
ಪುಟ್ಟ ನ್ಯಾನೋ ಈಗ ಹೊಸ ರೂಪ ತಾಳಿದೆ. ಹಲವಾರು ಬದಲಾವಣೆಗಳನ್ನು ಮೈಗೂಡಿಸಿಕೊಂಡಿರುವ ನ್ಯಾನೋ ಕಾರು ತೆರೆಯುವ ಡಿಕ್ಕಿ, ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಜತೆ ಹೊಸ ಲುಕ್ ಪಡೆದುಕೊಂಡಿದೆ. ನ್ಯಾನೋ ಆರಂಭವಾದ ಸಮಯದಲ್ಲೇ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಬಗ್ಗೆ ಸುದ್ದಿಯಾಗಿತ್ತು. ಇದೀಗ ಸ್ವಲ್ಪ ನಿಧಾನವಾಗಿಯಾದರೂ ಆಧುನಿಕ ಇಂಧನ ಕ್ಷಮತೆಯಿರುವ ಆ್ಯಟೋಮ್ಯಾಟಿಕ್ ಮ್ಯಾನುವಲ್ ಗಿಯರ್ ಬಾಕ್ಸ್ ಜತೆಗೆ ನ್ಯಾನೋ ಸಜ್ಜಾಗಿ ಬಂದಿದೆ.
ಹೊಸ ನ್ಯಾನೋ ಹಲವಾರು ಬದಲಾವಣೆಗಳಿಗೆ ಒಗ್ಗಿಕೊಂಡಿದೆ. ನ್ಯಾನೋ ಕಾರಿನ ಮುಂಭಾಗದಲ್ಲಿ ಹೊಸ ಬಂಪರ್, ಹೆಡ್ ಲ್ಯಾಂಪ್, ಗ್ರಿಲ್ಸ್‌ನಂತಿರುವ ಪ್ಲಾಸ್ಟಿಕ್ ಸ್ಟ್ರಾಪ್ ಬದಲಾವಣೆಯ ಕುರುಹು ನೀಡುತ್ತದೆ. ಅದೇ ವೇಳೆ ಫೋಗ್ ಲ್ಯಾಂಪ್, ಸ್ಮೋಕ್‌ಡ್ ಹೆಡ್ ಲ್ಯಾಂಪ್‌ಗಳಿಂದಾಗಿ ನ್ಯಾನೋಗೆ ಹೊಸ ಲುಕ್ ಬಂದಿದೆ. ಕಾರಿನ ಹಿಂಭಾಗದಲ್ಲಿನ ಬದಲಾವಣೆಯೆಂದರೆ ತೆರೆಯಲ್ಪಡುವ ಡಿಕ್ಕಿ ಮಾತ್ರ. ಡಿಕ್ಕಿಯಲ್ಲಿ ಸಾಧಾರಣ ದೊಡ್ಡದೇ ಎನ್ನುವಷ್ಟು ಜಾಗವೂ ಇದೆ.
ಪಿನ್ ಬಂಪರ್‌ಗಳು, ಹಿಂಭಾಗದ ಫೋಗ್ ಲ್ಯಾಂಪ್, ಇನ್‌ಫಿನಿಟಿ ಗ್ರಿಲ್ ಎಂದು ಹೇಳಲ್ಪಡುವ ಇಂಜಿನ್ ಗ್ರಿಲ್ ಇವು ಹೊಸ ನ್ಯಾನೋದ ವೈಶಿಷ್ಟ್ಯಗಳು. ಕಾರಿನೊಳಗಿನ ಫಿನಿಶಿಂಗ್ ಇನ್ನಷ್ಟು ಮೆರಗು ತಂದುಕೊಟ್ಟಿದೆ. ಉತ್ತಮ ಫಿನಿಶಿಂಗ್ ಇರುವ ಈಸಿ ಶಿಫ್ಟ್ ಗಿಯರ್ ನೋಬ್, ಸ್ಟಿಯರಿಂಗ್ ವೀಲ್, ಅತ್ಯುತ್ತಮ ಫ್ಯಾಬ್ರಿಕ್‌ನಿಂದ ತಯಾರಿಸಿದ ಸೀಟುಗಳು ಕೂಡಾ ಬದಲಾವಣೆಗೊಳಗಾಗಿ ಹೊಸತನಕ್ಕೊಳಗಾಗಿವೆ. ಬೂಟ್ ಪರಿಷ್ಕರಣೆಗೊಳಪಡಿಸಿದ ಕಾರಣ ಎಎಂಟಿ ಟ್ರಾನ್ಸ್‌ಮಿಷನ್ ಇರುವ ಕಾರಿನ ಸಾಮರ್ಥ್ಯ 94 ಲೀಟರ್ ಆಗುವುದು, ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರುವ ಮಾಡೆಲ್‌ಗಳ ಸಾಮರ್ಥ್ಯ 110 ಲೀಟರ್ ಆಗಲಿದೆ.
ಇಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಗರಿಷ್ಠ 38 ಬಿ ಹೆಚ್ ಪಿ ಸಾಮರ್ಥ್ಯವನ್ನು ನೀಡುವ, 634 ಸಿಸಿ, ಎರಡು ಸಿಲಿಂಡರ್ ಪೆಟ್ರೋಲ್ ಇಂಜಿನ್ ಜತೆ ನಾಲ್ಕು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇದೆ. ಆದರೆ ಟ್ಯೂನಿಂಗ್ ಪರಿಷ್ಕರಣೆಗೊಳಪಟ್ಟಿರುವುದರಿಂದ ಹೊಸ ಕಾರು ಲೀಟರ್ 21.90 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಹಳೆಯ ಮಾಡೆಲ್‌ಗಳಲ್ಲಿ ಪೆಟ್ರೋಲ್ ಟ್ಯಾಂಕಿನ ಶೇಖರಣಾ ಸಾಮರ್ಥ್ಯ 15 ಲೀಟರ್ ಆಗಿತ್ತು. ಇದೀಗ ಜೆನ್ ಎಕ್ಸ್ ನ್ಯಾನೋದಲ್ಲಿ ಇದು 24 ಲೀಟರ್ ಆಗಿದೆ. ಪವರ್ ಸ್ಟಿಯರಿಂಗ್, ಏರ್ ಕಂಡೀಷನರ್, ಸೆಂಟ್ರಲ್ ಆಟೋಮ್ಯಾಟಿಕ್ ಲಾಕಿಂಗ್, ಹೀಟರ್, ಬ್ಲೂಟೂತ್, ಯುಎಸ್‌ಬಿ ಕನೆಕ್ಟಿವಿಟಿ ಇರುವ ಮ್ಯೂಸಿಕ್ ಸಿಸ್ಟಂ ಮೊದಲಾದ ಸೌಕರ್ಯಗಳು ಇದರಲ್ಲಿವೆ.
ಇದೀಗ ರು. 5000 ಮುಂಗಡ ಹಣ ನೀಡಿ ಟಾಟಾ ಡೀಲರ್‌ಶಿಪ್‌ಗಳಲ್ಲಿ ಜೆನ್ ಎಕ್ಸ್ ನ್ಯಾನೋ ಬುಕ್ಕಿಂಗ್ ಆರಂಭವಾಗಿದೆ. ಮಾತ್ರವಲ್ಲದೆ ಈಗಾಗಲೇ ನ್ಯಾನೋ ಕಾರು ಹೊಂದಿರುವವರಿಗೆ ಪವರ್ ಆಫ್ ಒನ್ ಪ್ಲಸ್ ಒನ್ ಎಂಬ ವಿಶೇಷ ಎಕ್ಸ್‌ಚೇಂಜ್ ಯೋಜನೆಯನ್ನೂ ಟಾಟಾ ಮೊಟಾರ್ಸ್ ನೀಡಿದೆ. ನೀವು ಈಗಾಗಲೇ ನ್ಯಾನೋ ಮಾಲೀಕರಾಗಿದ್ದರೆ ಹಳೆಯ ಕಾರು ನೀಡಿ ಹೊಸ ಜೆನ್ ಎಕ್ಸ್ ನ್ಯಾನೋ ಖರೀದಿಸುವಾಗ ಎಕ್ಸ್ ಚೇಂಜ್ ಬೋನಸ್ ಆಗಿ ನಿಮಗೆ ರು. 20,000 ಕೂಡಾ ನೀಡಲಾಗುತ್ತದೆ. ಅಷ್ಟೇ ಅಲ್ಲ ನಿಮ್ಮ ಗೆಳಯರಿಗೆ, ಸಂಬಂಧಿಕರಿಗೆ ನ್ಯಾನೋ ಕಾರನ್ನು ಪರಿಚಯಿಸಿ ಅವರು ಕಾರು ಖರೀದಿಸಿದರೆ ಟಾಟಾ ಮೋಟಾರ್ಸ್ ನಿಮಗೆ ರು. 5000 ಬಹುಮಾನವಾಗಿ ನೀಡುತ್ತದೆ.
ಹೊಸ ಜೆನ್ ಎಕ್ಸ್ ನ್ಯಾನೋ, ಎಕ್ಸ್ ಇ, ಎಕ್ಸ್ ಎಂ, ಎಕ್ಸ್ ಟಿ, ಎಕ್ಸ್ ಟಿ ಎ (ಎಎಂಟಿ ) ಮೊದಲಾದ ಪ್ರವರ್ಗಗಳಲ್ಲಿ ಲಭ್ಯವಾಗಲಿವೆ. ನ್ಯಾನೋ ಜೆನ್‌ಎಕ್ಸ್ ಕಾರು ಮೇ. 19ರಂದು ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಪ್ರಸ್ತುತ ಕಾರಿನ ಬೆಲೆ ಎಷ್ಟೆಂದು ಬಹಿರಂಗವಾಗಿಲ್ಲವಾಗಿದ್ದರೂ, ಅದರ ಬೆಲೆ ರು. 3-3.25 ಲಕ್ಷ ಆಗಿರುವುದು ಎಂಬ ಊಹೆ ಇದೆ.
-ಅಂಜಲಿ
Advertisement