪಕ್ಷ ತೊರೆಯಲಿದ್ದಾರೆಂಬ ವದಂತಿಗಳು ಕೇಳಿ ಬಂದಿತ್ತು. 
ಚುನಾವಣೆ ಸೋಲಿನ ಬಳಿಕ ಇವಿಎಂ ವಿರುದ್ಧ ಕೇಜ್ರಿವಾಲ್ ಅವರು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಕೇಜ್ರಿವಾಲ್ ವಿರುದ್ಧವೇ ಮಾತನಾಡಿದ್ದ ವಿಶ್ವಾಸ್ ಅವರು, ಕೇವಲ ಮತಯಂತ್ರವನ್ನು ಮಾತ್ರ ತಪ್ಪಿತಸ್ಥ ಎನ್ನಲು ಸಾಧ್ಯವಿಲ್ಲ. ಪಕ್ಷದ ಕಾರ್ಯನೀತಿಯಲ್ಲಿ, ಅಭ್ಯರ್ಥಿ ನಿಶ್ಚಯದಲ್ಲಿ ಆದ ಲೋಪಗಳ ಕುರಿತು ಅವಲೋಕನ ನಡೆಸಬೇಕಿದೆ. ಆಮ್ ಆದ್ಮಿ ಪಕ್ಷ ಮತ್ತೊಂದು ಕಾಂಗ್ರೆಸ್ ಪಕ್ಷವಾಗಬಾರದು ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com