ಬನ್ನಿ ಶಿಂಷಾ ಜಲಪಾತಕ್ಕೆ

ಶಿಂಷಾ ಜಲಪಾತ ಇರೋದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ. ಶಿಂಷಾ " ಅಥವಾ "ಶಿಂಷಾಪುರ" ಇದು ಮಂಡ್ಯ ಜಿಲ್ಲೆಯ ಮಳವಳ್ಳಿ...
ಶಿಂಷಾ ಜಲಪಾತ
ಶಿಂಷಾ ಜಲಪಾತ

ಮಳೆಗಾಲ ಬಂತೆಂದರೆ  ಜಲಪಾತಗಳನ್ನು ನೋಡುವ ಬಯಕೆ  ಆಗುತ್ತದೆ,  ಬೇಸಿಗೆಯಲ್ಲಿ ಉರಿದು ಬೆಂದ ಮನಸುಗಳು ಮಳೆಗಾಲದಲ್ಲಿ  ಜೀವ ತುಂಬಿಕೊಂಡು  ದುಮ್ಮಿಕ್ಕುವ ಜಲಪಾತಗಳನ್ನು ನೋಡುತ್ತಾ  ಪ್ರಫುಲ್ಲಗೊಳ್ಳುತ್ತವೆ . ಜಲಪಾತ ಅಂದ್ರೆ ಸಾಮಾನ್ಯವಾಗಿ ನೆನಪಾಗುವುದು   ಜೋಗ , ಗಗನಚುಕ್ಕಿ, ಭರಚುಕ್ಕಿ, ದುಬಾರೆ, ಇರ್ಪು, ಗೋಕಾಕ, ಮುಂತಾದವುಗಳು ,  ಇವುಗಳನ್ನೇ  ಹಲವಾರು ವರ್ಷಗಳಿಂದ ನೋಡಿ, ನೋಡಿ   ಆನಂದ ಪಟ್ಟ ನಮಗೆ ಅರೆ ಇಷ್ಟೇನಾ?  ಇರೋದು  ಬೇರೆ ಯಾವ್ದು  ಹೊಸ  ಜಲಪಾತ ಇಲ್ವಾ? ಎಂಬ ಪ್ರಶ್ನೆಗೆ  ಉತ್ತರ  ಇಲ್ಲಾ ಇನ್ನೂ  ಹಲವಾರು ಜಲಪಾತಗಳು ಇವೆ. ಆದರೆ ನಮಗೆ ಕಣ್ಣಿಗೆ ಬಿದ್ದಿಲ್ಲಾ  ಅನ್ನೋದು . ಬನ್ನಿ ಹಾಗಿದ್ರೆ ಬೆಂಗಳೂರಿನ ಸಮೀಪ ಇರೋ ಒಂದು ಅಪರೂಪದ  ಜಲಪಾತದ ದರ್ಶನ ಮಾಡೋಣ . ಅದೇ  "ಶಿಂಷಾ ಜಲಪಾತ "

ಶಿಂಷಾ ಜಲಪಾತ  ಇರೋದು  ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ.  ಶಿಂಷಾ " ಅಥವಾ "ಶಿಂಷಾಪುರ" ಇದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಂದು ಪ್ರಮುಖ ಸ್ಥಳ. ಸುತ್ತಲೂ ಕಾಡಿನಿಂದ ಬೆಟ್ಟಗಳಿಂದ ಕೂಡಿದ ಊರು ಇದು. ಬೆಂಗಳೂರಿನಿಂದ   ರಾಮನಗರ  , ಚೆನ್ನಪಟ್ಟಣ, ಮದ್ದೂರು  ಮಳವಳ್ಳಿಯ ಮೂಲಕ ಅಥವಾ ,  ಕನಕಪುರ ಮಳವಳ್ಳಿ ಮೂಲಕ  ಇಲ್ಲಿಗೆ ಬರಬಹುದು,  ಮೈಸೂರಿನಿಂದ ಬಂದರೆ   ಬನ್ನೂರು, ಮಳವಳ್ಳಿ, ಮೂಲಕ  ಇಲ್ಲಿಗೆ ಬರಬಹುದು . ಮಳವಳ್ಳಿ ಯಿಂದ ಕೊಳ್ಳೇಗಾಲಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಪಂಡಿತ ಹಳ್ಳಿಯ ಬಳಿ  ಸಿಗುವ ಜಂಕ್ಷನ್ ನಲ್ಲಿ ಎಡಕ್ಕೆ ಸಾಗುವ ರಸ್ತೆಯಲ್ಲಿ  ಸುಮಾರು ಹತ್ತು ಕಿ.ಮೀ. ಚಲಿಸಿದರೆ ಈ ಊರು ಸಿಗುತ್ತದೆ. ಬೆಂಗಳೂರಿನಿಂದ  ಸುಮಾರು  ೧೨೫  ಕಿಲೋಮೀಟರು  ಹಾಗು ಮೈಸೂರಿನಿಂದ  ೫೫ ಕಿಲೋಮೀಟರು ದೂರದಲ್ಲಿದೆ. ಬಸ್ಸಿನಲ್ಲಿ ಬಂದರೆ ಬೆಂಗಳೂರಿನಿಂದ  ಮಳವಳ್ಳಿಗೆ  ಬಂದು ಅಲ್ಲಿಂದ ಶಿಂಷಾಪುರ  ಎಂಬಲ್ಲಿಗೆ ಖಾಸಗಿ ಅಥವಾ ರಾಜ್ಯಸಾರಿಗೆ  ಬಸ್ಸುಗಳು  ಸಿಗುತ್ತವೆ. ಬಸ್ಸುಗಳ ಸಂಖ್ಯೆ  ಕಡಿಮೆ ಇರುವ ಕಾರಣ ನಿಮಗೆ ಆಪೆ  ಆಟೋಗಳ  ಸೌಕರ್ಯ ಸಿಗುತ್ತದೆ .ಜಲಪಾತ ನೋಡಲು ಹೋಗುವ  ಮುಂಚೆ  ಊಟ ತಿಂಡಿ  ವ್ಯವಸ್ಥೆ ಯನ್ನು ಮಳವಳ್ಳಿಯಲ್ಲಿ  ಮಾಡಿಕೊಂಡು ತೆರಳುವುದು ಉತ್ತಮ,   ಜೊತೆಗೆ ಇಲ್ಲಿಂದಲೇ  ತೆಗೆದುಕೊಂಡು ಹೋಗೋದು ಒಳ್ಳೆಯದು   ಇಲ್ಲದಿದ್ದರೆ  ಪ್ರವಾಸಿಗಳ ಈ ಪಯಣ ಪ್ರಯಾಸವಾಗುತ್ತದೆ.
" ಏಶಿಯಾ ಖಂಡದಲ್ಲೇ ಪ್ರಪ್ರಥಮವಾಗಿ  ಜಲ ವಿದ್ಯುತ್ ಯೋಜನೆಯನ್ನು ಇಲ್ಲಿ ಕೈಗೊಳ್ಳಲಾಗಿದೆ. ೧೯೦೨ ರಲ್ಲಿ ಅಂದಿನ ಮೈಸೂರು ಮಹಾರಾಜರಾದ  ನಾಲ್ಕನೆ ಕೃಷ್ಣರಾಜ ಒಡೆಯರ್ ರವರ ಆಡಳಿತ   ಕಾಲದಲ್ಲಿ ದಿವಾನ್ ಶೇಷಾದ್ರಿ ಐಯ್ಯರ್ ರವರ  ಉತ್ಸಾಹ ದೊಂದಿಗೆ ಈ ಯೋಜನೆ ಕಾರ್ಯ ರೂಪಕ್ಕೆ ಬಂದಿತು. ೧೭೨೦೦  ಕಿಲೋ ವ್ಯಾಟ್ ವಿಧ್ಯುತ್  ಉತ್ಪಾದನೆ  ಸಾಮರ್ಥ್ಯ ಹೊಂದಿದ ಈ ಯೋಜನೆ , ಮೊದಲು ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಪೂರೈಕೆ ಮಾಡಿ , ನಂತರ ಬೆಂಗಳೂರಿಗೆ  ೧೯೩೭ ರಲ್ಲಿ ವಿದ್ಯುತ್ ಪೂರೈಸಿದ ಹೆಗ್ಗಳಿಗೆ ಹೊಂದಿದೆ. ಶಿಂಷಾ ನದಿ ಈ ಊರಿನ ಹತ್ತಿರ ಜಲಪಾತ ನಿರ್ಮಿಸಿರುವ ಕಾರಣ  ಈ ಊರನ್ನು  "ಶಿಂಷಾಪುರ" ಅಥವಾ ಶಿಂಷಾ ಅಂತಾ ಕರೆಯುತ್ತಾರೆ."

ಶಿಂಷಾ  ಕಾಲೋನಿಯ ಪ್ರವೇಶ ದ್ವಾರದ ಪಕ್ಕದಲ್ಲಿ ಎಡಕ್ಕೆ ಸಾಗುವ ಹಾದಿಯಲ್ಲಿ ಸಾಗಿದರೆ , ಕಡಿದಾದ ಅಂಕು ಡೊಂಕಿನ   ಪ್ರಪಾತದಂತಹ ಇಳಿಜಾರಿನಲ್ಲಿ  ಹೊರಟ ನಮಗೆ  ಮೊದಲು  ಕಾಣುವುದು  ಈ ಉಳುಬ ಹಳ್ಳ [ಇದನ್ನು ಹಂದಿ ಹಳ್ಳ  ಅಂತಾನೂ ಕರೀತಾರೆ]. ಶಿಂಷಾ ಊರಿನ ಸುತ್ತಾ ಗುಡ್ಡ ಬೆಟ್ಟ ಹಾಗು ಕಾಡನ್ನು ಪ್ರಕೃತಿ  ಕೊಡುಗೆಯಾಗಿ ನೀಡಿದೆ,  ಮಳವಳ್ಳಿ ಸಮೀಪವಿರುವ  ಮಾರೆಹಳ್ಳಿ ಕೆರೆ ಬಹಳ ವಿಶಾಲವಾದ ಕೆರೆ , ಅಲ್ಲಿಂದ ಒಂದು ನೀರಿನ ಹಳ್ಳ ಅಥವಾ ಸಣ್ಣ ನೀರಿನ ಜರಿ   ಸಣ್ಣ ನದಿಯಂತೆ ಮಾರ್ಪಟ್ಟು  ಹರಿಯುತ್ತದೆ. ಅದನ್ನು ಇಲ್ಲಿನ  ಸ್ಥಳೀಯರು "ಹಂದಿ ಹಳ್ಳ " ಎನ್ನುತ್ತಾರೆ. ಆ ಹಂದಿ ಹಳ್ಳದ ನೀರು  ಮಾರೆ ಹಳ್ಳಿ ಕೆರೆಯಿಂದ  ಹರಿದು ಇಲ್ಲಿನ ಶಿಂಷಾ ನದಿಯನ್ನು ಸೇರುತ್ತದೆ.  ದಾರಿಯ ನಡುವೆ ಇಲ್ಲಿನ ಕಣಿವೆಯಲ್ಲಿ ಸಣ್ಣ ಜಲಪಾತ ವಾಗಿ ದುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ಇಲ್ಲಿ ಜಲಪಾತದ  ಅದ್ಭುತ ನೋಟವನ್ನು ಕಾಣಬಹುದು.

ಅಂಕು ಡೊಂಕಿನ ಕಡಿದಾದ ಅಪಾಯದ  ಹಾದಿ, ಸ್ವಲ್ಪ ಜಾರಿದರೂ ಪ್ರಪಾತ ಕಾಣುವುದು ಗ್ಯಾರಂಟೀ .ಈ ರಸ್ತೆಯನ್ನು ಬಹುಷಃ  ಜಲ ವಿದ್ಯುತ್ ಯೋಜನೆ ನಿರ್ಮಾಣ ಸಮಯದಲ್ಲಿ  ದೊಡ್ಡ ದೊಡ್ಡ ಯಂತ್ರಗಳನ್ನು ಸಾಗಿಸಲು  ಮಾಡಿರಬಹುದು. ಈ ಹಾದಿಯು ಪ್ರವಾಸಿಗರನ್ನು   ಬೆಟ್ಟದ ತಳಕ್ಕೆ ಕರೆದುಕೊಂಡು ಹೋಗುತ್ತದೆ, ಅಲ್ಲಿಂದ   ಶಿಂಷಾ ವಿದ್ಯುತ್ ಉತ್ಪಾದನಾ ಕೇಂದ್ರ  ಕಾಣುತ್ತದೆ, ಅಲ್ಲಿಂದ ಮುಂದುವರೆದರೆ  ಒಂದು ತೂಗು ಸೇತುವೆ ಸಿಕ್ಕುತ್ತದೆ . ಅದನ್ನೂ ಸಹ  ಸುಮಾರು ದಶಕಗಳ ಹಿಂದೆಯೇ ನಿರ್ಮಿಸಲಾಗಿದ್ದು,  ಬಲಿಷ್ಠವಾಗಿದೆ. ಹಲವು ಜನರು ಒಟ್ಟಿಗೆ ನಡೆದರೂ  ಅಲ್ಲಾಡದ ಇದರ ತಾಂತ್ರಿಕತೆ ಎಂಥವರನ್ನೂ ಬೆರಗುಗೊಳಿಸುತ್ತದೆ.​
ಹಸಿರ ಕಾಡಿನಲ್ಲಿ ಬಂಡೆ ಗಳನ್ನು ಹತ್ತಿಳಿದು, ಮರದ ಬೇರುಗಳನ್ನು  ದಾಟಿಕೊಂಡು  ನದಿಯ ಸನಿಹ  ಬಂದರೆ  ಕಣ್ಣೆದುರಿಗೆ  ರಮಣೀಯ ನೋಟ ಅನಾವರಣ ಗೊಳ್ಳುತ್ತದೆ ,  ಕಷ್ಟಪಟ್ಟು ಬರುವ  ಪ್ರವಾಸಿಗರಿಗೆ ಅಲ್ಲಿನ ನೋಟ ಬಹಳ ಮುದ ನೀಡಿ ನಮ್ಮ ಆಯಾಸ  ಮಾಯವಾಗಿ  ಹೊಸ ಚೈತನ್ಯ  ಮೂಡುತ್ತದೆ . ದೇವರಾಯನ ದುರ್ಗದಲ್ಲಿ ಹುಟ್ಟಿ  ಸುಮಾರು  ೨೫0 ಕಿಲೋಮೀಟರು ದೂರ ಹರಿದು ಬರುವ ಶಿಂಷಾ ನದಿ   ಕಾವೇರಿಯ ಒಡಲನ್ನು ಸೇರುವ ಮೊದಲು ಇಲ್ಲಿ ಜಲಪಾತವಾಗಿ  ದುಮ್ಮಿಕ್ಕಿ     ತನ್ನ ಸೌಂದರ್ಯ ಮೆರೆದು ದರ್ಶನ
ನೀಡುತ್ತದೆ .  ಮಳೆಗಾಲದಲ್ಲಿ ಇಲ್ಲಿಗೆ ಬರುವುದು ಅಸಾಧ್ಯ ವಾದರೂ  ಮಳೆಗಾಲ ಕಳೆದು ಇಲ್ಲಿಗೆ ಬಂದಲ್ಲಿ ಒಳ್ಳೆಯ ಅನುಭವ ಪಡೆಯಬಹುದು.ಪಕ್ಷಿ ವೀಕ್ಷಣೆ,  ಕಾಡಿನ ಅನುಭವ,  ಜಲಪಾತದ ಭೋರ್ಗರೆತ , ಇವೆಲ್ಲವೂ ಪ್ರವಾಸಿಗರ  ಮನಸನ್ನು  ಮುದಗೊಳಿಸಿ  ಪ್ರಸನ್ನ ಗೊಳಿಸುತ್ತದೆ  . ಕಾಡಿನ ನಡುವೆ ಇರುವ ಜಲಪಾತ ಆದ ಕಾರಣ ಒಮ್ಮೊಮ್ಮೆ  ವನ್ಯ ಜೀವಿಗಳ ದರ್ಶನ ಆಗುತ್ತದೆ, ಸುಂದರ ಪರಿಸರದಲ್ಲಿ  ಇರುವ ಜಲಪಾತ  ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ, ಬನ್ನಿ ಒಮ್ಮೆ ಅಲ್ಲಿಗೆ ಹೋಗೋಣ .

ಲೇಖನ, ಛಾಯಾಚಿತ್ರ -ನಿಮ್ಮೊಳಗೊಬ್ಬಬಾಲು
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com