ಈಷರ್ ಮೋಟಾರ್ಸ್ ಮಾಲೀಕತ್ವದ ದ್ವಿಚಕ್ರ ವಾಹನ ಕಂಪನಿ ರೋಯಲ್ ಎನ್‌ಫೀಲ್ಡ್ ಎರಡು ಹೊಸ ಮಾದರಿಯ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಬೈಕ್‌ಗಳಲ್ಲಿ ಒಂದು ಮುಂದಿನ ವರ್ಷ ಮತ್ತು ಇನ್ನೊಂದು 2017ರೊಳಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.
ಹಿಮಾಲಯನ್ ಎಂದು ಹೆಸರಿರುವ ನೂತನ ಬೈಕ್ ಮುಂದಿನ ವರ್ಷ ರಸ್ತೆಗಿಳಿಯಲಿದೆ. 'ರೋಯಲ್ ಎನ್‌ಫೀಲ್ಡ್ ಹಿಮಾಲಯನ್' ಎಂಬ ಹೆಸರಿನ್ನು ಈ ಹಿಂದೆಯೇ ಎನ್‌ಫೀಲ್ಡ್ ಕಂಪನಿ ಖರೀದಿಸಿತ್ತು. ಈ ಬೈಕ್ ಹೆಸರಿನಂತೆಯೇ ಆಫ್ ರೋಡರ್, ಸ್ಕ್ರಾಂಬ್ಲರ್ ಬೈಕ್‌ಗಳ ಪಟ್ಟಿಗೆ ಸೇರ್ಪಡೆಯಾಗಲಿದೆ. ಪ್ರಸ್ತುತ 350 ಸಿಸಿ ಇಂಜಿನ್‌ನ್ನು ರೀ ಬೋರ್ ಮಾಡಿ ಸಾಮರ್ಥ್ಯ ಹೆಚ್ಚಿಸಿ 400ಸಿಸಿ ಸಾಮರ್ಥ್ಯದ ಇಂಜಿನ್‌ನನ್ನು ಇದರಲ್ಲಿ ಅಳವಡಿಸಲು ಕಂಪನಿ ಯೋಚಿಸಿದೆ.
ಅದೇ ವೇಳೆ ವಿದೇಶಿ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಕ್ರೂಸರ್ ಬೈಕ್‌ನ್ನು ತಯಾರಿಸಲು ಎನ್‌ಫೀಲ್ಡ್ ಸಿದ್ಧತೆ ಶುರು ಮಾಡಿದ್ದು, ಇದು 2017ರಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಬೈಕ್‌ಗೆ ಇನ್ನೂ ಹೆಸರಿಟ್ಟಿಲ್ಲ.
ಕಳೆದ ವರ್ಷ ವಾಹನ ಮಾರಾಟದಲ್ಲಿ ಹೆಚ್ಚಿನ ಲಾಭ ಗಳಿಸಿದ್ದ ಎನ್‌ಫೀಲ್ಡ್ ಹೊಸ ವರ್ಷದ ಆದಿಯಲ್ಲಿಯೇ ಭರ್ಜರಿ ಆರಂಭ ಕಂಡುಕೊಂಡಿದೆ. ಜನವರಿಯಲ್ಲಿ ಕಂಪನಿಯ ಒಟ್ಟು ಮಾರಾಟ 28,927 ಯುನಿಟ್ ಆಗಿತ್ತು. ಅಂದರೆ 2014, ಜನವರಿಯ ಮಾರಾಟಕ್ಕೆ ಹೋಲಿಸಿದರೆ ಇದು ಶೇ. 43 ವರ್ಧನೆ ಕಂಡುಕೊಂಡಿದೆ. ಜಾಗತಿಕ ಮಟ್ಟದಲ್ಲಿ ನೋಡುವುದಾದರೆ 2014ರ ಮಾರಾಟದಲ್ಲಿ ರೋಯಲ್ ಎನ್‌ಫೀಲ್ಡ್ ಅಮೆರಿಕದ ಹಾರ್ಲಿ ಡೇವಿಡ್‌ಸನ್ ಬೈಕ್‌ನ್ನು ಹಿಂದಿಕ್ಕಿದೆ. ಹಾರ್ಲಿ ಮಾರಾಟ 2.41 ಲಕ್ಷ ಯುನಿಟ್ ಆಗಿದ್ದರೆ, ಎನ್‌ಫೀಲ್ಡ್ ಮಾರಾಟ 3 ಲಕ್ಷ ಯುನಿಟ್ ದಾಟಿತ್ತು.
ರೋಯಲ್ ಎನ್‌ಫೀಲ್ಡ್ ಮುಂದಿನ ವರ್ಷ ಚೆನ್ನೈನಲ್ಲಿ ಹೊಸ ಟೆಕ್ನಾಲಜಿ ಸೆಂಟರ್ ಆರಂಭಿಸಲು ಕಂಪನಿ ಯೋಜನೆ ಹೂಡಿದ್ದು ಪ್ರಸಕ್ತ ವರ್ಷ 4.50 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಗುರಿಯನ್ನಿರಿಸಿದೆ.
Advertisement