ಬಣಗುಡುತ್ತಿದ್ದ ಜೋಗಕ್ಕೆ ಬಿರು ಬೇಸಿಗೆಯಲ್ಲೂ ಜೀವಕಳೆ!

ನೀರಿಲ್ಲದೆ ಇಷ್ಟು ದಿನ ಸೊರಗಿದ್ದ ವಿಶ್ವವಿಖ್ಯಾತ ಜೋಗ ಜಲಪಾತ ಬಿರು ಬೇಸಿಗೆಯಲ್ಲೂ ಮೈದುಂಬಿ ಧುಮ್ಮಿಕ್ಕುತ್ತಿದೆ. 293 ಮೀಟರ್ ಎತ್ತರದಿಂದ ಧುಮ್ಮಿಕ್ಕುವ...
ಜೋಗ್ ಫಾಲ್ಸ್
ಜೋಗ್ ಫಾಲ್ಸ್

ಶಿವಮೊಗ್ಗ: ನೀರಿಲ್ಲದೆ ಇಷ್ಟು ದಿನ ಸೊರಗಿದ್ದ ವಿಶ್ವವಿಖ್ಯಾತ ಜೋಗ ಜಲಪಾತ ಬಿರು ಬೇಸಿಗೆಯಲ್ಲೂ ಮೈದುಂಬಿ ಧುಮ್ಮಿಕ್ಕುತ್ತಿದೆ. 293 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಇದೀಗ ಬಿರು ಬೇಸಿಗೆಯಲ್ಲೂ ಪ್ರವಾಸಿಗರಿಗೆ ಕಾಣಸಿಗಲಿದೆ.

ಶರಾವತಿ ವಿದ್ಯುದಾಗಾರ ಬೆಂಕಿಗೆ ಆಹುತಿಯಾಗಿದ್ದು, ಜೋಗ ಮೈದುಂಬಿ ಧುಮ್ಮಿಕ್ಕಲು ಕಾರಣವಾಗಿದೆ. ವಿದ್ಯುದಾಗಾರ ದುರಸ್ತಿಯಾಗಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೆ ಗೇರುಸೊಪ್ಪ ವಿದ್ಯುದಾಗಾರದಲ್ಲಿ ಗರಿಷ್ಠ ಮಟ್ಟದ ವಿದ್ಯುತ್ ಉತ್ಪಾದಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜೋಗ ಜಲಪಾತದ ಮೂಲಕ ಗೇರುಸೊಪ್ಪ ವಿದ್ಯುದಾಗಾರಕ್ಕೆ ನೀರು ಹರಿಸುತ್ತಿರುವುದರಿಂದ ಬೇಸಿಗೆಯಲ್ಲೂ ಜೋಗಕ್ಕೆ ಜೀವಕಳೆ ಬಂದಿದೆ.

ಜೋಗ ಜಲಪಾತವನ್ನು ಸರ್ವಋತು ಜಲಪಾತವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭಗೊಂಡಿದ್ದವು. ಈ ಬಾರಿ ಅನಿವಾರ್ಯವಾಗಿ ಜೋಗ ಸರ್ವಋತು ಜಲಪಾತವಾಗಿ ಮಾರ್ಪಟ್ಟಿದೆ. ಪ್ರಸ್ತುತ ಲಿಂಗನಮಕ್ಕಿ ಜಲಾಶಯದಿಂದ 3,000 ಕ್ಯುಸೆಕ್ ನೀರನ್ನು ತಲಕಳಲೆ ಬ್ಯಾಲೆನ್ಸಿಂಗ್ ಜಲಾಶಯದ ಮೂಲಕ ಗೇರುಸೊಪ್ಪ ವಿದ್ಯುದಾಗಾರಕ್ಕೆ ಹರಿಸಲಾಗುತ್ತಿದೆ.

ಇನ್ನೊಂದು ಸಾವಿರ ಕ್ಯೂಸೆಕ್ ನೀರು ಮಹಾತ್ಮಗಾಂಧಿ ವಿದ್ಯುದಾಗಾರದ ಕಡೆಗೆ ಹರಿಯುತ್ತಿದೆ. ಈ ಒಂದು ಸಾವಿರ ಕ್ಯೂಸೆಕ್ ನೀರಿನಲ್ಲಿ 600 ಕ್ಯುಸೆಕ್ ನೀರು, ಮಹಾತ್ಮಗಾಂಧಿ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಇನ್ನುಳಿದ 400 ಕ್ಯುಸೆಕ್ ನೀರು ಶರಾವತಿ ನದಿ ಮೂಲಕ ಜೋಗ ಜಲಪಾತದಲ್ಲಿ ಧುಮುಕಿ ಗೇರುಸೊಪ್ಪ ವಿದ್ಯುದಾಗಾರ ತಲುಪುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com