ನವದೆಹಲಿ: ಹೊಸ ನೋಟುಗಳ ಮುದ್ರಣ ಮತ್ತು ಸಾಗಾಟಕ್ಕಾಗಿ ಸರ್ಕಾರಕ್ಕೆ ಸಹಕಾರ ನೀಡಿದ ನಂತರ ಈಗ ನೋಟು ಹಿಂಪಡೆತದ ನಂತರ ಬ್ಯಾಂಕ್ ಗಳಿಗೆ ಸೇರ್ಪಡೆಯಾಗಿರುವ ಹಳೆ ನೋಟುಗಳ ವಿಲೇವಾರಿಗೂ ಸೇನೆ ಸಹಾಯ ಮಾಡಲಿದೆ.
ಸೇನೆಯ ಮೂಲಗಳು ತಿಳಿಸುವಂತೆ ನೋಟುಗಳ ತಪಾಸಣೆಗೆ ಸೇನೆಯ ೧೫ ತಂಡಗಳಿಗಾಗಿ ಸರ್ಕಾರ ಬೇಡಿಕೆ ಇಟ್ಟಿದೆಯಂತೆ. ಆದರೆ ಈ ಕಾರ್ಯಕ್ಕೆ ಎಷ್ಟು ಸೈನಿಕರನ್ನು ನೇಮಿಸಲಾಗುತ್ತದೆ ಎಂಬುದನ್ನು ಅಧಿಕಾರಿ ಸ್ಪಷ್ಟಪಡಿಸಿಲ್ಲ.
ಈ ವಿಲೇವಾರಿಯನ್ನು ಮಾಡುವ ಯೋಜನೆಯ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ. "ಮೇ ೨೬ ರೊಳಗೆ ಈ ಕೆಲಸಕ್ಕೆ ಸೇನೆಯ ತಂಡಗಳನ್ನು ನಿಯೋಜಿಸಲಾಗುವುದು" ಎಂದು ಅಧಿಕಾರಿ ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) ಸುರಕ್ಷತೆಗಾಗಿ ಸೇನೆಯನ್ನು ನಿಯೋಜಿಸಲಾಗುತ್ತಿದೆ ಎಂಬ ವಿಷಯವನ್ನು ಅಧಿಕಾರಿ ಅಲ್ಲಗೆಳೆದಿದ್ದಾರೆ.
ಹಳೆಯ ನೋಟುಗಳು ಎಷ್ಟು ಸಂಖ್ಯೆಯಲ್ಲಿ ಹಿಂದಿರುಗಿವೆ ಎಂಬ ಮಾಹಿತಿಯನ್ನು ಆರ್ ಬಿ ಐ ಇನ್ನು ಬಿಡುಗಡೆ ಮಾಡಿಲ್ಲ. ಸುಮಾರು ೧೫ ಲಕ್ಷ ಕೋಟಿ ರೂ ಹಿಂದಿರುಗಿದೆ ಎಂದು ಅಂದಾಜಿಸಲಾಗಿದ್ದು, ಇದು ಹಳೆಯ ೫೦೦ ಮತ್ತು ೧೦೦೦ ರೂ ನೋಟುಗಳ ೯೫% ಸಂಖ್ಯೆಯನ್ನು ಒಳಗೊಂಡಿದೆ ಎನ್ನಲಾಗಿದೆ.
ಹೊಸ ೫೦೦ ಮತ್ತು ೨೦೦೦ ರೂ ನೋಟುಗಳ ತ್ವರಿತ ಸಾಗಾಣೆಗೆ ಸಹಾಯ ಮಾಡಲು ಸೇನೆಗೆ ಈ ಹಿಂದೆ ಕೇಳಿಕೊಳ್ಳಲಾಗಿತ್ತು. ಸಿ-೧೩೦ ಮತ್ತು ಸಿ-೧೭ ವಿಮಾನಗಳನ್ನು ಬಳಸಿ ಭಾರತೀಯ ವಾಯುಪಡೆ ೬೦೦ ಟನ್ ನಷ್ಟು ಹೊಸ ನೋಟುಗಳನ್ನು ದೇಶದ ವಿವಿಧ ಭಾಗಗಳಿಗೆ ಸಾಗಾಣೆ ಮಾಡಿತ್ತು.