ಶರತ್ ಕುಮಾರ್- ಸೂರ್ಯ - ಸತ್ಯರಾಜ್
ಶರತ್ ಕುಮಾರ್- ಸೂರ್ಯ - ಸತ್ಯರಾಜ್

ಮಾನಹಾನಿ ಪ್ರಕರಣ: 'ಕಟ್ಟಪ್ಪ', ಸೂರ್ಯ ಸೇರಿ 8 ತಮಿಳು ನಟರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ತಮಿಳು ಚಿತ್ರ ನಟರಾದ ಸೂರ್ಯ, ಬಾಹುಬಲಿಯ ಕಟ್ಟಪ್ಪ ಪಾತ್ರಧಾರಿ....
Published on
ಕೊಯಮತ್ತೂರು: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ತಮಿಳು ಚಿತ್ರ ನಟರಾದ ಸೂರ್ಯ, ಬಾಹುಬಲಿಯ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಹಾಗೂ ಶರತ್ ಕುಮಾರ್ ಸೇರಿದಂತೆ ಎಂಟು ತಮಿಳು ನಟರ ವಿರುದ್ಧ ಊಟಿ ಕೋರ್ಟ್ ಮಂಗಳವಾರ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ತಮಿಳು ನಟರ ವಿರುದ್ಧ ಹಿರಿಯ ಪತ್ರಕರ್ತರೊಬ್ಬರು ದಾಖಲಿಸಿದ್ದ ಮಾನಹಾನಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಸೂರ್ಯ, ಸತ್ಯರಾಜ್, ಶರತ್ ಕುಮಾರ್, ಚೇರನ್, ಶ್ರೀಪ್ರಿಯಾ, ವಿಜಯ್ ಕುಮಾರ್, ಅರುಣ್ ವಿಜಯ್ ಹಾಗೂ ವಿವೇಕ್ ಅವರ ವಿರುದ್ಧ ಕೋರ್ಟ್ ಇಂದು ಬಂಧನ ವಾರಂಟ್ ಹೊರಡಿಸುವ ಮೂಲಕ ಬಿಸಿ ಮುಟ್ಟಿಸಿದೆ.
ಪ್ರಕರಣ ಸಂಬಂಧ ಎರಡನೇ ಬಾರಿಯೂ ವಿಚಾರಣೆಗೆ ಹಾಜರಾಗದ ತಮಿಳು ನಟರ ವಿರುದ್ಧ ಊಟಿ ಜೂಡಿಸಿಯಲ್ ಮಾಜಿಸ್ಟ್ರೇಟ್ ಸೆಂತಿಲ್ ಕುಮಾರ್ ರಾಜವೇಲ್ ಅವರು ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದಾರೆ.
ತಮಿಳು ಚಿತ್ರರಂಗದ ನಟಿಯರ ಮಾನಹಾನಿ ಮಾಡುವಂತಹ ಲೇಖನ ಪ್ರಕಟಿಸಿದ್ದ ತಮಿಳು ದೈನಿಕದ ವಿರುದ್ಧ 2009ರ ಅಕ್ಟೋಬರ್ 7ರಂದು ದಕ್ಷಿಣ ಭಾರತ ನಟರ ಅಸೋಸಿಯೇಶನ್(ನಾಡಿಗರ್ ಸಂಘಂ) ಚೆನ್ನೈನಲ್ಲಿ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿತ್ತು. ಈ ವೇಳೆ ತಮಿಳು ನಟರು ತಮ್ಮ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಹಿರಿಯ ಪತ್ರಕರ್ತ ರೋಜರಿಯೋ ಮರಿಯಾ ಸುಸೈ ಅವರು ಖಾಸಗಿ ದೂರು ದಾಖಲಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com