2 ವರ್ಷದ ಆಡಳಿತದಲ್ಲಿ ಪ್ರಧಾನಿ ಮೋದಿ ಸರ್ಕಾರದ ವಿದೇಶಾಂಗ ನೀತಿಗಳು

ಮೋದಿ ಅವರಿಗೆ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸುವುದು ಸವಾಲಿನ ಸಂಗತಿಯಾಗಿತ್ತು.
ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಮೊದಲ ಬಾರಿಗೆ ಅಮೆರಿಕಗೆ ಭೇಟಿ ನೀಡಿದ ವೇಳೆ ಅಮೆರಿಕದಲ್ಲಿ ಮೋದಿ ಅಭಿಮಾನಿಯೊಬ್ಬರು ಕಂಡುಬಂದಿದ್ದು ಹೀಗೆ
ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಮೊದಲ ಬಾರಿಗೆ ಅಮೆರಿಕಗೆ ಭೇಟಿ ನೀಡಿದ ವೇಳೆ ಅಮೆರಿಕದಲ್ಲಿ ಮೋದಿ ಅಭಿಮಾನಿಯೊಬ್ಬರು ಕಂಡುಬಂದಿದ್ದು ಹೀಗೆ

ಪ್ರಧಾನಿ ನನ್ರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾದಾಗಿನಿಂದಲೂ ದೇಶದ ಬಹುತೇಕ ಯುವಕರಲ್ಲಿ ಭಾರತ ಜಗದ್ಗುರುವಾಗಲಿದೆ ಎಂಬ ನಿರೀಕ್ಷೆ ಟಿಸಿಲೊಡೆಯಲು ಪ್ರಾರಂಭವಾಗಿತ್ತು. ಭಾರತ ಜಾಗತಿಕ ಮಟ್ಟದಲ್ಲಿ ಮೈಕೊಡವಿಕೊಂಡು ನಿಲ್ಲಬೇಕಿದ್ದರೆ ದೇಶ ಆಂತರಿಕವಾಗಿ ಅಭಿವೃದ್ಧಿ ಹೊಂದುವುದರೊಂದಿಗೆ ಅಂತಾರಾಷ್ಟ್ರೀಯ ವಿಷಯಗಳಲ್ಲೂ ನೇತೃತ್ವ ವಹಿಸುವ ಅಥವಾ ಪ್ರಭಾವ ಬೀರುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಿತ್ತು.

ಮೋದಿ ಅವರಿಗೆ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸುವುದು ಸವಾಲಿನ ಸಂಗತಿಯಾಗಿತ್ತು. ನೆರೆರಾಷ್ಟ್ರಗಳ ಪ್ರಧಾನಿ/ ಅಧ್ಯಕ್ಷರನ್ನು ತಮ್ಮ ಪದಗ್ರಹಣ ಸಮಾರಂಭಕ್ಕೆ ಆಹ್ವಾನ ನೀಡಿ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ವಿಷಯದಲ್ಲಿ ಚಾಣಾಕ್ಷತನ ಮೆರೆದಿದ್ದರು.

ವಿದೇಶಾಂಗ ನೀತಿಯಲ್ಲಿ ಆದ್ಯತೆ ಹೊಂದಿರದ ರಾಷ್ಟ್ರಗಳೊಂದಿಗೆ ಪುನಃ ಸಂಬಂಧದ ಬೆಸುಗೆ:
ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿಳ್ಳುವುದು ಹಾಗು ಭಾರತಕ್ಕೆ ಪೈಪೋಟಿ ನೀಡಿ ನಮ್ಮ ರಾಷ್ಟ್ರಕ್ಕೆ ಮಗ್ಗುಲ ಮುಳ್ಳಾಗಿರುವ ಚೀನಾ- ಪಾಕಿಸ್ತಾನಗಳನ್ನು ನಿಯಂತ್ರಿಸುವುದಕ್ಕೆ ನೆರೆಯಲ್ಲಿರುವ ಸಣ್ಣ-ಪುಟ್ಟ ರಾಷ್ಟ್ರಗಳ ವಿಶ್ವಾಸ ಗಳಿಸುವುದು ಅಗತ್ಯ ಎಂಬುದನ್ನು ಮನಗಂಡಿದ್ದ ನರೇಂದ್ರ ಮೋದಿ ತಮ್ಮ  ಮೊದಲ ಭೇಟಿಯನ್ನು ನೆರೆಯಲ್ಲಿರುವ ರಾಷ್ಟ್ರ ಭೂತಾನ್ ಗೆ ನೀಡಿದರು. ಇದು ಚೀನಾಗೆ ನೀಡಿದ ದೊಡ್ಡ ಹೊಡೆತವಾಗಿತ್ತು.

ಚೀನಾ ಯಾವ ರಾಷ್ಟ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಭಾರತದ ಮೇಲೆ ಪ್ರಾಬಲ್ಯ ಮೆರೆಯಲು ಯತ್ನಿಸುತ್ತಿತ್ತೋ ಅದೇ ರಾಷ್ಟ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸಕ್ಕೆ ತೆಗೆದುಕೊಂಡು ಚೀನಾಗೆ ಪರೋಕ್ಷವಾಗಿ ತಿರುಗೇಟು ನೀಡುವುದು ಭೂತಾನ್, ನೇಪಾಳ, ಮಯನ್ಮಾರ್, ಶ್ರೀಲಂಕಾ ಮ೦ಗೋಲಿಯಾ, ಸಿಶೆಲ್ಸ್ ಭೇಟಿಯ ಉದ್ದೇಶವಾಗಿತ್ತು. ಮಂಗೋಲಿಯಾ ಸೇರಿದಂತೆ ಇನ್ನಿತರ ದೇಶಗಳಿಂದ ಯುರೇನಿಯಂ ಆಮದಿಗೆ ವ್ಯವಸ್ಥೆ ಮಾಡುವ ಮೂಲಕ ಮೋದಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದರು. ಇನ್ನು ಅದಾಗಲೇ ಚೀನಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದರ ಲಾಭ ಪಡೆದ ಭಾರತೀಯ ಅಧಿಕಾರಿಗಳು ಅಲ್ಲಿ ಚೀನಾ ವಿರೋಧಿ- ಭಾರತದ ಪರ ಒಲವಿರುವ ಮೈತ್ರಿಪಾಲ ಸಿರಿಸೇನಾ ಅಧ್ಯಕ್ಷರಾಗುವ ಪರಿಸ್ಥಿತಿ ಸಹ ಮೋದಿ ಸರ್ಕಾರದ ವಿದೇಶಾಂಗ ನೀತಿ ಯಶಸ್ಸಿಗೆ ಸಿಗುವ ಮತ್ತೊಂದು ಉದಾಹರಣೆ. ಆದರೆ ಇದೇ ಮಾದರಿಯ ತಂತ್ರ ನೇಪಾಳಕ್ಕೆ ಒಗ್ಗಲಿಲ್ಲ. ನೇಪಾಳವನ್ನು ಭಾರತ ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆಯಾದರೂ, ಸಾಂವಿಧಾನಿಕ ಬಿಕ್ಕಟ್ಟು, ಸರ್ಕಾರ ಬದಲಾವಣೆಯಿಂದ ಭಾರತ- ನೇಪಾಳ ಸಂಬಂಧ ಮತ್ತಷ್ಟು ಉತ್ತಮಗೊಳ್ಳಬೇಕಿದೆ.    

ಟಿಎಫ್‌ಎ ಒಪ್ಪಂದ: ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಅಂತಾರಾಷ್ಟ್ರೀಯ ವ್ಯವಹಾರಗಳ ವಿಷಯದಲ್ಲಿ ಎದುರಾದ ಸವಾಲು ಎಂದರೆ ಡಬ್ಲ್ಯೂ ಟಿ ಒ ಒಪ್ಪಂದದ ವಿಷಯ. ಅರ್ಥಾತ್ ಟ್ರೇಡ್ ಫೆಸಿಲಿಟೇಷನ್ ಅಗ್ರಿಮೆಂಟ್ (ಟಿಎಫ್‌ಎ). ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಯಾರಿಸಿದ್ದ ಕೃಷಿ ಉತ್ಪನ್ನ ಶೇಖರಣೆ, ಸಬ್ಸಿಡಿ ಕುರಿತಂತೆ ತಯಾರಿಸಿದ್ದ ಒಂದೆರಡು ಅಂಶಗಳು ನಡುಮಧ್ಯೆ ನುಸುಳಿ ಉಂಟು ಮಾಡಿದ್ದ ತಕರಾರು ಮುಂದುವರೆಯುತ್ತಿರುವ ರಾಷ್ಟ್ರಗಳನ್ನು ಕಂಗೆಡಿಸಿತ್ತು. ಡಬ್ಲ್ಯೂ ಟಿಒ ಒಪ್ಪಂದಕ್ಕೆ ಸಹಿಹಾಕುವಂತೆ ಹಿಂದಿನ ಯುಪಿಎ ಸರ್ಕಾರವನ್ನು ಒಪ್ಪಿಸುವುದು ಅಮೆರಿಕಾಗೇನು ಸವಾಲಿನ ಸಂಗತಿಯಾಗಿರಲಿಲ್ಲ. ಆದರೆ ವಿಶ್ವಸಂಸ್ಥೆಯಲ್ಲಿ ಎಲ್ಲಾ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕುವ ವೇಳೆಗೆ ಭಾರತದಲ್ಲಿ ಸರ್ಕಾರ ಬದಲಾಗಿ ಮೋದಿ ಸರ್ಕಾರ ಅಸ್ತಿತ್ವದಲ್ಲಿತ್ತು. ವಿಶ್ವಸಂಸ್ಥೆಯಲ್ಲಿ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳ ಧ್ವನಿಯಾಗಿ ನಿಲ್ಲಲು ಯಾವುದೇ ರಾಷ್ಟ್ರ, ನಾಯಕನೂ ಇರಲಿಲ್ಲ. ಆದರೆ ಮೋದಿ ಸರ್ಕಾರ ಕೃಷಿ ಉತ್ಪನ್ನ ಶೇಖರಣೆ, ಸಬ್ಸಿಡಿಗೆ ಸಂಬಂಧಿಸಿದ ಷರತ್ತುಗಳನ್ನು ತೀವ್ರವಾಗಿ ವಿರೋಧಿಸಿತ್ತು. ನನ್ನ ದೇಶದ ಬಡವರಿಗೆ ಆಹಾರ ಭದ್ರತೆ ಮೊದಲ ಆದ್ಯತೆ. ಉಳಿದಿದ್ದು ಆಮೇಲೆ ಎಂದು ನಿಷ್ಠುರವಾಗಿ ಹೇಳಿಬಿಟ್ಟಿತು. ಈ ನಡುವೆ ಭಾರತ ಹತ್ತಾರು ದೇಶಗಳನ್ನು ಬೇರೆಬೇರೆಯಾಗಿ ಸಂಪರ್ಕಿಸಿ ತನ್ನ ನಿಲುವನ್ನು ವಿವರಿಸಿ ಅವುಗಳನ್ನು ತನ್ನತ್ತ ಸೆಳೆಯಿತು. ಟಿಎಫ್‌ಎ ವಿಷಯದಲ್ಲಿ ನಿಧಾನವಾಗಿ ಭಾರತ ಬಲಿಷ್ಠವಾಯಿತು. ಕಾಯ್ದೆಗೆ ಸಂಬಂಧಪಟ್ಟಂತೆ ಎಲ್ಲ ಸದಸ್ಯ ರಾಷ್ಟ್ರಗಳೂ ಒಪ್ಪಿ, ನಿಯಮಗಳು ರೂಪುಗೊಳ್ಳುವವರೆಗೆ ಕಾಯ್ದೆ ಲಾಗೂ ಮಾಡಲು ಆತುರ ತೋರಬಾರದು ಎಂಬ ಭಾರತದ ಬೇಡಿಕೆಗೆ ವಿಶ್ವ ವ್ಯಾಪಾರ ಒಕ್ಕೂಟ ಕಟ್ಟುಬಿದ್ದಿತು. ಇದು ಮೋದಿ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ತನ್ನ ಪ್ರಭಾವ ಬೀರಿದ ರೀತಿ.

ಇನ್ನು ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಡಿಜಿಟಲ್ ಇಂಡಿಯಾದಂತಹ ಯೋಜನೆಗಳಿಗೆ ಜಪಾನ್, ಫ್ರಾನ್ಸ್, ಅಮೆರಿಕಾದಂತಹ ಆರ್ಥಿಕ ದಿಗ್ಗಜರುಗಳನ್ನು ಸೆಳೆಯಲು ಮೋದಿ ಕಳೆದ 2 ವರ್ಷಗಳಲ್ಲಿ ದೃಢಹೆಜ್ಜೆಗಳನ್ನಿಟ್ಟಿದ್ದಾರೆ. ಏತನ್ಮಧ್ಯೆ ಅಮೆರಿಕಾದೊಂದಿಗೆ ಅಮೆರಿಕದೊ೦ದಿನ ಅಣು ಒಪ್ಪ೦ದಕ್ಕೆ ಚಾಲನೆ ನೀಡಿ( ಒಪ್ಪಂದಕ್ಕೆ ಯುಪಿಎ ಅವಧಿಯಲ್ಲೆ ಸಹಿ ಹಾಕಲಾಗಿತ್ತು).  ಆಸ್ಟ್ರೇಲಿಯಾ, ಮ೦ಗೋಲಿಯಾ ಮು೦ತಾದ ದೇಶಗಳಿ೦ದ ಯುರೇನಿಯ೦ ಆಮದಿಗೆ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಭಾರತದ ವಿದ್ಯುಚ್ಛಕ್ತಿಯ ಕೊರತೆಯೂ ಇಲ್ಲವಾಗುತ್ತದೆ.

ಅರಬ್ ರಾಷ್ಟ್ರಗಳೊಂದಿಗೆ ಬಾಂಧವ್ಯದ ಬೆಸುಗೆ ಹಾಗೂ ಪಾಕ್ ವಿಷಯದಲ್ಲಿ ವೈಫಲ್ಯ:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮುಖವಾಡ ಕಳಚಲು ಹಾಗೂ ಪಾಕಿಸ್ತಾನ ಭಾರತದ ವಿರುದ್ಧ ಮಾಡುತ್ತಿರುತ್ತಿದ್ದ ಆರೋಪಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸುಳ್ಳು ಎಂದು ನಿರೂಪಿಸಲು ಮೋದಿ ರೂಪಿಸಿದ ಮಾಸ್ಟರ್ ಪ್ಲಾನ್ ಅರಬ್ ರಾಷ್ಟ್ರಗಳು, ಅಮೆರಿಕದೊಂದಿಗೆ ಉತ್ತಮ ಸ್ನೇಹ ಬೆಸೆಯುವುದಾಗಿತ್ತು. ಇದರಿಂದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿ ಉಳಿಯುವಂತಾಗುತ್ತಿತ್ತು. ಆದರೆ ಜಪಾನ್ ಭೇಟಿಯಲ್ಲಿ ಚೀನಾ ವಿರುದ್ಧ ನೇರಾನೇರವಾಗಿ ಮೋದಿ ಗುಡುಗಿದ್ದರ ಪರಿಣಾಮ ಎಂಬಂತೆ ಚೀನಾ ಇಂದು ಪಾಕಿಸ್ತಾನದ ಪರವಾಗಿ ನಿಂತಿದೆ. ಪರಿಣಾಮ ಪಾಕಿಸ್ತಾನವನ್ನು ನಿಯಂತ್ರಿಸುವ ಮೋದಿ ಸರ್ಕಾರದ ಯೋಜನೆಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಆದರೂ ಒಂದು ಹಂತದ ವರೆಗೆ ಯಶಸ್ಸು ದೊರೆತಿದ್ದು, ಭಾರತದ ಮೇಲೆ ಉಗ್ರರ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿತ್ತು. ಇಂತಹ ಹಲವು ಪ್ರಕರಣಗಳ ಮೂಲಕ ಮೋದಿ ಸರ್ಕಾರ ಪಾಕಿಸ್ತಾನದ ವಿಷಯದಲ್ಲಿ ಭಾಗಶಃ ಯಶಸ್ಸು ಗಳಿಸಿರುವುದು ಕಂಡುಬರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com