ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಜಮ್ಮು ಮತ್ತು ಕಾಶ್ಮೀರ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕಣಿವೆ ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಶನಿವಾರ ಹೇಳಿದ್ದಾರೆ.
ಇಂದು ಫ್ಲೈಓವರ್ ಉದ್ಘಾಟಿಸಿದ ಬಳಿಕ ಮಾತನಾಡಿದ ಮುಫ್ತಿ, ಈಗಿನ ಬಿಕ್ಕಟ್ಟಿನಿಂದ ರಾಜ್ಯವನ್ನು ಪಾರು ಮಾಡಬಲ್ಲವರು ಯಾರಾದರೂ ಇದ್ದರೆ ಎಂದರೆ ಅದು ಪ್ರಧಾನಿ ಮೋದಿ ಮಾತ್ರ. ಅವರ ನಿರ್ಧಾರವನ್ನು ದೇಶ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಒಬ್ಬ ಧೈರ್ಯಶಾಲಿ ಎಂದು ಬಣ್ಣಿಸಿರುವ ಮುಫ್ತಿ, ಉಭಯ ದೇಶಗಳ ನಡುವೆ ತೀವ್ರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದಾಗಲೇ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಹ ಪಾಕಿಸ್ತಾನಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅಷ್ಟು ಎದೆಗಾರಿಕೆ ಪ್ರದರ್ಶಿಸಲಿಲ್ಲ. ಪ್ರಧಾನಿ ಮೋದಿ ಲಾಹೋರ್ ಗೆ ಭೇಟಿ ನೀಡಿರುವುದು ಅವರ ಶಕ್ತಿಯನ್ನು ತೋರಿಸುತ್ತದೆ ಎಂದು ಕಾಶ್ಮೀರ ಮುಖ್ಯಮಂತ್ರಿ ಹೇಳಿದ್ದಾರೆ.