ರೋಲ್ಸ್ ರಾಯ್ಸ್ 'ಮೈಸೂರ್ ರಾಯಲ್ಸ್‌'

ರೋಲ್ಸ್ ರಾಯ್ಸ್ ಘೋಸ್ಟ್ ಮೈಸೂರ್ ಕಾರಿನ ವಿನ್ಯಾಸ
ರೋಲ್ಸ್ ರಾಯ್ಸ್ ಘೋಸ್ಟ್ ಮೈಸೂರ್ ಕಾರಿನ ವಿನ್ಯಾಸ

ಬೆಂಗಳೂರು: ರೋಲ್ಸ್ ರಾಯ್ಸ್‌ಗೂ 'ಮೈಸೂರು' ಕಂಪು ತಗಲಲಿದೆ! ಪ್ರತಿಷ್ಠಿತ ಜಾಗತಿಕ ಕಾರು ಉತ್ಪಾದಕ ಸಂಸ್ಥೆ ರೋಲ್ಸ್ ರಾಯ್ಸ್ ದುಬೈನ ಮೂವರು ಕೋಟ್ಯಾಧಿಪತಿಗಳಿಗಾಗಿ 'ಘೋಸ್ಟ್ ಮೈಸೂರು' ಮಾದರಿಯನ್ನು ಹೊರತರುತ್ತಿದೆ. ಈ ಕಾರಿನ ವಿನ್ಯಾಸಕ್ಕೆ ಪ್ರೇರಣೆಯಾಗಿದ್ದು 'ಮೈಸೂರು ಹುಲಿ' ಎಂದು ಖ್ಯಾತಿಯಾಗಿರುವ ವಿವಾದಿತ ರಾಜ ಟಿಪ್ಪು ಸುಲ್ತಾನ!

ರಾಜ್ಯದಲ್ಲಿ ಟಿಪ್ಪು ಸುಲ್ತಾನನ ದೇಶ ಪ್ರೇಮದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಲಂಡನ್ ಮೂಲದ ರೋಲ್ಸ್ ರಾಯ್ಸ್ ಕಂಪನಿ ಮೈಸೂರು ಹುಲಿ ಸ್ಮರಣೆಗಾಗಿ ಈ ಕಾರಿನ ವಿನ್ಯಾಸ ಮಾಡಿದೆ. ಶೀಘ್ರದಲ್ಲೇ ಈ ಕಾರುಗಳು ದುಬೈನ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿದ್ದು, ಮೈಸೂರು ಅರಸನ ಖ್ಯಾತಿಯು ಲಂಡನ್‌ನಿಂದ ದುಬೈವರೆಗೂ ಪಸರಿಸಲಿದೆ.

ಈ ಕಾರುಗಳನ್ನು ದುಬೈನ ಕೋಟ್ಯಾಧಿಪತಿಗಳು ಖರೀದಿಸುತ್ತಿರುವುದು ಖಾತ್ರಿಯಾಗಿದೆ. ಆದರೆ ಅವರ ಬೇಡಿಕೆ ಮೇಲೆ ವಿನ್ಯಾಸ ಮಾಡಲಾಗುತ್ತಿದೆಯೇ ಅಥವಾ ರೋಲ್ಸ್ ರಾಯ್ಸ್ ತನ್ನ ಬ್ರಾಂಡ್ ಅಭಿವೃದ್ಧಿಗೆ ಈ ಕೆಲಸ ಮಾಡುತ್ತಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಈ ಹಿಂದೆ ಭಾರತದ ಮಹಾರಾಜರ ನೆನಪುಗಳಿಗಾಗಿ ರೋಲ್ಸ್ ರಾಯ್ಸ್‌ನಿಂದ 'ಪ್ಯಾಂಟಮ್ ಡ್ರಾಪ್‌ಹೆಡ್‌' ಎಂಬ ಮಾದರಿಯನ್ನು ಬಿಡಲಾಗಿತ್ತು. ಮಾರುಕಟ್ಟೆಗೆ ಬಂದಿದ್ದ ಎರಡೂ ಕಾರನ್ನು ದುಬೈ ಉದ್ಯಮಿಗಳೇ ಕೊಂಡಿದ್ದು ವಿಶೇಷ.

ಏನಿದೆ ಈ ಕಾರಿನಲ್ಲಿ?
ಟಿಪ್ಪು ಸುಲ್ತಾನನನ್ನು ಮೈಸೂರು ಹುಲಿ ಎಂದು ಸಂಬೋಧಿಸುತ್ತಿದ್ದ ಹಿನ್ನೆಲೆಯಲ್ಲಿ ಹುಲಿಯ ಚಿತ್ರ ಕಾರಿನ ವಿಂಡೋ ಮಿರರ್‌ನ ಹಿಂಬದಿ ಹಾಗೂ ನಾಲ್ಕು ಸೀಟುಗಳ ಹೆಡ್ ರೆಸ್ಟ್‌ಗಳಲ್ಲಿ ಹುಲಿ ಗರ್ಜನೆಯ ಚಿತ್ರವಿರುತ್ತದೆ. ಜತೆಗೆ ಡ್ಯಾಶ್‌ಬೋರ್ಡ್ ಪಕ್ಕದಲ್ಲಿ 'ಮೈಸೂರು ಮೋಟಿಫ್‌' ಎಂದು ಬರೆಯಲಾಗಿದೆ. ಒಳ ವಿನ್ಯಾಸವು ಸಂಪೂರ್ಣ ಬಿಳಿ, ಕಪ್ಪು ಹಾಗೂ ಹುಲಿಯ ಬಣ್ಣದಿಂದ ಕಂಗೊಳಿಸುತ್ತಿದ್ದು, ಮಹಾರಾಜರ ವೈಭವ ಪ್ರದರ್ಶಿಸುವಂತಿದೆ. ಇನ್ನು ನವಿಲು ನೀಲಿ ವಿನ್ಯಾಸದ ಬಣ್ಣ ಹೊಂದಿರುವ ಕಾರು ರಾಜರ ಐಷಾರಾಮಿ ಸೌಲಭ್ಯಗಳೊಂದಿಗೆ ಲಕಲಕಿಸುತ್ತಿದೆ. ರೋಲ್ಸ್ ರಾಯ್ಸ್ ಘೋಸ್ಟ್ ಮಾದರಿಯ ಉಳಿದ ಕಾರುಗಳ ಎಂಜಿನ್ ಹಾಗೂ ಇತರೆ ತಾಂತ್ರಿಕ ಕ್ಷಮತೆ ಹೊಂದಿರುವ ಈ ಕಾರಿನ ವಿನ್ಯಾಸ ಅಂತಿಮ ಹಂತದಲ್ಲಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ಕಾರು ರಸ್ತೆಗೆ ಇಳಿಯಲಿದೆ.

ಅಂದಹಾಗೆ ಟಿಪ್ಪು ಸುಲ್ತಾನ ಹಾಗೂ ಮೈಸೂರು ಮಹಾರಾಜರಿಗೆ ಕಾರುಗಳ ಮೇಲೆ ಎಲ್ಲಿಲ್ಲದ ಪ್ರೀತಿಯಿತ್ತು. ಆ ಕಾಲದಲ್ಲಿಯೇ ನವಿಲು ನೀಲಿ ಬಣ್ಣದ ರೋಲ್ಸಾ ರಾಯ್ಸ್ ಕಾರನ್ನು ಟಿಪ್ಪು ಹೊಂದಿದ್ದನು. ಬ್ರಿಟಿಷರು ದಾಳಿ ನಡೆಸಿದ ಸಂದರ್ಭದಲ್ಲಿ ಆ ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಆ ಕಾರನ್ನು ಹರಾಜು ಹಾಕಲಾಗಿತ್ತು. ಇದರ ಬಣ್ಣ ಹಾಗೂ ಟಿಪ್ಪು ಇತಿಹಾಸ ಆಧರಿಸಿಯೇ ರೋಲ್ಸ್ ರಾಯ್ಸ್ ಸಂಸ್ಥೆಯು ಈ ವಿನ್ಯಾಸ ಹೊರತಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕಾರನ್ನು ಕೊಳ್ಳುವ ಅವಕಾಶ ಸದ್ಯಕ್ಕೆ ಭಾರತೀಯರಿಗೆ ಸಿಗುತ್ತಿಲ್ಲ. ಜತೆಗೆ ಇದರ ಬೆಲೆಯೂ ನಿಖರವಾಗಿ ತಿಳಿದು ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com