ಬಿಳಿಗಿರಿ ಕಾನನದಲ್ಲಿ ಮೌನವಾಗಿ ಕುಳಿತಿದೆ ಈ ಆಶ್ರಮವಲ್ಲದ ಆಶ್ರಮ

ನಮ್ಮ ಕನ್ನಡ ನಾಡಿನಲ್ಲಿ ನಾವು ಹಲವಾರು ತಾಣಗಳಿಗೆ ಹಲವಾರು ಸಾರಿ ಹೋಗಿದ್ದರೂ ಸಹ ಅಲ್ಲಿನ ಕೆಲವೊಂದು ವಿಸ್ಮಯ...
ಸ್ವಾಮೀ ನಿರ್ಮಲಾನಂದರ ಆಶ್ರಮ
ಸ್ವಾಮೀ ನಿರ್ಮಲಾನಂದರ ಆಶ್ರಮ

ನಮ್ಮ ಕನ್ನಡ ನಾಡಿನಲ್ಲಿ  ನಾವು ಹಲವಾರು ತಾಣಗಳಿಗೆ  ಹಲವಾರು ಸಾರಿ ಹೋಗಿದ್ದರೂ  ಸಹ  ಅಲ್ಲಿನ ಕೆಲವೊಂದು  ವಿಸ್ಮಯ   ತಾಣಗಳು  ಕಣ್ಣಿಗೆ ಬಿದ್ದಿರೋಲ್ಲ, ಅಂತಹ ಒಂದು ತಾಣ  ಬಿಳಿಗಿರಿರಂಗನ  ಬೆಟ್ಟದಲ್ಲಿದೆ . ಸಾಮಾನ್ಯವಾಗಿ  ಸ್ವಾಮೀಜಿಗಳು  ಅಥವಾ ಆಶ್ರಮ  ಅಂದರೆ  ಇತೀಚೆಗೆ ಜನರಿಗೆ  ಆಲಸ್ಯ ಉಂಟಾಗುತ್ತದೆ , ಆದರೆ ಇಲ್ಲೊಂದು  ಆಶ್ರಮ  ಸದ್ದಿಲ್ಲದೇ  ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿ , ಸದ್ದಿಲ್ಲದೇ  ಅಡಗಿದೆ . ಒಬ್ಬ ಸೈನಿಕ  ಯುದ್ದಗಳ  ಭೀಕರತೆ ಕಂಡು   ಹಿಂಸೆಯನ್ನು ವಿರೋಧಿಸುತ್ತಾ ,  ಕಾಡಿನ ನಡುವೆ  ನೆಲೆಸಿ  , ಊರೂರು ತಿರುಗದೆ , ಭಾಷಣ  ಮಾಡದೆ ,  ಮೌನವಾಗಿ  ಬಿಳಿಗಿರಿ ಕಾಡಿನಲ್ಲಿ ನೆಲೆಸಿ   ತನ್ನ ಬರವಣಿಗೆಯಿಂದ ನಾಯಕರನ್ನು ತನ್ನ ಪತ್ರದಿಂದ ಎಚ್ಚರಿಸುತ್ತಾ   ಅಹಿಂಸೆ ಹಾದಿಯಲ್ಲಿ ನಡೆದ  ಒಬ್ಬ ಮಹಾನ್ ವ್ಯಕ್ತಿ  ನೆಲೆಸಿದ್ದ  ತಾಣ ಇದು.  ಈ ಆಶ್ರಮಕ್ಕೆ ನಿಯಮಿತ ಭಕ್ತರಿಲ್ಲಾ , ಯಾವುದೇ ಸೇವೆ  ಮಾಡಿಸುವ ಪದ್ಧತಿ ಇಲ್ಲ,   ಯಾವುದೇ ಧರ್ಮದ ಯಾರು  ಬೇಕಾದರೂ  ಹೋಗಿ ಬರಬಹುದು .



1924 ರ ಡಿಸೆಂಬರ್ ನಲ್ಲಿ ಕೇರಳದಲ್ಲಿ ಬಾಲಕೃಷ್ಣನ್[ಸ್ವಾಮೀ ನಿರ್ಮಲಾನಂದರ ಮೊದಲ ಹೆಸರು ] ಎಂಬ ಮಗುವಿನ ಜನನವಾಗುತ್ತದೆ, ಬಾಲ್ಯ ಕಳೆದ ಆ ಜೀವ  ಇಪ್ಪತ್ತು ವರ್ಷ ಕ್ಕೆ ಕಾಲಿಟ್ಟ ಆ ಸಮಯದಲ್ಲಿ  ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ  1943 ರಲ್ಲಿ  ಸೈನಿಕರಾಗಿ ಸೇರುತ್ತಾರೆ ಅಲ್ಲಿನ ಸೈನಿಕ ಅಂಚೆ ಇಲಾಖೆಯ ಸೇವೆ ಇವರದು,ಎರಡನೇ ಮಹಾಯುದ್ದ ನಡೆದಾಗ ಇವರ ಸೇವೆ ನಾಲ್ಕು ವರುಷಗಳ  ಕಾಲ ಯೂರೋಪ್ ನಲ್ಲಿ ಮುಂದುವರೆಯಿತು. ಎರಡನೇ ಮಹಾಯುದ್ದದ ಭೀಕರತೆ ,ರಕ್ತಪಾತ ವನ್ನು ಹತ್ತಿರದಿಂದ ಕಂಡ ಇವರು ಶಾಂತಿ ಜೀವನದತ್ತ ಮುಖ ತಿರುಗಿಸಲು ಪ್ರೇರಣೆಯಾಗುತ್ತದೆ. ಭಾರತಕ್ಕೆ ಬಂದ ಇವರು ಅಧ್ಯಯನ ಮುಂದುವರೆಸಿ "ಟಾಲ್ ಸ್ಟಾಯ್", "ತೋರೋ", "ಮಹಾತ್ಮಾ ಗಾಂಧೀ" "ರಾಮಕೃಷ್ಣ ಪರಮ ಹಂಸ" "ವಿವೇಕಾನಂದ"  ಇವರ ಬದುಕು ಬೋದನೆಗಳ ಪ್ರಭಾವಕ್ಕೆ  ಮನಸ್ಸು ಕೊಡುತ್ತಾರೆ ಹಾಗು ಇವುಗಳಿಂದ ಪ್ರಭಾವಿತರಾಗುತ್ತಾರೆ.ನಂತರ ಭಾರತದ ಉದ್ದಗಲಕ್ಕೂ ಸಂಚರಿಸಿ ದೇಶವನ್ನು  ಅರಿತುಕೊಳ್ಳುವ  ಕಾರ್ಯ ಮಾಡುತ್ತಾರೆ.ಈ ವೇಳೆಯಲ್ಲಿ ಹಲವಾರು ಸಾಧು , ಸಂತರು, ಕ್ರಿಶ್ಚಿಯನ್ ಪಾದ್ರಿಗಳು, ಫಕೀರರು, ಗಳ ಪರಿಚಯವಾಗಿ ಅವರ ವಿಚಾರ ಧಾರೆ   ಅರಿತುಕೊಳ್ಳುತ್ತಾರೆ. "ವಿನೋಬಾ ಭಾವೆ  'ಯವರ "ಭೂಧಾನ"ಚಳುವಳಿಯಲ್ಲಿ ಭಾಗವಹಿಸಿ ತಮ್ಮತನ   ಮೆರೆಯುತ್ತಾರೆ. ಇದಾದ ಮೇಲೆ 1959 ರಿಂದ 1964 ವರೆಗೆ ಮತ್ತೊಮ್ಮೆ ಯೂರೋಪ್ , ಮಧ್ಯ ಪ್ರಾಚ್ಯ ,ಅಮೇರಿಕಾ ಜಪಾನ್ ರಾಷ್ಟ್ರಗಳಿಗೆ ಪ್ರವಾಸ ಮಾಡುತ್ತಾರೆ. ಆ ಸಮಯದಲ್ಲಿ ವಿಶ್ವದ ಹಲವಾರು ದೇಶಗಳಲ್ಲಿ   ಚಾಲ್ತಿಯಲ್ಲಿದ್ದ ಹಲವು ಧರ್ಮಗಳ,ಬಗ್ಗೆ , ದಾರ್ಶನಿಕರ  ಬಗ್ಗೆ ಅರಿತುಕೊಳ್ಳುತ್ತಾರೆ . ನಂತರ ವಾಪಸ್ಸು ತಾಯ್ನಾಡಿಗೆ ಬಂದುನೆಲೆಸಲು ನಿರ್ಧರಿಸಿ 1964 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರಿಗೆ ಬಂದು ಅಲ್ಲಿ ಪ್ರಸಿದ್ದ  ಸ್ವಾತಂತ್ರ ಹೋರಾಟಗಾರ '' ತಗಡೂರು ಶ್ರೀ ರಾಮಚಂದ್ರ ರಾಯ" ರನ್ನು ಭೇಟಿ ಮಾಡಿ ಕೆಲ ಕಾಲ ಅಲ್ಲಿಯೇ ನೆಲೆಸುತ್ತಾರೆ.ನಂತರ ಅಂದು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಜ್ಜನರಾಗಿದ್ದ" ಶ್ರೀ  ಬಿ .ರಾಚಯ್ಯ " ರವರ ಸಹಕಾರದಿಂದ  ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆನಿಂತು  ಆಶ್ರಮ ಕಟ್ಟುತ್ತಾರೆ



ಮುಂದಿನ ಹಾದಿ  ನಿಶಬ್ದವಾಗಿ ನಿರಂತರ ಹನ್ನೊಂದು ವರುಷಗಳ ಮೌನ ವ್ರತ ಆಚರಣೆ . ಮೌನವಾಗಿಯೇಇವರು ಪತ್ರಗಳ ಮೂಲಕ ಜಗತ್ತಿನ  ಪ್ರಮುಖ ವ್ಯಕ್ತಿಗಳ ಒಡನಾಟ ಇಟ್ಟು ಕೊಂಡಿದ್ದರು. ಅಂತರಾಷ್ಟ್ರೀಯ ಮುಖಂಡರಾಗಿದ್ದ  ಹಲವಾರು ದೇಶಗಳ  ಮುಖಂಡರೊಂದಿಗೆ  ಪತ್ರ ವ್ಯವಹಾರ ಇತ್ತು. ತನ್ನ ಆಶ್ರಮದಲ್ಲಿ , ಟಿ.ವಿ. ,ಟೆಲೆಫೋನ್,  ಯಾವುದೇ ಸಂಪರ್ಕ ವಿಲ್ಲದೆ  ಬರಿ ಪತ್ರ ಬರೆಯುವ ಮೂಲಕ  ಹೊರ ಪ್ರಪಂಚದ ಸಂಪರ್ಕ ಇಟ್ಟುಕೊಂಡಿದ್ದರು. ಈ ಸಮಯ ದಲ್ಲಿ ಹಲವಾರು ಪುಸ್ತಕಗಳನ್ನು ಬರೆದ ಇವರು ಜಗತ್ತಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.ಇವರು ಬರೆದ ಪುಸ್ತಕ ಗಳಲ್ಲಿ   "  A GARLAND OF FOREST FLOWERS "   ಪುಸ್ತಕ  ಜಗತ್ತಿನಲ್ಲಿ ಪ್ರಸಿದ್ದಿ ಪಡೆದು ಅಂತರಾಷ್ಟ್ರ್ರೀಯ  ಮನ್ನಣೆ ಪಡೆದಿದೆ.

ಇವರ ಈ  ಕಾರ್ಯ ವನ್ನು ಗುರುತಿಸಿರುವ ವಿಶ್ವ ಇವರಿಗೆ
1] 10 th edition 'international who's who of intellectuals" award  
2] 15 th 'men of achivements
3] ' international man of the year 1990-91  
4] 4 th edition 'Distinguished leadership award " in religion and spirituality
5] 1 st edition  'The most admired men and women of the year '
 ಮುಂತಾದ ಪ್ರಶಸ್ತಿಗಳನ್ನು   ಪ್ರಧಾನ ಮಾಡಿ  ಗೌರವಿಸಿದೆ. ಇಷ್ಟೆಲ್ಲಾ ಸಾಧನೆ ಮಾಡಿ ಎಲ್ಲಾ ಧರ್ಮಗಳ ಬಗ್ಗೆ  ಗೌರವ ಯುತವಾಗಿ  ಪ್ರವಚನ ಮಾಡಿ ನಿಜವಾದ ವಿಶ್ವ ಮಾನವನಾಗಿ ,  ಶಿಷ್ಯರನ್ನು ಬೆಳಸದೆ , ಭಕ್ತರನ್ನು ಬೆಳೆಸದೆ  ಅಭಿಮಾನಿಗಳನ್ನೂ, ಸ್ನೇಹಿತರನ್ನೂ ಸಂಪಾದಿಸಿ  " ವಿಶ್ವ ಶಾಂತಿನಿಕೇತನ "  ಆಶ್ರಮ ಕಟ್ಟಿ  ವಿಶ್ವ ಮಾನವತಾವಾದಿಯಾಗಿ  ಕಾನನದ ಸುಮವಾಗಿ  ಮೌನದಿಂದಲೇ ಸಾಧಿಸಿ ಬದುಕಿದರು.  1997  ರ ಜನವರಿ 10   ರಂದು  ಇಹ ಲೋಕ ದಿಂದ ಪ್ರಯಾಣ ಬೆಳೆಸಿದರು .  1997 ರಲ್ಲಿ ಇವರ ದೇಹ ತ್ಯಾಗದ ಬಗ್ಗೆ  ಒಂದು  ದೊಡ್ಡ ಚರ್ಚೆಯೇ  ಪತ್ರಿಕೆಗಳಲ್ಲಿ ಹಾಗು ಸಮಾಜದಲ್ಲಿ  ಆಗ ದೇಶಾದ್ಯಂತ ನಡೆದು ಹೋಗಿತ್ತು.

ಸಮಾಧಿಯ  ದರ್ಶನ ಪಡೆದು  ಆಶ್ರಮದ ಹಿಂಭಾಗಕ್ಕೆ ಸ್ವಲ್ಪ ದೂರ ನಡೆದು ಬಂದರೆ ನಿಮಗೆ ಮತ್ತೊಮ್ಮೆ ಒಳ್ಳೆಯ  ದೃಶ್ಯ ಕಂಡು ಬರುತ್ತದೆ  ಬನ್ನಿ ಆ ನೋಟ ನೋಡೋಣ. ಇಂದಿಗೂ ಈ ಪ್ರದೇಶದಲ್ಲಿ ನಿಶಬ್ದ ಹಾಗು ಹಕ್ಕಿಗಳ ಕಲರವ , ಸುಂದರ ಪುಷ್ಪಗಳ ನೋಟ , ಬಿಳಿಗಿರಿ ಕಾಡಿನ  ಅದ್ಭುತ ದರ್ಶನ   ಸಿಗುತ್ತದೆ. ಮುಂದಿನ ಸಾರಿ ನೀವು ಇಲ್ಲಿಗೆ ಬಂದಾಗ ಇಲ್ಲಿಗೆ ಬರಲು ಪ್ರಯತ್ನಿಸಿ ನಿಮ್ಮ ಮನಸ್ಸು ಪ್ರಸನ್ನ ಗೊಳ್ಳುತ್ತದೆ.


 
ಈ ಆಶ್ರಮ   ಇರೋದು ಬಿಳಿಗಿರಿ ರಂಗನ  ಬೆಟ್ಟದಲ್ಲೇ  , ಬಿಳಿಗಿರಿ ರಂಗನ ಬೆಟ್ಟಕ್ಕೆ  ಬೆಂಗಳೂರು,  ಮೈಸೂರಿನಿಂದ   ಸಾರ್ವಜನಿಕ  ಸಾರಿಗೆ  ಬಸ್ಸುಗಳಿವೆ,  ಬೆಂಗಳೂರಿನಿಂದ  ೧೯೧    ಕಿಲೋಮೀಟರು , ಮೈಸೂರಿನಿಂದ ೯೧ ಕಿಲೋಮೀಟರು ದೂರದಲ್ಲಿದೆ , ಬಿಳಿಗಿರಿ ರಂಗನ ಬೆಟ್ಟದಲ್ಲಿ  ಊಟ ತಿಂಡಿ ವ್ಯವಸ್ಥೆ  ಚೆನ್ನಾಗಿದೆ, ಬಿಳಿಗಿರಿ ರಂಗನ ಬೆಟ್ಟದ   ಮುಖ್ಯರಸ್ತೆಯ  ಸನಿಹದಲ್ಲೇ ಸ್ವಲ್ಪ ಒಳ ಭಾಗಕ್ಕೆ ಈ  ಆಶ್ರಮ ಇದೆ .   ತುಂಬಾ ಪ್ರಶಾಂತವಾದ ವಾತಾವರಣದಲ್ಲಿ ಧ್ಯಾನ ಮಾಡಲು,  ಪುಸ್ತಕ ಓದಲು, ಪ್ರಕೃತಿಯ ಚೆಲುವ ಸವಿಯಲು , ಛಾಯಾಚಿತ್ರ  ತೆಗೆಯುವ  ಹವ್ಯಾಸ ಇದ್ದರೆ  ಒಳ್ಳೆಯ  ಚಿತ್ರಗಳ ತೆಗೆಯಲು ಇಲ್ಲಿ ಅವಕಾಶವಿದೆ . ಒಮ್ಮೆ ಹೋಗಿ ಅಲ್ಲಿನ  ಪರಿಸರದಲ್ಲಿ  ವಿಹಾರ ಮಾಡಿ  ಬನ್ನಿ

ಚಿತ್ರ, ಲೇಖನ: ನಿಮ್ಮೊಳಗೊಬ್ಬಬಾಲು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com