ಮದವೂರ ವಿನಾಯಕ

ಮದವೂರ ವಿನಾಯಕ
Updated on

'ದೇವರ ಸ್ವಂತ ನಾಡು' ಎಂದೇ ಕರೆಯುವ ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿನ ಕಾಸರಗೋಡಿನಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯವೇ ಅನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ. ದೇವಸ್ಥಾನಕ್ಕೆ ಈ ಹೆಸರಿದ್ದರೂ ಸುತ್ತಮುತ್ತಲಿನ ಊರಲ್ಲಿ ಇದು ಮಧೂರು ಎಂದೇ ಪ್ರಸಿದ್ಧಿ.
ಸುಮಾರು 1,200 ರಿಂದ 1,500  ವರ್ಷಗಳ ಹಳೆಯ ಮಧೂರು, ಕುಂಬ್ಳೆ ಸೀಮೆಯ 4 ಸೀಮಾ ದೇವಸ್ಥಾನಗಳಲ್ಲಿ (ಅಡೂರು, ಮಧೂರು, ಕಾವು, ಕಣ್ಯಾರ) ಒಂದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಜಪೃಷ್ಠಾಕಾರದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಈ ದೇವಸ್ಥಾನದ ವಿಶೇಷತೆ ಎಂದರೆ ಗಣಪನ ಗುಡಿ ದಕ್ಷಿಣಾಭಿಮುಖವಾಗಿರುವುದು, ಜೊತೆಗೆ ಶಿವನ ಗುಡಿ ಪೂರ್ವಾಭಿಮುಖವಾಗಿದೆ. ಇಲ್ಲಿನ ಗಣಪತಿ ಮತ್ತು ಶಿವನ ಲಿಂಗಗಳು ಉದ್ಭವ ಲಿಂಗಗಳೆಂದೇ ಪ್ರತೀತಿ. ಮುಖ್ಯವಾಗಿ ಇಲ್ಲಿ ಗಣಪನಿಗೆ ಅಭಿಷೇಕ ಇಲ್ಲ. ಶಿವನಿಗೆ ಮಾತ್ರ ಅಭಿಷೇಕ, ರುದ್ರಾಭಿಷೇಕ ನಡೆಯುತ್ತದೆ. ಉದಯಾಸ್ತಮಾನ ಸೇವೆ, ಮೂಡಪ್ಪ ಸೇವೆ, ಗಣಹೋಮಗಳು ಇಲ್ಲಿನ ವಿಶೇಷ ಪೂಜೆಗಳು. ಜೊತೆಗೆ ಸಹಸ್ರ ಅಪ್ಪ ಸೇವೆಯನ್ನೂ ಮಾಡಿಸುತ್ತಾರೆ. ಎಲ್ಲದಕ್ಕಿಂತ ದೊಡ್ಡ ಸೇವೆಯೆಂದರೆ ಮೂಡಪ್ಪ ಸೇವೆ. ಈ ಸೇವೆ ಮಾಡಿಸಿದರೆ ಮಕ್ಕಳಾಗದ ದಂಪತಿಗಳಿಗೆ ಮಕ್ಕಳಾಗುತ್ತವೆ ಎಂಬುದು ನಂಬಿಕೆ.
ಮಳೆ ಬಾರದ ಸಂದರ್ಭದಲ್ಲಿ ಊರಿನ ಜನರೆಲ್ಲಾ ಒಟ್ಟಾಗಿ ಸೇರಿ ವಿಶೇಷವಾದ ಬಲಿವಾಡು ಕೂಟ ಏರ್ಪಾಡು ಮಾಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ  ಪ್ರಸಾದ ಭೋಜನವನ್ನು ಮಾಡುವುದು ವಾಡಿಕೆ.

ಸ್ಥಳ ಮಹಾತ್ಮೆ
ಈ ದೇವಸ್ಥಾನದ ಹಿಂದೆ ಇಂಥದ್ದೊಂದು ಕತೆಯಿದೆ. ಮದರು ಎಂಬ ಪರಿಶಿಷ್ಟ ಜಾತಿಯ, ಮೊಗೆರ ಸಮುದಾಯಕ್ಕೆ ಸೇರಿದ ಹೆಂಗಸು ಅಡುಗೆ ಮಾಡಲು ಸೌದೆ ತರಲು ಗುಡ್ಡಕ್ಕೆ ಹೋಗಿದ್ದಳಂತೆ. ಆ ಗುಡ್ಡದಲ್ಲಿ ಸೌದೆ ಕಡಿಯುತ್ತಿದ್ದಾಗ ಕತ್ತಿ ಒಂದು ಕಲ್ಲಿಗೆ ತಾಗಿ ಆ ಕಲ್ಲಿನಿಂದ ರಕ್ತ ಚಿಮ್ಮಿತು. ಗಾಬರಿಗೊಂಡ ಮದರು ತಕ್ಷಣ ಅಲ್ಲಿಂದ ಓಡಿ ಹೋಗಿ ಬ್ರಾಹ್ಮಣ ಮುಖಂಡರಿಗೆ ವಿಷಯ ತಿಳಿಸುತ್ತಾಳೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಊರ ಹಿರಿಯರು ಅರಸನಿಗೆ ವಿಷಯ ತಿಳಿಸುತ್ತಾರೆ. ಅರಸ ಆ ಉದ್ಭವ ಲಿಂಗಕ್ಕೆ ಗುಡಿಯನ್ನು ಕಟ್ಟಿದ. ಮುಂದೆ ಇದೇ ಮದವೂರು ಎಂದು ಪ್ರಸಿದ್ಧವಾಯಿತು.

ಟಿಪ್ಪು ಬಂದಿದ್ದಕ್ಕೆ ಇಲ್ಲಿದೆ ಸಾಕ್ಷಿ
ಟಿಪ್ಪು ಸುಲ್ತಾನ್ ತನ್ನ ದಂಡಯಾತ್ರೆಯ ಸಮಯದಲ್ಲಿ ಮೈಸೂರು, ಮಡಿಕೇರಿ, ವಿಟ್ಲದ ಮೂಲಕ ಮಧೂರಿಗೂ ಬಂದಿದ್ದ. ದೇವಸ್ಥಾನಗಳು, ಸಣ್ಣಪುಟ್ಟ ಅರಸು ಮನೆತನಗಳ ಮೇಲೆ ದಾಳಿ ಮಾಡುತ್ತಾ ತನ್ನ ಸಾಮ್ರಾಜ್ಯ ವಿಸ್ತಾರಗೊಳಿಸುತ್ತಿದ್ದ ಸಮಯದಲ್ಲಿ ಬಾಯಾರಿಕೆಯಿಂದ ಬಳಲಿದ್ದ ಟಿಪ್ಪುವಿಗೆ ದಾಹ ತಣಿಸಿದ್ದು ಮಧೂರು ದೇವಸ್ಥನದ ಬಾವಿಯ ನೀರು. ಇದರಿಂದ ಸಂತೋಷಗೊಂಡ ಟಿಪ್ಪು ಈ ದೇವಸ್ಥಾನವನ್ನು ಹಾಳುಗೆಡವದಂತೆ ಸೈನಿಕರಿಗೆ ಆಜ್ಞೆ ಮಾಡಿದ. ತಾನು ಬಂದ ನೆನಪಿಗಾಗಿ ಶಾಸ್ತಾರ ಗುಡಿಯ ತಾಮ್ರದ ಹಾಸಿನ ಮಾಡಿಗೆ ತನ್ನ ಖಡ್ಗದಿಂದ ಕಡಿದ. ಆ ಗುರುತು ಇಂದಿಗೂ ಶಾಸ್ತಾರ ಗುಡಿಯ ಮಾಡಿನ ಮೇಲೆ ಕಾಣಬಹುದು. ಈ ದೇವಸ್ಥಾನವು ಈಗ ಕೇರಳದ ದೇವಸ್ವಂ ಬೋರ್ಡ್‌ನ ಆಡಳಿತಕ್ಕೊಳಪಟ್ಟಿದ್ದರೂ, ಸಾಂಪ್ರದಾಯಿಕವಾಗಿ ಮಾಯಿಪ್ಪಾಡಿ ಅರಸರೇ ಆಡಳಿತ ನಡೆಸುತ್ತಿದ್ದಾರೆ.

ಹೀಗೆ ಬನ್ನಿ
ಕಾಸರಗೋಡಿನಿಂದ ಕೇವಲ 6 ಕಿ.ಮೀ. ಸಾಗಿದರೆ ಮಧೂರು ಕ್ಷೇತ್ರ ಸಿಗುತ್ತದೆ. ಇಲ್ಲಿಗೆ ಹೋಗಲು ಕಾಸರಗೋಡಿನಿಂದ  ಸಿಟಿ ಬಸ್‌ಗಳ ವ್ಯವಸ್ಥೆ ಕೂಡ ಇದೆ. ಮಂಗಳೂರಿನಿಂದ ಹೋಗುವವರಿಗೆ ನೇರವಾಗಿ ಕಾಸರಗೋಡು (ಸುಮಾರು 75 ಕಿ.ಮೀ), ಮಂಗಳೂರು, ವಿಟ್ಲ ಮೂಲಕ ಕಾಸರಗೋಡು ತಲುಪಬಹುದು (ಸುಮಾರು 110 ಕಿ.ಮೀ.). ಪೂರಕ ಮಾಹಿತಿಗಾಗಿ ದೂ. 04994 240666 ಸಂಪರ್ಕಿಸಬಹುದು.

- ಉದಯ್ ವಿಟ್ಲ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com