ಶೀಘ್ರ ಕೌಶಲ್ಯ ಅಭಿವೃದ್ಧಿ ನೀತಿ ಜಾರಿ, 5 ಲಕ್ಷ ಯುವಕರಿಗೆ ತರಬೇತಿ: ಸಿಎಂ

ಯುವಕರಿಗೆ ಉಚಿತ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಶೀಘ್ರದಲ್ಲೇ ಕೌಶಲ್ಯ....
ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಯುವಕರಿಗೆ ಉಚಿತ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಶೀಘ್ರದಲ್ಲೇ ಕೌಶಲ್ಯ ಅಭಿವೃದ್ಧಿ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಇಂದು ವ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಮ್ಮಿಕೊಂಡಿರುವ ಕೌಶಲ್ಯ ಕರ್ನಾಟಕ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ಈ ವರ್ಷ ಕೌಶಲ್ಯ ಕರ್ನಾಟಕ ಅಭಿಯಾನದ ಅಡಿಯಲ್ಲಿ 5 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.
ಕೌಶಲ್ಯ ಅಭಿವೃದ್ಧಿ ನೀತಿಯನ್ನು ಈಗಾಗಲೇ ರೂಪಿಸಲಾಗುತ್ತಿದೆ. 2030ರ ವೇಳೆಗೆ 1 ಕೋಟಿ 88 ಲಕ್ಷ ಯುವ ಜನರಿಗೆ ಉದ್ಯೋಗ ತರಬೇತಿ ನೀಡಬೇಕೆಂದು ಜ್ಞಾನ ಆಯೋಗ ಸಲಹೆ ಮಾಡಿದ್ದು, ಅದರಂತೆ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಸಿಎಂ ತಿಳಿಸಿದರು. 
ಕೌಶಲ್ಯ ಅಭಿವೃದ್ಧಿ ನೀತಿ ಕುರಿತು ಬಜೆಟ್‌ನಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ. ಆ ಮೂಲಕ ಈ ವರ್ಷ ಕನಿಷ್ಟ 1 ಲಕ್ಷ ಯುವಕರನ್ನು ಉದ್ಯೋಗಿಗಳನ್ನಾಗಿ ಮಾಡಬೇಕಾಗಿದೆ. ಕಳೆದ ವರ್ಷ 1 ಲಕ್ಷ 60 ಸಾವಿರ ಯುವ ಜನರಿಗೆ ತರಬೇತಿ ನೀಡಲಾಗಿದೆ ಎಂದರು.
ಪದವೀಧರರೂ ಸೇರಿದಂತೆ, ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ರಾಜ್ಯದಲ್ಲಿ ಶೇ. 29 ರಷ್ಟಿದೆ. ವಿದೇಶಗಳಲ್ಲಿ ಈ ಪ್ರಮಾಣ 80 ರಿಂದ 90 ರಷ್ಟಿದೆ. ಹಾಗಾಗಿ ಈ ಪ್ರಮಾಣವನ್ನು ಕನಿಷ್ಟ ಶೇ. 70 ರಷ್ಟು ಆಗಬೇಕಾಗಿದೆ ಎಂದರು.
ಕೌಶಲ್ಯ ಕರ್ನಾಟಕ ಅಭಿಯಾನಕ್ಕೆ ನಟ ಪುನೀತ್ ರಾಜಕುಮಾರ್ ಅವರು ರಾಯಭಾರಿಯಾಗಿದ್ದು, ತಮ್ಮನ್ನು ರಾಯಭಾರಿಯನ್ನಾಗಿ ಮಾಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ, ಅಲ್ಲದೆ ಸರ್ಕಾರ ಜಾರಿಗೆ ತಂದಿರುವ ಕೌಶಲ್ಯ ಕರ್ನಾಟಕ ಇಡೀ ದೇಶದಲ್ಲೇ ಹೆಮ್ಮೆ ಪಡುವಂತಹ ಕಾರ್ಯಕ್ರಮವಾಗಿದೆ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೌಶಲ್ಯ ಕರ್ನಾಟಕ ವೆಬ್ ಪೋರ್ಟಲ್, ಆಪ್ ಹಾಗೂ ಮಾಸ ಪತ್ರಿಕೆಯನ್ನು ಸಹ ಬಿಡುಗಡೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com