ಈ ಮಳೆಗಾಲದಲ್ಲಿ ಶಿರಸಿಗೆ ಬನ್ನಿ, ದೈವಿಕ ನಿಸರ್ಗ ಸೌಂದರ್ಯವನ್ನು ಆನಂದಿಸಿ

ಸಾಹಸಿ ಚಾರಣಿಗರಿಗೆ, ದೈವ ಭಕ್ತರಿಗೆ, ಪ್ರಕೃತಿ ಪ್ರಿಯರಿಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಉತ್ತಮ ತಾಣವಾಗಿದೆ.
ಈ ಮಳೆಗಾಲದಲ್ಲಿ   ಶಿರಸಿಗೆ ಬನ್ನಿ, ದೈವಿಕ ನಿಸರ್ಗ ಸೌಂದರ್ಯವನ್ನು ಆನಂದಿಸಿ
ಈ ಮಳೆಗಾಲದಲ್ಲಿ ಶಿರಸಿಗೆ ಬನ್ನಿ, ದೈವಿಕ ನಿಸರ್ಗ ಸೌಂದರ್ಯವನ್ನು ಆನಂದಿಸಿ
ಸಾಹಸಿ ಚಾರಣಿಗರಿಗೆ, ದೈವ ಭಕ್ತರಿಗೆ, ಪ್ರಕೃತಿ ಪ್ರಿಯರಿಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಉತ್ತಮ ತಾಣವಾಗಿದೆ. ಇದರಲ್ಲಿಯೂ ಶಿರಸಿ, ಕುಮಟಾ ಸುತ್ತಮುತ್ತಲಿನ ಪ್ರವಾಸಿ ತಾಣಗಳು ಪ್ರವಾಸಿಗರ ಕಣ್ಮನಗಳನ್ನು ತಣಿಸುವಲ್ಲಿ ಮುಂಚೂಣಿಯಲ್ಲಿರಲಿದೆ. ಮಳೆಗಾಲದ ಈ ದಿನಗಳಲ್ಲಿ ತೊಟ್ಟಿಕ್ಕುವ ಮಳೆ, ಮಂಜು ಮುಸುಕಿದ ಹಾದಿಯಲ್ಲಿ ಚಾರಣ ಮಾಡುವ ಮೋಜು ಅನುಭವಿಸಲು ಈ ಜಿಲ್ಲೆಗೆ ತೆರಳುವುದು ಉತ್ತಮ ಆಯ್ಕೆಯಾಗಲಿದೆ.
ಶಿರಸಿಯಿಂದ ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲಿ ಅನೇಕ ಪ್ರವಾಸಿ ಆಕರ್ಷಣೆಯ ತಾಣಗಳನ್ನು ನಾವು ಕಾಣಬಹುದಾಗಿದೆ.
ಉಂಚಳ್ಳಿ ಜಲಪಾತ
ಶಿರಸಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಈ ಸ್ಥಳ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಅಘನಾಶಿನಿ ನದಿಯಿಂದಾಗಿ ಸೃಷ್ಟಿಯಾಗಿರುವ ಈ ಜಲಪಾತದಲ್ಲಿ  116 ಮೀಟರ್ ಎತ್ತರದಿಂದ ಜಲಧಾರೆ ಧುಮುಕುವುದನ್ನು ಕಾಣಲು ಎರಡು ಕಣ್ಣುಗಳು ಸಾಲದಾಗುತ್ತದೆ. ಸಿದ್ದಾಪುರ ತಾಲೂಕಿನಲ್ಲಿ ಬರುವ ಈ ಜಲಪಾತಕ್ಕೆ ತೆರಳಲು ಶಿರಸಿಯಿಂದ ಎರಡು ಗಂಟೆಗಳ ಪ್ರಯಾಣ ಮಾಡಬೇಕಿದೆ. ಮಾರ್ಗದಲ್ಲಿ ಸಿಗುವ ಹೆಗ್ಗರ್ಣೆ ಯಿಂದ ಐದು ಕಿಮೀ ದೂರ ಕ್ರಮಿಸಿದರೆ ಈ ಅದ್ಭುತ ಜಲಧಾರೆ ಇರುವ ಸ್ಥಳ ತಲುಪಬಹುದು.
ಕಡಿದಾದ ಕಣಿವೆ, ಕಾಡು, ಬೆಟ್ಟಗಲ ನಡುವೆ ಇರುವ ಈ ಜಲಪಾತದ ಸಮೀಪಕ್ಕೆ ತಲುಪಲು 300 ಮೆಟ್ಟಿಲುಗಳನ್ನಿಳಿದು ಸಾಗಬೇಕು. ಪ್ರವಾಸಿಗರು ಇಷ್ಟು ಆಳಕ್ಕೆ ತಲುಪಿದಾಗ ಅವರು ಜಲಪಾತದ ಸಮೀಪ ದರ್ಶನ ಪಡೆಯಲು ಸಾಧ್ಯವಾಗಲಿದೆ, ಕಡಿದಾದ ಕಾಲುದಾರಿಯಿಂದ ಸಾಗುವ ಮೂಲಕ ಹಾಲಿನ ಬಣ್ಣದ ನೀರಿನ ಸೌಂದರ್ಯವನ್ನು ಸವಿಯುವ ಅವಕಾಶ ಪ್ರವಾಸಿಗರಿಗೆ ಇಲ್ಲಿ ದೊರೆಯಲಿದೆ.
1845 ರಲ್ಲಿ ಬ್ರಿಟೀಷ್ ಅಧಿಕಾರಿ ಜೆ.ಡಿ. ಲುಶಿಂಗ್ ಟನ್ ಈ ಜಲಪಾತವನ್ನು ಪತ್ತೆಹಚ್ಚಿದ್ದಕ್ಕಾಗಿ ’ಕೆಪ್ಪ ಜೋಗ’ ಎಂದು ಕರೆಯಲ್ಪಡುವ ಉಂಚಳ್ಳಿ ಫಾಲ್ಸ್ ಗೆ ’ಲುಷಿಂಗ್ ಟನ್ ಜಲಪಾತ ಎಂದೂ ಹೆಸರಿಸಲಾಗುತ್ತದೆ.
ಯಾಣ
ಶಿರಸಿಯಿಂದ 50 ಕಿ.ಮೀ ದೂರದಲ್ಲಿರುವ ಯಾಣವು ಸಾಹಸ ಪ್ರಿಯರಿಗೆ ಸ್ವರ್ಗವೆನಿಸಿದೆ. ಇಲ್ಲಿನ ಪ್ರಖ್ಯಾತ ’ಭೈರವೇಶ್ವರ ಶಿಖರ’ 120 ಮೀಟರ್ ಎತ್ತರ ಹೊಂದಿದ್ದರೆ ’ಮೋಹಿನಿ ಶಿಖರ’ 90 ಮೀಟರ್. ಎತ್ತರವಿದೆ. ಈ ಎರಡೂ ಕಡಿದಾದ, ಬೃಹತ್ ಗಾತ್ರದ ಬಂಡೆ ಕಲ್ಲುಗಳಾಗಿದ್ದು  ಕಪ್ಪು ಸ್ಪಟಿಕದಂತಹಾ ಶಿಲೆಯೊಡನೆ ಸುಣ್ಣದಕಲ್ಲಿನ ಸಂಯೋಜನೆಯಿಂದ ರಚಿತವಾಗಿದೆ. ಈ ಬಂಡೆಗಳ ಘನ ಗಂಭೀರ ನೋಟವೇ ನಮ್ಮ ಉಸಿರಾಟವನ್ನು ಕ್ಷಣ ಕಾಲ ಸ್ತಬ್ದಗೊಳಿಸುತ್ತದೆ.
ಯಾಣದ ಬಳಿಯೇ ಇರುವ ವಿಭೂತಿ ಫಾಲ್ಸ್ ಸಹ ಪ್ರವಾಸಿಗರ ಮನಸೋರೆಗೊಳ್ಳುವ ಇನ್ನೊಂದು ರಮ್ಯ ತಾಣವಾಗಿದೆ. 60-70 ಅಡಿಗಳಷ್ಟು ಎತ್ತರದಿಂದ ವಿವಿಧ ಧಾರೆಗಳಲ್ಲಿ ಧುಮ್ಮಿಕ್ಕುವ ನೀರು ಬೀಳುವ ರಭಸಕ್ಕೆ ವಿಭೂತಿಯನ್ನು ಕಂಡಂತೆ ಭಾಸವಾಗುವುದರಿಂದ ಇದಕ್ಕೆ ವಿಭೂತಿ ಜಲಪಾತ ಎನ್ನಲಾಗುವುದು. ಬೇರೆಲ್ಲ ಜಲಪಾತಗಳಿಗೆ ಹೋಲಿಸಿದರೆ ಇಲ್ಲಿ ಪ್ರವಾಸಿಗರ ದಟ್ಟಣೆ ಕಡಿಮೆ ಇರಲಿದೆ. ಬೆಳಗಿನ ಸಮಯ ಕಳೆಯುವುದಕ್ಕೆ ಇಲ್ಲಿನ ಸುತ್ತ ಮುತ್ತಲ ಹಸಿರು ವಾತಾವಣ ಪ್ರವಾಸಿಗರಿಗೆ ಉತ್ತಮ ಅವಕಾಶ ಒದಗಿಸುತ್ತದೆ.
ಮೀರ್ಜಾನ್ ಕೋಟೆ
ಇನ್ನು ಇಷ್ಟೆಲ್ಲಾ ನೋಡಿ ಮೀರ್ಜಾನ್ ಕೋಟೆ ನೋಡದಿದ್ದರೆ ಆ ಪ್ರವಾಸ ಅಪೂರ್ಣವಾದಂತೆ. 16 ನೇ ಶತಮಾನದ ಕೋಟೆ ಇದಾಗಿದ್ದು ರಾಣಿ ಚೆನ್ನಭೈರಾದೇವಿ ಇದನ್ನು ನಿರ್ಮಾಣ ಮಾಡಿದ್ದಳು. ಇಲ್ಲಿನ ಬಂದರನ್ನು ಗುಜರಾತಿನ ಬಂದರುಗಳೊಡನೆ ವ್ಯಾಪಾರಕ್ಕಾಗಿ ಬಳಸಲಾಗುತ್ತಿತ್ತು.
ಸಹಸ್ರ ಲಿಂಗ
ಶಾಲ್ಮಲಾ ನದಿದಂಡೆ ಹಾಗು ನಡು ನಡುವೆ ಇರುವ ಶಿವ ಲಿಂಗಗಳ ಅಪೂರ್ಣ ಕೆತ್ತನೆಗಳು ಮತ್ತು ಬಂಡೆಗಳ ವಿವುಧ ಸ್ವರೂಪಗಳು ಪ್ರಕೃತಿ ಪ್ರಿಯರ ಮನಗೆಲ್ಲಬಹುದಾದ ಇನ್ನೊಂದು ತಾಣ. ಇಲ್ಲಿ ನೂರಾರು ಲಿಂಗಗಳಿದ್ದು ಶಿವ ಭಕ್ತರಿಗೆ ಇದೊಂದು ಪವಿತ್ರ ಸ್ಥಳವೂ ಆಗಿದೆ. ಬೇಸಿಗೆ ಸಮಯದಲ್ಲಿ ನದಿಯಲ್ಲಿ ನೀರು ಕಡಿಮೆಯಾಗಿರುವಾಗ ಹಲವಾರು ಸಂಖ್ಯೆಯ ಲಿಂಗಗಳು ಮತ್ತಿತರೆ ರಚನೆಗಳು ಕಾಣಿಸಿಕೊಳ್ಳುತ್ತದೆ. ನೂರಾರು ಶಿವಲಿಂಗಗಳಿರುವ ಈ ಸ್ಥಳಕ್ಕೆ ಸಹಸ್ರ ಲಿಂಗ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಸೋದೆಯ ಅರಸನಾದ ಅರಸಪ್ಪ ನಾಯಕ ಈ ಲಿಂಗಗಳನ್ನು, ವಿಗ್ರಹಗಲನ್ನು ಕೆತ್ತಿಸಿದ್ದನೆಂದು ಇತಿಹಾಸಕಾರರು ಹೇಳುತ್ತಾರೆ.ಶಿವರಾತ್ರಿ ಸಮಯದಲ್ಲಿ, ಬಹುಸಂಖೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿರುವ ತೂಗು ಸೇತುವೆಯಿಂದ ಪ್ರವಾಸಿಗರು ಪ್ರಕೃತಿಯ ರಮ್ಯ ಸೌಂದರ್ಯವನ್ನು ಸವಿಯಬಹುದಾಗಿದೆ.
  • ಮಲೆನಾಡಿನ ಸೀಮೆಯಾದ ಶಿರಸಿ ನಗರಕ್ಕೆ ಉತ್ತಮ ರಸ್ತೆ ಸಂಪರ್ಕ ಇದ್ದು ಹತ್ತಿರದ ರೈಲು ನಿಲ್ದಾಣ ಕುಮಟಾ (45 ಕಿ.ಮೀ), ಹತ್ತಿರದ ವಿಮಾನ ನಿಲ್ದಾಣಗಳು ಮಂಗಳೂರು (260 ಕಿಮೀ), ಹುಬ್ಬಳ್ಳಿ (100 ಕಿಮೀ)
  • ಇಲ್ಲಿನ ಇತರೆ ಪ್ರೇಕ್ಷಣೀಯ ತಾಣಗಳೆಂದರೆ ವಾದಿರಾಜ ಮಠ ಮತ್ತು ಸ್ವರ್ಣಪಲ್ಲಿ ಸಂಸ್ಥಾನ ಮಠಗಳು. ಬೆಣ್ಣೆ ಹೊಳೆ ಜಲಪಾತ, ಶಿರಸಿಯಲ್ಲಿರುವ 1688ರಲ್ಲಿ ನಿರ್ಮಾಣವಾದ ಪ್ರಖ್ಯಾತ ಮಾರಿಕಾಂಬಾ ದೇವಾಲಯ
  • ತೊಡೇವು ಎನ್ನುವ ವಿಶೇಷ ತೆಳ್ಳನೆ ದೋಸೆ ಮತ್ತು ತಾಜಾ ಕಬಿನ ಹಾಲು ಇಲ್ಲಿನ ಸ್ಥಳೀಯ ಆಹಾರ ವೈಶಿಷ್ಟ್ಯಗಳಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com