ಮಾಧ್ಯಮಗಳು ತಾವೇ ಕಾನೂನು, ನ್ಯಾಯಾಧೀಶ ಎಂಬಂತೆ ವರ್ತಿಸುತ್ತಿವೆ: ತರೂರ್

ತಮ್ಮ ಪತ್ನಿ ಸುನಂದಾ ಪುಷ್ಕರ್ ಸಾವಿನ ವಿಷಯದಲ್ಲಿ ಮುಚ್ಚಿಡುವಂತಾದ್ದು ನನ್ನಲ್ಲಿ ಏನೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್...
ಶಶಿ ತರೂರ್
ಶಶಿ ತರೂರ್
ತಿರುವನಂತಪುರಂ: ತಮ್ಮ ಪತ್ನಿ ಸುನಂದಾ ಪುಷ್ಕರ್ ಸಾವಿನ ವಿಷಯದಲ್ಲಿ ಮುಚ್ಚಿಡುವಂತಾದ್ದು ನನ್ನಲ್ಲಿ ಏನೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಮಂಗಳವಾರ ಹೇಳಿದ್ದಾರೆ. 
ಸದ್ಯಕ್ಕೆ ದೆಹಲಿ ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದರೂ, ಈ ಪ್ರಕರಣವನ್ನು ಹೊಸ ಇಂಗ್ಲಿಷ್ ಸುದ್ದಿ ವಾಹಿನಿ ರಿಪಬ್ಲಿಕ್ ಟಿವಿ ವಾಹಿನಿ ಮತ್ತೆ ಮುನ್ನೆಲೆಗೆ ತಂದಿತ್ತು. ಕೆಲವು ದೂರವಾಣಿ ಸಂಭಾಷಣೆಯ ರೆಕಾರ್ಡ್ ಗಳನ್ನೂ ಬಿಡುಗಡೆ ಮಾಡಿದ್ದ ಈ ಸುದ್ದಿ ವಾಹಿನಿ, ಪುಷ್ಕರ್ ಮೃತಪಟ್ಟ ಜನವರಿ ೧೪, ೨೦೧೪ ರಂದು ಅವರ ದೇಹವನ್ನು ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಸಾಗಿಸಲಾಗಿತ್ತು ಎಂದು ಕೂಡ ಆರೋಪಿಸಿತ್ತು. 
ಈ ಬಗ್ಗೆ ವರದಿಗಾರರನ್ನುದ್ದೇಶಿಸಿ ಮಾತನಾಡಿದ ತರೂರ್, ಈ ಸುದ್ದಿ ವಾಹಿನಿಯ ವರದಿಯ ನಂತರ ಹಲವು ಟ್ವೀಟ್ ಗಳನ್ನು ಮಾಡಿರುವುದಾಗಿ ಹೇಳಿದ್ದಾರೆ. 
"ವೈಯಕ್ತಿಕ ದುರಂತವನ್ನು ದುರುಪಯೋಗ ಮಾಡಿಕೊಂಡಿರುವುದಕ್ಕೆ ನನಗೆ ತೀವ್ರ ದುಃಖವಾಗಿದೆ ಮತ್ತು ಕೋಪವು ಬಂದಿದೆ. ನನ್ನಲ್ಲಿ ಮುಚ್ಚಿಡುವಂತಾದ್ದು ಏನಿಲ್ಲ ಮತ್ತು ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಇಲ್ಲಿಯವರೆಗೂ ತನಿಖೆಯಲ್ಲಿ ಅಪರಾಧ ಸಾಬೀತು ಪಡಿಸುವಂತಾದ್ದು ಏನು ಸಿಕ್ಕಿಲ್ಲ ಅಥವಾ ಇದು ಕೊಲೆ ಎಂಬುದನ್ನು ಸಾಬೀತು ಮಾಡುವಂತದ್ದು ಕೂಡ ಏನಿಲ್ಲ" ಎಂದು ತರೂರ್ ಹೇಳಿದ್ದಾರೆ. 
ಸುದ್ದಿ ವಾಹಿನಿಗಳ ವರದಿಗಾರರು ಹಲವು ಪ್ರಶ್ನೆಗಳನ್ನು ಕೇಳುವಾಗ ತುಸು ತಾಳ್ಮೆ ಕಳೆದುಕೊಂಡ ತರೂರ್ "ಪೊಲೀಸರು ತಮ್ಮ ತನಿಖೆ ಮುಗಿಸಿ ಕೋರ್ಟ್ ಗೆ ಹೋಗಲಿ" ಎಂದಿದ್ದಾರೆ. 
ಮಾಧ್ಯಮಗಳು ಸಾಕ್ಷ್ಯಗಳಾಗಬಹುದು ಆದರೆ ಶಿಕ್ಷೆ ನೀಡುವ ಕಾನೂನು ತೀರ್ಪುಗಾರ ಅಥವಾ ನ್ಯಾಯಾಧೀಶ ಆಗಬಾರದು ಎಂದು ಕೂಡ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com