ಸಡನ್ ಚೇಂಜ್

ಕಾರುಗಳ ಲೋಕದಲ್ಲಿ 2013-14 ಮಿನಿ ಎಸ್‌ಯುವಿಗಳ ವರ್ಷ. ಡಸ್ಟರ್, ಟೆರ್ರಾನೊ, ಇಕೊಸ್ಪೋರ್ಟ್ಸ್ ಅದಾದ ...
ಟೊಯೊಟಾ ಇಟಿಯೋಸ್
ಟೊಯೊಟಾ ಇಟಿಯೋಸ್

ಕಾರುಗಳ ಲೋಕದಲ್ಲಿ 2013-14 ಮಿನಿ ಎಸ್‌ಯುವಿಗಳ ವರ್ಷ. ಡಸ್ಟರ್, ಟೆರ್ರಾನೊ, ಇಕೊಸ್ಪೋರ್ಟ್ಸ್ ಅದಾದ ಮೇಲೆ ಫೋಕ್ಸ್ ವ್ಯಾಗನ್ ಫೋಲೋ, ಫಿಯೆಂಟ್ ಅವೆಂಚುರಾದಂತಹ ಒಂದಷ್ಟು ಕ್ರಾಸ್ ಓವರ್‌ಗಳು ಬಂದವು. ಅದರ ನಂತರ ಒಂದಷ್ಟು ಸಣ್ಣ ಕಾರುಗಳು ಸೇಯ್ಲ್, ಜೆಸ್ಟ್, ಎಕ್ಸೆಂಟ್, ಅಮೇಝ್ ಮುಂತಾದವುಗಳು ಬಂದವು. ಇವೆಲ್ಲವೂ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದವು.

ಇವುಗಳ ಗದ್ದಲದಲ್ಲಿ ಸೆಡಾನ್‌ಗಳು ಅಥವಾ 4 ಮೀಟರ್‌ಗಿಂತ ಉದ್ದ ಇರುವ ಡಿಕ್ಕಿ ಹೊಂದಿರುವ ಕಾರುಗಳು ಹೆಚ್ಚು ಕಡಿಮೆ ತೆರೆಗೆ ಸರಿದಿದ್ದವು. ಆದರೆ ಉಳಿದ ಕಾರುಗಳ ಅಬ್ಬರದಲ್ಲಿ ಸೆಡಾನ್‌ಗಳು ಹೊಸ ರೂಪ ಪಡೆದಿದ್ದು ಗೊತ್ತೇ ಆಗಿಲ್ಲ. ಹೋಂಡಾ ಸಿಟಿ, ಮಾರು ತಿ ಸುಜುಕಿ ಸಿಯಾಝ್, ಟೊಯೊಟಾ ಇಟಿಯೋಸ್, ಟೊಯೊಟಾ ಆಲ್ಟಿಸ್, ಫೋಕ್ಸ್ ವ್ಯಾಗನ್ ವೆಂಟೋ, ಸ್ಕೋಡಾ ರ್ಯಾಪಿಡ್ ಇವೆಲ್ಲ ಕಾಲಕ್ಕೆ ತಕ್ಕಂತೆ ಹೊಸ ರೂಪ ಪಡೆದುಕೊಂಡಿವೆ. ಇದರಲ್ಲಿ ಮಾರುತಿ ಸಿಯಾಝ್ ಮಾತ್ರ ಹೊಸ ಕಾರು. ಉಳಿದವೆಲ್ಲ ಹಳೆಯವು. ಆದರೆ ಹೊಸ ರೂಪ

ಈ ಮಾದರಿಯ ಹೆಸರುಗಳು ಹಳೆಯವಾದರೂ ಹೊಸ ರೂಪ ಮಾತ್ರ ಆಕರ್ಷಕವಾಗಿವೆ. ಹೊರಗಿನ, ಒಳಗಿನ ವಿನ್ಯಾಸಗಳಲ್ಲಿ ಭಾರೀ ಬದಲಾವಣೆಗಳ ಜತೆಗೆ, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಂ, ಮ್ಯಾಪ್, ಆಕರ್ಷಕ ವಿನ್ಯಾಸದ ಅಲಾಯ್ ವ್ಹೀಲ್ಸ್, ಇಲೆಕ್ಟ್ರಿಕ್ ಪವರ್ ಸ್ಟೇರಿಂಗ್, ಸ್ಟೇರಿಂಗ್ ವ್ಹೀಲ್‌ನಲ್ಲಿ ಮ್ಯೂಸಿಕ್ ಸಿಸ್ಟಂ ನಿಯಂತ್ರಣಗಳು, ಎರಡು ಬಣ್ಣಗಳ ಒಳಾಂಗಣ ವಿನ್ಯಾಸ , ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಮತ್ತು ಲೆದರ್ ಬಳಕೆ, ಕೀ ಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್ ಇನ್ನೂ ಕೆಲವು ಕೇಳರಿಯದ ವ್ಯವಸ್ಥೆಗಳು ಕಾರಿನ ವಿನ್ಯಾಸದಲ್ಲಿ ಸೇರಿಕೊಂಡಿವೆ.

ಇದೆಲ್ಲದರ ನಡುವೆ ಸದ್ದಿಲ್ಲದೆ ಇರುವ ಟೊಯೊಟಾ ಇಟಿಯೋಸ್ ಬಗ್ಗೆ ಹೇಳಲೇಬೇಕು. ಅದು  ನಮ್ಮ ಬೆಂಗಳೂರಿನಲ್ಲೇ ಉತ್ಪಾದನೆಯಾಗುವ ಕಾರು ಎಂಬ ಕಾರಣಕ್ಕಾದರೂ ಹೇಳಬೇಕು. ಇದು ಬಾಡಿಗೆಯವರು ಅತ್ಯಂತ ಹೆಚ್ಚು ಇಷ್ಟಪಡುವ ಕಾರು. ಈ ಕಾರಿನ ವೈಶಿಷ್ಟ್ಯವೆಂದರೆ 1800-2400 ಆರ್‌ಪಿಎಂನಲ್ಲೇ ಎಂಜಿನ್‌ನ ಅತ್ಯಂತ ಹೆಚ್ಚು ಶಕ್ತಿಯನ್ನು ಉತ್ಪಾದಿಸಿಬಿಡುತ್ತದೆ. ನಿರ್ವಹಣಾ ವೆಚ್ಚವೂ ಕಡಿಮೆ. ಟೊಯೊಟಾ ಗುಣಮಟ್ಟ ಜತೆಗೆ ಇದ್ದೇ ಇದೆ.

ಆದರೆ ಟಯೊಟಾ ಕಂಪನಿಗೆ ಇಟಿಯೋಸ್ ಕಾರನ್ನು ಕೇವಲ ಬಾಡಿಗೆ ಕಾರನ್ನಾಗಿ ಮಾಡಲು ಇಷ್ಟವಿಲ್ಲ ಅನಿಸುತ್ತದೆ. ಅದಕ್ಕೆ ಇಟಿಯೋಸ್‌ಗೆ ಒಂದಷ್ಟು ಹೊಸ ಟಚ್ ನೀಡಿದೆ. ಅದರಲ್ಲೂ ವಿಶೇಷವಾಗಿ ಕಾರು ಚಲಾಯಿಸುವ , ಸೆಡಾನ್ ಇಷ್ಟಪಡುವವರಿಗಾಗಿ ಈ ಕಾರನ್ನು ರೂಪಿಸಲಾಗಿದೆ. ಇನ್ನೊಂದು ಆಕರ್ಷಕ ಸಂಗತಿಯೆಂದರೆ ಎಲ್ಲ ಸೌಲಭ್ಯಗಳನ್ನೂ ಹೊಂದಿರುವ ಟಾಪ್ ಎಂಡ್ ಇಟಿಯೋಸ್ 8,21, 168 ದರಕ್ಕೆ ಲಭ್ಯವಿದೆ.
ಬೇರೆ  ಕಾರಿಗೆ ಹೋಲಿಸಿದರೆ ಪುಶ್‌ಬಟನ್ ಸ್ಟಾರ್ಟ್, ಪ್ರಾಜೆಕ್ಟರ್ ಹೆಡ್‌ಲ್ಯಾಂಪ್ಸ್ ಸೇರಿದಂತೆ ಕೆಲವು ಸೌಲಭ್ಯಗಳು ಇಲ್ಲದಿರಬಹುದು. ಆದರೆ ನಿಜವಾಗಿ ಹೇಳಬೇಕೆಂದರೆ ಅವೆಲ್ಲ ಫ್ಯಾನ್ಸಿ ಸೌಲಭ್ಯಗಳು. ಕೀ ತಿರುವಿದರೆ ಕಾರು ಸ್ಟಾರ್ಟ್ ಆಗುತ್ತದೆ. ರಾತ್ರಿ ದಾರಿ ಕಾಣಲು ಹೆಡ್‌ಲೈಟ್‌ಗಳಿವೆ ಎಂಬ ಮನೋಭಾವ ಇರುವವರಿಗೆ ಇಟಿಯೋಸ್ ಹೇಳಿ ಮಾಡಿಸಿದಂತಿದೆ. ಕೆಲವು ಫ್ಯಾನ್ಸಿ ಸೌಲಭ್ಯಗಗಳಿಲ್ಲದಿದ್ದರೇನು, ಸ್ಟೇರಿಂಗ್ ವ್ಹೀಲ್ ನಲ್ಲಿ ಆಡಿಯೋ ನಿಯಂತ್ರಣಗಳು, ವುಡನ್ ಫಿನಿಶ್‌ನ ಗೇರ್‌ನಾಬ್, ಬಾಗಿಲುಗಳ ಒಳಭಾಗದಲ್ಲಿ ವುಡನ್ ಫಿನಿಶಇಂಗ್ ನೀಡುವ ಮೂಲಕ ಒಳಾಂಗಣ ವಿನ್ಯಾಸಕ್ಕೆ ಫ್ರೆಶ್ ಟಚ್ ನೀಡಲಾಗಿದೆ. ಎಸಿವೆಂಟ್‌ಗಳಿಗೆ ಸುತ್ತಲೂ ಕ್ರೋಮ್ ರಿಂಗ್, ರಿಮೋಟ್ ಕಂಟ್ರೋಲ್ ಹೊಂದಿರುವ ಆಡಿಯೋ ಸಿಸ್ಟಂ,  4 ಸ್ಪೀಕರ್ 2 ಟ್ವೀಟರ್, ಅದಕ್ಕಂ ಫೋನ್‌ನೊಂದಿಗೆ ಬ್ಲ್ಯೂಟೂತ್ ಮೂಲಕ ಸಂಪರ್ಕ ಕಲ್ಪಿಸಬಹುದಾದ ವ್ಯವಸ್ಥೆ, ಚಾಲಕನ ಪಕ್ಕದ ಸೀಟಿನ ಎದುರು ತಣ್ಣಗೆ ಇರಬಹುದಾದ ವ್ಯವಸ್ಥೆ ಇರಬಹುದಾದ ವ್ಯವಸ್ಥೆ  ಇರುವ (ಎಸಿ ಗಾಳಿ ಹೋಗುವ ವ್ಯವಸ್ಥೆ ಇರುವ) ಗ್ಲೋವ್ ಬಾಕ್ಸ್, ಹೊಸ ಎಲ್‌ಸಿಡಿ ಓಡೋ ಮೀಟರ್ ಹಾಗೂ ಚಾಲನಾ ಮಾಹಿತಿ  ಪರದೆ, ಚಾಲಕ ಮತ್ತು ಪಕ್ಕದ ಪ್ರಯಾಣಿಕರಿಗೆ ಏರ್‌ಬ್ಯಾಗ್‌ಗಳು ಇದೆ. ಇಟಿಯೊಸ್‌ನ ಹೊರಬದಿ ವಿನ್ಯಾ ಸದಲ್ಲಿ ಭಾರೀ ಬದಲಾವಣೆ ಮಾಡದಿದ್ದರೂ ಒಂದಷ್ಟು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಎದುರಿನ ಗ್ರಿಲ್ ಬದಲಾಗಿದೆ . ಹೊಸ ಗ್ರಿಲ್  ಜತೆಗೆ ಟಯೋಟಾ ಲೋಗೋ ಇದೆ. ಎರಡು ಬಣ್ಣದ ಸೈಡ್ ವ್ಯೂ ಮಿರರ್‌ಗಳು, ಅದಕ್ಕೆ ಸಿಗ್ನಲ್ ಲೈಟ್‌ಗಳು, ಅದಕ್ಕೆ ಕೆಳಭಾಗದಲ್ಲಿ ಕ್ರೋಮ್ ಲೈನಿಂಗ್ ನೀಡಲಾಗಿದೆ. ಹಿಂಬದಿ ಬ್ರೇಕ್‌ಲೈಟ್‌ಗಳಿಗೆ, ಬಾಗಿಲುಗಳಿಗೆ ಅಳವಡಿಸುವ ಸೈಡ್‌ವಿಸರ್‌ಗಳಿಗೆ, ಸೈಡ್ ವ್ಯೂ ಮಿರರ್‌ಗಳಿಗೆ ಕ್ರೋಮ್ ಲೈನಿಂಗ್‌ಗಳು ಧಾರಾಳವಾಗಿ ಬಳಸಲಾಗಿದೆ. ಇವುಗಳಿಂದ ಇಟಿಯೋಸ್‌ಹೆ ಹೊಸ ರೂಪವೇ ಬಂದುಬಿಟ್ಟಿದೆ  ಎಂದು ಹೇಳಲು ಸಾಧ್ಯವಿಲ್ಲವಾದರೂ ಕಣ್ಣಿಗೆ ಕಾಣುವ ಬದಲಾವಣೆಗಳಾಗಿವೆ.

ಇವೆಲ್ಲವುಗಳ ಮೂಲಕ ಟೊಯೊಟಾ ಕಂಪನಿ ಇಟಿಯೋಸ್‌ಗೆ ಪ್ರೀಮಿಯಂ ಸೆಡಾನ್ ನೋಟ ನೀಡುವ ಹರ ಸಾಹಸ ಮಾಡಿದೆ. ಇದು ಹೋಂಡಾ ಸಿಟಿ, ಸಿಯಾಝ್, ವೆರ್ನಾ ಮುಂತಾದವುಗಳ ಮಟ್ಟಕ್ಕೆ ಪೈಪೋಟಿ ನೀಡದಿದ್ದರೂ4 ಮೀಟರ್ ಒಳಗಿರುವ ಸೆಡಾನ್‌ಗಳಿಗೆ ಭಾರೀ ಪೈಪೋಟಿ ನೀಡಬಹುದು. ಯಾಕೆಂದರೆ ಇಟಿಯೋಸ್ ದರದಲ್ಲಿ ಹೆಚ್ಚು ಕಡಿಮೆ 4 ಮೀಟರ್‌ಗಳಿಗಿಂತ ಚಿಕ್ಕದಿರುವ ಸೆಡಾನ್‌ಗಳ ದರಕ್ಕೆ ಪೈಪೋಟಿ ನೀಡುತ್ತಿದೆ. ಗಾತ್ರದಲ್ಲಿ  ಅವುಗಳಿಗಿಂತ ದೊಡ್ಡದಿದೆ. ಹಾಗಾಗಿ ಅದೇ ಹಣಕ್ಕೆ ಹೆಚ್ಚು ಸ್ಥಳಾವಕಾಶ, ಉತ್ತಮ ಗುಣಮಟ್ಟ, ಹೆಚ್ಚು ಕಡಿಮೆ ಅಗತ್ಯ ಸೌಲಭ್ಯಗಳಿರುವ ಸೆಡಾನ್ ಲಭ್ಯವಾಗಲಿದೆ. ಕಾರಿನ ನಿರ್ವಹಣಾ ವೆಚ್ಚ ಕೂಡಾ ಕಡಿಮೆ.

ಇಂದು ಸಾಕಷ್ಟು ಕಂಪನಿಗಳ ಟಾಪ್ ಎಂಡ್ ಹ್ಯಾಚ್ ಬ್ಯಾಕ್‌ಗಳೇ ಇಟಿಯೋಸ್ ಸೆಡಾನ್  ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ. ಅದನ್ನು ಗಮನಿಸಿದರೆ ಇಟಿಯೋಸ್ ಉತ್ತಮ ಅವಕಾಶ ಹೊಂದಿದೆ. ಆದರೆ ಟೊಯೊಟಾ ಕಂಪನಿ ಯಾವ ರೀತಿಯಲ್ಲಿ ಕಾರನ್ನು ಮಾರುಕಟ್ಟೆಯಲ್ಲಿ ನಿಲ್ಲಿಸುತ್ತದೆ ಎಂಬುದರ ಮೇಲೆ ಹೊಸ ಇಟಿಯೋಸ್ ಯಶಸ್ಸು ನಿರ್ಧಾರವಾಗುತ್ತದೆ.


ವಕ್ರದಂತ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com