ಲೆಕ್ಕ ಪಕ್ಕಾ

ಲೆಕ್ಕ ಪಕ್ಕಾ
Updated on

ಈತನಿಗೆ ಕಣ್ಣು ಕಾಣಿಸದು. ಆದರೆ, ತನ್ನಲ್ಲಿರುವ ಪಾಂಡಿತ್ಯದಿಂದ ನೆರೆದವರನ್ನು ತನ್ನತ್ತ ಕಣ್ಣು ಬಿಟ್ಟು ನೋಡುವಂತೆ ಮಾಡುವ ಶಕ್ತಿಯಿದೆ. ಪೆನ್ನು, ಹಾಳೆ, ಕ್ಯಾಲ್ಕ್ಯುಲೇಟರ್ ಸಹಾಯವಿಲ್ಲದೇ ಕೋಟಿಗಟ್ಟಲೆ
ಲೆಕ್ಕಾಚಾರಕ್ಕೆ ಥಟ್ ಎಂದು ಉತ್ತರಿಸುವ ಈತ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರಿಂದಲೂ ಶಹಬ್ಭಾಸ್ ಗಿಟ್ಟಿಸಿಕೊಂಡಿದ್ದಾನೆ. ಊರವರ ಪಾಲಿಗೆ ನಡೆದಾಡುವ ಕಂಪ್ಯೂಟರ್ ಎನಿಸಿಕೊಂಡಿರುವ ಈತನಿಗೆ ಗಿನ್ನಿಸ್ ದಾಖಲೆ ಮಾಡುವ ಕನಸು.
ಬೆಳಗಾವಿ ಜಿಲ್ಲೆ ಅಥಣಿಯ ಬಸವರಾಜ ಉಮರಾಣಿ ಹುಟ್ಟುಗುರುಡ. ಕುರುಡು ಮಗು ಹುಟ್ಟಿದ್ದಕ್ಕೆ ಸಹಜವಾಗಿ ಪಾಲಕರು ತಮ್ಮ ಅದೃಷ್ಟಕ್ಕೆ ಶಪಿಸಿಕೊಂಡಿದ್ದರು. ಆದರೀಗ ಬಸವರಾಜನಿಗೆ ಜನ್ಮವಿತ್ತಿದ್ದಕ್ಕೆ ಹೆಮ್ಮೆ ಪಡುತ್ತಿದ್ದಾರೆ. ವಿಸ್ಮಯವೋ ಎನ್ನುವಂತೆ ಬಸವರಾಜ 8ನೇ ವಯಸ್ಸಿಗೆ ತಲುಪಿದಾಗ ಆತನಲ್ಲಿ ಆಶ್ಚರ್ಯಕರ ಗುಣಗಳು ಕಾಣಿಸಿಕೊಂಡವು. ಅತ್ಯದ್ಭುತ ಜ್ಞಾಪಕ ಶಕ್ತಿ, ಪಾಂಡಿತ್ಯ ಒಲಿಯಿತು. ಇದೀಗ 19 ವರ್ಷ ವಯಸ್ಸಿಗೆ ಬಂದು ತಲುಪಿರುವ ಬಸವರಾಜ, ಬಿಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ತನ್ನ ಪಾಂಡಿತ್ಯದಿಂದ ಗಮನ ಸೆಳೆದಿದ್ದಾನೆ.
ಕೋಟಿಗಟ್ಟಲೆ ಅಂಕಿಗಳವರೆಗಿನ ಸಂಖ್ಯೆಗಳ ಗುಣಾಕಾರ, ಭಾಗಾಕಾರ, ಸಂಕಲನ, ವ್ಯವಕಲನ ಒಂದೆರಡು ಸೆಕೆಂಡಿನಲ್ಲಿ ಮನಸ್ಸಿನಲ್ಲಿಯೇ ಮಾಡಿ ಉತ್ತರ ಹೇಳುತ್ತಾನೆ. ಪೆನ್ನಾಗಲಿ, ಹಾಳೆಯಾಗಲಿ, ಕ್ಯಾಲ್ಕ್ಯುಲೇಟರ್ ಈತನಿಗೆ  ಬೇಕಾಗಿಲ್ಲ. 1900 ರಿಂದ 2100ನೇ ಇಸ್ವಿಯವರೆಗೆ ಯಾವುದೇ ವರ್ಷದ ಯಾವುದೇ ತಿಂಗಳ ಯಾವುದೇ ದಿನಾಂಕವನ್ನು ಪ್ರಶ್ನಿಸಿದರೆ ಯಾವ ದಿನ ಎನ್ನುವುದನ್ನು ಚಿಟಿಕೆ ಹೊಡೆಯುವುದರಲ್ಲಿ ನಿಖರವಾಗಿ ಹೇಳುವ ಆಗಾಧ ಜ್ಞಾನ ಹೊಂದಿದ್ದಾನೆ. ಹಿಂದೆ ಎಂದೋ ಕೇಳಿದ ದೂರವಾಣಿ ಸಂಖ್ಯೆ, ಎಂದೋ ಭೇಟಿಯಾದವರನ್ನು ಇದೇ ದಿನ ಭೇಟಿಯಾಗಿದ್ದು, ನಿಮ್ಮದು ಇದೇ ಹೆಸರು ಎಂದು ನಿಖರವಾಗಿ ಹೇಳುತ್ತಾನೆ. ಬೇರೆ ಬೇರೆ ಮೌಲ್ಯದ ಕರೆನ್ಸಿ ನೋಟುಗಳನ್ನು ಕೈಯಲ್ಲಿ ಕೊಟ್ಟರೆ ಅದರ ಬೆಲೆ ಹಾಗೂ ಒಟ್ಟು ಮೌಲ್ಯ ತಕ್ಷಣ ಹೇಳುತ್ತಾನೆ. ದಿನದ ಯಾವುದೇ ಕಾಲದಲ್ಲಿ ಸಮಯ ಕೇಳಿದಾಗ ಗಡಿಯಾರದ ಸಹಾಯವಿಲ್ಲದೇ ನಿಖರವಾಗಿ ಸಮಯ ಹೇಳುತ್ತಾನೆ. ಪ್ರತಿಯೊಂದು ರಾಷ್ಟ್ರದ ಕ್ರಿಕೆಟ್ ಆಟಗಾರ, ನಾಯಕರ ಹೆಸರು ಮತ್ತು ಅವರು ಗಳಿಸಿದ ರನ್, ವಿಕೆಟ್,
ಕ್ಯಾಚ್ ವಿವರವಾಗಿ ಹೇಳುವುದರ ಜತೆಗೆ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಕಾಮೆಂಟ್ರಿ ಹೇಳುವ ಚಾಕಚಕ್ಯತೆ ಹೊಂದಿದ್ದಾನೆ.
ಈತನ ಸಾಧನೆಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ. ಕೇಂದ್ರ ಸಚಿವ ಅರ್ಜುನ ಸಿಂಗ್‌ರಿಂದ ಪ್ರಶಸ್ತಿ, ರಾಜ್ಯಪಾಲರಾಗಿದ್ದ ಟಿ. ಎನ್. ಚತುರ್ವೇದಿ ಅವರಿಂದ ಚಿಣ್ಣರ ಕಲಾ ಪ್ರಶಸ್ತಿ, ದೆಹಲಿಯ ಕರ್ನಾಟಕ ಸಂಘದಿಂದ ಸನ್ಮಾನ, ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರಶಸ್ತಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನ, ಯೋಗ ಗುರು ರಾಮದೇವ ಬಾಬಾ ಸೇರಿದಂತೆ ದೇಶದ ಗಣ್ಯರು ಬಸವರಾಜನ ಸಾಧನೆಗೆ ತಲೆದೂಗಿದ್ದಾರೆ.
ಅಣ್ಣಿಗೇರಿಯ ಗಣಿತ ತಜ್ಞ ಎಂ.ಎಸ್. ಪೂಜಾರ ಅವರೊಂದಿಗೆ ಜುಗಲ್ ಬಂದಿ ಕಾರ್ಯಕ್ರಮ ನೀಡುತ್ತಾ ನಾಡಿನಾದ್ಯಂತ ಸಂಚರಿಸುತ್ತಿರುವ ಬಸವರಾಜ, ಗಣಿತ ಕಬ್ಬಿಣದ ಕಡಲೆ ಎನ್ನುವ ವಿದ್ಯಾರ್ಥಿಗಳಲ್ಲಿ ಆ ಭಾವನೆಯನ್ನು ಹೊಡೆದೋಡಿಸಬೇಕು ಎಂದುಕೊಂಡಿದ್ದೇನೆ ಎನ್ನುತ್ತಾನೆ. ಮಾನವ ಕಂಪ್ಯೂಟರ್ ಎಂದೆನಿಸಿರುವ ವಿಶ್ವವಿಖ್ಯಾತ ಭಾರತದ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿಯ ಸಾಧನೆಯನ್ನು ಹಿಂದಿಕ್ಕಿ ಗಿನ್ನಿಸ್ ದಾಖಲೆಯಲ್ಲಿ ಹೆಸರು ದಾಖಲಿಸಿಯೇ ತೀರುತ್ತೇನೆಂಬ ಛಲ ಈತನದ್ದು. ಅಂಧನಾಗಿದ್ದರೂ ಬೆಳಗ ಬೇಕೆಂಬ ಹೊಂಗನಸು ಹೊತ್ತಿರುವ ಬಸವರಾಜ ಇತರರಿಗೆ ಮಾದರಿ.

ಗಿನ್ನೆಸ್ ಕನಸಿನಲ್ಲಿ ಉಮರಾಣಿ
ಹಿಂದೆ ಎಂದೋ ಕೇಳಿದ ದೂರವಾಣಿ ಸಂಖ್ಯೆ, ಎಂದೋ ಭೇಟಿಯಾದವರನ್ನು ಇದೇ ದಿನ ಭೇಟಿಯಾಗಿದ್ದು, ನಿಮ್ಮದು ಇದೇ ಹೆಸರು ಎಂದು ನಿಖರವಾಗಿ ಹೇಳುತ್ತಾನೆ. ಬೇರೆ ಬೇರೆ ಮೌಲ್ಯದ ಕರೆನ್ಸಿ ನೋಟುಗಳನ್ನು ಕೈಯಲ್ಲಿ ಕೊಟ್ಟರೆ ಅದರ ಬೆಲೆ ಹಾಗೂ ಒಟ್ಟು ಮೌಲ್ಯ ತಕ್ಷಣ ಹೇಳುತ್ತಾನೆ. ದಿನದ ಯಾವುದೇ ಕಾಲದಲ್ಲಿ ಸಮಯ ಕೇಳಿದಾಗ ಗಡಿಯಾರದ ಸಹಾಯವಿಲ್ಲದೇ ನಿಖರವಾಗಿ ಸಮಯ ಹೇಳುತ್ತಾನೆ. ಆದರೆ ಆತ ಹುಟ್ಟುಗುರುಡ!

= ಪ್ರಕಾಶ ಎಸ್. ಶೇಟ್
 prakashjoida@gmail.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com