ಹಾರಿ ಬಂದವು ಚಿಟವಾ

ತ್ತರ ಕನ್ನಡ ಜಿಲ್ಲೆಯ ಒಳಾವರಣದ ಕಾಡಿನಲ್ಲಿ ಹರಡಿಕೊಂಡಿರುವ ಚಿಕ್ಕ ಊರು ಕೆರವಡಿ...
ಬಿಳಿ ಮೈಯ್ಯ ಹಕ್ಕಿಯ ಚಿಲಿಪಿಲಿ
ಬಿಳಿ ಮೈಯ್ಯ ಹಕ್ಕಿಯ ಚಿಲಿಪಿಲಿ

ಬೆಳ್‌ಬೆಳಗ್ಗೆ ಕಚೇರಿಗೆ ಹೋಗುವ ಮೊದಲು ಫೋನಾಯಿಸಿದ ಹವ್ಯಾಸಿ ಛಾಯಾಗ್ರಾಹಕ ಮಿತ್ರ ಆರ್.ಬೈಯಣ್ಣ.. 'ಕೆರವಡಿಗೆ ಚಿಟವಾಗಳು ಬಂದಿವೆ. ಈ ಸರ್ತಿ ಇಲ್ಲೇ ಮೊದಲು ಬಂದಿರೋದು. ಕನಿಷ್ಠ ಎರಡ್ಮೂರು ಸಾವಿರ ಬಂದಿರ್ಬೋದು ಬನ್ನಿ.

ನಾನು ಹೋಗ್ತಿದಿನಿ' ಎಂದು ಕ್ಯಾಮೆರಾ ಏರಿಸ್ಕೊಂಡು ಎಳೆದೊಯ್ದರು. ಸಂಜೆ ಹೊತ್ತಿಗಾಗಲೇ ಕಂತೆ ಕಂತೆ ಫೋಟೋ. ಪುಟ್ಟ ಬಿಳಿ ಬಿಳಿ ಮೈಯ್ಯ ಚಿಟವಾ ಹಕ್ಕಿ ನೇರವಾಗಿ ಮೂರು ಸಾವಿರ ಕಿ.ಮೀ. ದೂರದಿಂದ ಕ್ರಮಿಸಿ ಸಂಸಾರ ಬಸರು ಬಾಣಂತನ ಅಂತ ಇಲ್ಲಿಗೆ ಬಂದು ಬೀಡು ಬಿಟ್ಟಿದ್ದು ಸ್ಪಷ್ಟ.

ಉತ್ತರ ಕನ್ನಡ ಜಿಲ್ಲೆಯ ಒಳಾವರಣದ ಕಾಡಿನಲ್ಲಿ ಹರಡಿಕೊಂಡಿರುವ ಚಿಕ್ಕ ಊರು ಕೆರವಡಿ. ಎಡಕ್ಕೆ ಬಿದ್ರೆ ಕಾಳಿ ಹಿನ್ನೀರು, ಬಲಕ್ಕೆ ಎದ್ದರೆ ಸಹ್ಯಾದ್ರಿಯ ಪರ್ವತಗಳು ಎದೆಗೆ ಒತ್ತುತ್ತವೆ. ಎತ್ತ ನೋಡಿದರೂ ಹಸಿರು ಹೊದ್ದು ನಿಂತಿರುವ ಪ್ರದೇಶದಲ್ಲಿ ನೀರಿನ ಸೆಳಕುಗಳು ಜಾಸ್ತಿ. ಮೂಲತಃ ನೀರಿನ ಪ್ರದೇಶದಲ್ಲೇ ಬೀಡು ಬಿಡುವ ಈ ಹಕ್ಕಿಗೆ ಈ ಸರ್ತಿ ಸಿಕ್ಕಿದ್ದು ನಮ್ಮ ಕೆರವಡಿ ಕೆರೆ ಏರಿ ಮತ್ತು ಸುತ್ತಮುತ್ತಲಿನ ಕಾಳಿ ಹಿನ್ನೀರ ಪ್ರದೇಶ.

ಇಲ್ಲಿ ವರ್ಷದುದ್ದಕ್ಕೂ ನೀರಿನ ಹರಿವು ನಿರಂತರ. ಹಾಗಾಗೇ ಈ ಬಾರಿ ದೂರದ ಮ್ಯಾನ್ಮಾರ್, ಪಾಕಿಸ್ತಾನ ಹಾಗೂ ದಕ್ಷಿಣ ಏಷ್ಯಾದ ತೀರದಿಂದ ಭಾರತದ ಕೇರಳದ ಕಡೆಗೆ ಹಾಗೂ ಹೇಮಾವತಿಯ ಹಿನ್ನೀರ ಕಡೆಯಲ್ಲೂ ವಲಸೆ ಹೊರಡುವ ಚಿಕ್ಕ ಚಿಟವಾ ಹಕ್ಕಿ ಕೆರವಡಿಗೆ ಮುಖ ಮಾಡಿವೆ. ಇನ್ನೇನು ಮಣ್ಣಿನ ಸಂದುಗಳಲ್ಲಿ ಬದುವಿನ ಪಕ್ಕೆಗಳಲ್ಲಿ ಗುದ್ದು ತೋಡಿ ಮೊಟ್ಟೆ ಇಟ್ಟು ಸಂಸಾರ ಹೂಡುವ ಕಾಲ. ಆದರೆ, ಜನವರಿಯ ಸುಮಾರಿಗೆ ಕಾಲಾಡಿಸುವ ಚಿಟವಾಗಳು ಈ ಬಾರಿ ಡಿಸೆಂಬರ್‌ನಲ್ಲೇ ಬಾನಿಗೆ ರಂಗು ತುಂಬಿದ್ದವು.

1989, 1996ರಲ್ಲಿ ಬಂದಿದ್ದ ಈ ಚಿಕ್ಕ ಚಿಟವಾ ಹಕ್ಕಿಗಳನ್ನು ಡಾ.ಎಸ್.ಧಿಲ್ಲೋನ್ ರಿಪ್ಲೆ ಮತ್ತು ಪಕ್ಷಿಲೋಕದ ಪಿತಾಮಹ ಡಾ.ಸಲಿಂ ಅಲಿ ಅವರು ದಾಖಲಿಸಿದ್ದು ಬಿಟ್ಟರೆ ಬೇರೆಡೆಯಲ್ಲಿ ಇದರು ಬಗ್ಗೆ ದಾಖಲೆಗಳು ಕಾಣುತ್ತಿಲ್ಲ. ವೈಜ್ಞಾನಿಕವಾಗಿ ಗ್ಲಾರಿಯೋರೇಡ್ ಕುಟುಂಬಕ್ಕೆ ಸೇರಿರುವ ಚಿಟವಾಗಳು, ಮೂಲತಃ ಅನಿಮಾಲಿಯ್ ವಂಶದ ತಳಿಗಳು. ಚಿಕ್ಕ ಚಿಕ್ಕ ಕೇವಲ ಹದಿನೈದು ಸೆಂ.ಮೀ.ಅಳತೆಯ ಪುಟಾಣಿಗಳು.

ಆದರೆ ಒಂದೊಂದು ರೆಕ್ಕೆಯೂ ಅದಕ್ಕಿಂತಲೂ ದೊಡ್ಡದಾಗಿದ್ದು (16 ಸೆಂ.ಮೀ.) ದೇಹಕ್ಕಿಂತ ಬಲಯುತವಾಗಿವೆ. ಅದಕ್ಕಾಗಿಯೇ ನಿರಂತರ ಎರಡ್ಮೂರು ಸಾವಿರ ಕಿ.ಮೀ. ಕ್ರಮಿಸುವ ಚಿಟವಾ ಬರುತ್ತಿದ್ದಂತೆ, ಸಪೂರಾಗಿದ್ದ ದೇಹಕ್ಕೆ ಸ್ವಯಂ ಆಹಾರ ಪೂರೈಕೆ ಆರಂಭಿಸುತ್ತವೆ.

ನಿರಂತರ ಜನವರಿಯ ಮೊದಲ ವಾರದವರೆಗೆ ಕೇವಲ ತೀರದಲ್ಲಿ ಹುಳು ಹುಪ್ಪಟೆ, ಆಗೀಗ ಮೀನು ಮರಿಗಳು ಮತ್ತು ಸುತ್ತಮುತ್ತಲಿನ ಗದ್ದೆ ಬಯಲುಗಳಿಗೆ ಮಿಡತೆಯ ದಂಡಿಗಾಗಿ ದಾಳಿ ಇಡುವ ಚಿಟವಾ ಮೊದಲೆರಡು ವಾರದಲ್ಲಿ ದೈಹಿಕವಾಗಿ ಮೈದುಂಬಿಕೊಳ್ಳುತ್ತವೆ.

ಗದ್ದೆಯ ಬದುವಿನ ಮೇಲೆ ಕೆಲವು ಹಕ್ಕಿಗಳು ರಪರಪನೆ ರೆಕ್ಕೆ ಬಡಿಯುತ್ತ ಕಲರವ ಎಬ್ಬಿಸಿದರೆ ಅವುಗಳ ಭರಾಟೆಗೆ ಗಲಿಬಿಲಿಯಾಗಿ ಈಚೆ ಬರುವ ಹುಳು ಹುಪ್ಪಟೆಗಳನ್ನು ಹಿಂದಿನಿಂದ ಲಬಕ್ಕನೆ ಕಬಳಿಸಿ ಚುಂಚು ಒರೆಸಿಕೊಂಡು ಹೋಗಿಬಿಡುವ ಬುದ್ಧಿವಂತ ಸುಂದರ ಹಕ್ಕಿಯ ಕಣ್ಣಿನ ಸುತ್ತ ಇರುವ ಬಿಳುಪು ವರ್ಣಗೋಲದ ಕಾರಣಕ್ಕೆ ಇತರ ಚಿಟವಾಗಳಿಗಿಂತ ಭಿನ್ನವಾಗಿ ನಿಲ್ಲುತ್ತಿವೆ.

ಇದಕ್ಕಿರುವ ಕೆಲವು ಸೂಕ್ಷ್ಮ ವಿಶೇಷತೆಗಳಿಂದಾಗಿ ಇದನ್ನು  ಗುರುತಿಸುವುದೂ ಸುಲಭವಾಗಿದೆ. ಕಪ್ಪು ಉಬ್ಬು ಕೊಕ್ಕಿನ ಮುಂದುರಿದ ಭಾಗವಾಗಿ ಕೊಕ್ಕಿನ ಕೊನೆಯಲ್ಲಿ ಅಚ್ಚ ಕೆಂಪಿನ ಗೀರು ಇದಕ್ಕಿರುವ ಸುಂದರ ಲಕ್ಷಣ.

ಬೇರೆ ಚಿಟವಾಗಳು ಸಾಮಾನ್ಯವಾಗಿ ಒಂದೇ ಬಣ್ಣದ ಮಾಸಲು ರೆಕ್ಕೆಗಳನ್ನು ಹೊಂದಿದ್ದರೆ ಚಿಕ್ಕ ಚಿಟವಾ ಮಾತ್ರ ಅರೆ ಬಿಳುಪಿನ ಹಂಸದ ಮೃದುತ್ವದ ತುಪ್ಪಳಗಳ ರಾಶಿಯನ್ನೇ ಹೊಂದಿದ್ದು ಅಚ್ಚ ಕಪ್ಪು ಬಿಳುಪುಗಳ ಸರಿಯಾದ ಮಿಶ್ರಣವನ್ನು ಹೊಂದಿದೆ.
ಒಟ್ಟಿನಲ್ಲಿ ಈ ಚಿಟವಾ, ಮನದೊಳಗೆ ಚಿಟ್ಟೆ ಕಚಗುಳಿ ಇಟ್ಟಷ್ಟು ಮುದನೀಡಿದ್ದಂತೂ ದಿಟ.

ಪಕ್ಷಿ ಪ್ರಿಯರಿಗೆ ಹಬ್ಬ
ಇದೇ ಕುಟುಂಬದ ಇತರ ತಳಿಗಳಾದ ಓರಿಯಂಟಲ್ ಚಿಟವಾ(ಪ್ರಾಂಟಿಕೋಲ್) ಮತ್ತು ಬ್ಲಾಕ್‌ವಿಂಗ್ ಚಿಟವಾಗಳು ಇಷ್ಟು ಸುಂದರವಾಗಿರುವುದಿಲ್ಲ. ಹಾಗಾಗಿಯೇ ಚಿಕ್ಕ ಚಿಟವಾ ಎಲ್ಲಿಯಾದರೂ ಕಂಡರೆ ಪಕ್ಷಿ ಪ್ರಿಯರು ಮುಗಿಬೀಳುತ್ತಾರೆ.

ಈ ಬಾರಿ ಸುಮಾರು ಸಾವಿರಗಳ ಲೆಕ್ಕದಲ್ಲಿ ಬೀಡು ಬಿಟ್ಟಿರುವ ಕೆರವಡಿ ಕೆರೆಯನ್ನು ಅಷ್ಟು ಸ್ಪಷ್ಟವಾಗಿ ಹೇಗೆ ಗುರುತಿಸಿ ಹಾರಿ ಬಂದಿವೆ ಎನ್ನುವುದನ್ನು ಇನ್ನಷ್ಟೇ ಅಭ್ಯಸಿಸಬೇಕಿದೆ. ಸಾಮಾನ್ಯವಾಗಿ ಜನವರಿಯ ಮೊದಲ ವಾರದಲ್ಲಿ ಭಾರತದ ತೀರವನ್ನು ತಲುಪುವ ಚಿಟವಾಗಳು, ಆದರಲ್ಲೂ ಈ ಅಪರೂಪದ ಚಿಕ್ಕ ಚಿಟವಾ ಹದಿನೈದು ದಿನ ಮೊದಲೇ ಬೀಡುಬಿಟ್ಟಿರುವುದು ಮುಂದಿನ ಎರಡ್ಮೂರು ತಿಂಗಳು ಪಕ್ಷಿಪ್ರಿಯರಿಗೆ ಹಬ್ಬವಾಗಲಿದೆ.

ಒಂದು ಸಲಕ್ಕೆ ಕನಿಷ್ಠ ಎರಡರಿಂದ ನಾಲ್ಕು ಮೊಟ್ಟೆಗಳನ್ನಿಡುವ ಚಿಟವಾ ಅದಕ್ಕಾಗಿ ಮಣ್ಣಿನಲ್ಲಿ ಕೆದರಿ ಗೂಡು ನಿರ್ಮಿಸುತ್ತದೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಮೊಟ್ಟೆ ಇರಿಸಿ ಬಿಡುವ ಪರಿಸ್ಥಿತಿ ಬಂದಲ್ಲಿ ಅದರ ಮೇಲೆ ಮಣ್ಣೆರಚಿ ಮುಚ್ಚುತ್ತದೆ.

-ಸಂತೋಷಕುಮಾರ ಮೆಹೆಂದಳೆ
-ಚಿತ್ರಗಳು: ಆರ್.ಬೈಯ್ಯಣ್ಣ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com