ಪ್ರಧಾನಿ ಮೋದಿ ಸಂಪುಟದ ಟಾಪ್ 6 ಸಚಿವರು

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ.26 ಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. ಪ್ರಧಾನಿಯಷ್ಟೇ ಅಲ್ಲದೇ ಅವರ ಸಂಪುಟದ ಸಚಿವರ ಕಾರ್ಯನಿರ್ವಹಣೆ, ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಸಚಿವರ ಪಟ್ಟಿ ಹಾಗೂ ಅವರ ಸಾಧನೆಗಳ ಕುರಿತ ಮಾಹಿತಿ ಇಲ್ಲಿದೆ.
ಪ್ರಧಾನಿ ಮೋದಿ ಸಂಪುಟದ ಟಾಪ್ 6 ಸಚಿವರು
ಪ್ರಧಾನಿ ಮೋದಿ ಸಂಪುಟದ ಟಾಪ್ 6 ಸಚಿವರು

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ.26 ಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. ಪ್ರಧಾನಿಯಷ್ಟೇ ಅಲ್ಲದೇ ಅವರ ಸಂಪುಟದ ಸಚಿವರ ಕಾರ್ಯನಿರ್ವಹಣೆ, ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಸಚಿವರ ಪಟ್ಟಿ ಹಾಗೂ ಅವರ ಸಾಧನೆಗಳ ಕುರಿತ ಮಾಹಿತಿ ಇಲ್ಲಿದೆ.

ಇಂಧನ ಸಚಿವ ಪಿಯೂಷ್ ಗೋಯಲ್: ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸದ್ದಿಲ್ಲದೇ, ವಿವಾದಕ್ಕೀಡಾಗದೇ ಕಾರ್ಯನಿರ್ವಹಿಸುವ ಸಚಿವರಲ್ಲಿ ಪಿಯೂಷ್ ಗೋಯೆಲ್ ಪ್ರಮುಖರು. ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷಗಳೇ ಕಳೆದಿವೆ. ನರೇಂದ್ರ ಮೋದಿ ಸಂಪುಟದಲ್ಲಿ ಪಿಯೂಷ್ ಗೋಯಲ್ ಇಂಧನ ಖಾತೆ ಸಚಿವಾಲಯದ ಅಧಿಕಾರ ವಹಿಸಿಕೊಂಡಾಗಭಾರತದಲ್ಲಿ ವಿದ್ಯುತ್ ಕಂಬಗಳನ್ನೇ ಕಾಣದ 18 ,000 ಗ್ರಾಮಗಳಿದ್ದವು.  ಸಚಿವ ಎರಡು ವರ್ಷಗಳಲ್ಲಿ 7,874 ಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಪಿಯೂಷ್ ಗೋಯಲ್ ಅವರ ಪ್ರಮುಖ ಸಾಧನೆ. ಈ ಕಾರ್ಯವನ್ನು ಅದೇ ವೇಗದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಪೀಯೂಷ್ ಗೋಯಲ್ ಅವರ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಗೆ ಉತ್ತಮ ಉದಾಹರಣೆ. ಪಿಯುಷ್ ಗೋಯಲ್  2017 ರ ಮಾರ್ಚ್ ವೇಳೆಗೆ ಎಲ್ಲಾ 18 ,452 ಗ್ರಾಮಗಳನ್ನೂ ವಿದ್ಯುತ್ ಸಂಪರ್ಕದೊಂದಿಗೆ ಬೆಸೆಯುವ
ಗುರಿ ಹೊಂದಿದ್ದಾರೆ. ಪಿಯೂಷ್ ಗೋಯಲ್ ಅವರ ಕಾರ್ಯನಿರ್ವಹಣೆಯ ವೇಗ ಇದೇ ರೀತಿ ಮುಂದುವರೆದಲ್ಲಿ  2018 ರ ಮೇ ವೇಳೆಗೆ ಮನೆ ಮನೆಗಳಲ್ಲೂ ವಿದ್ಯುತ್ ಬೆಳಗಲಿವೆ.

ಇನ್ನು ವಿದ್ಯುತ್ ನ ಮಿತ ಬಳಕೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅನುಕೂಲವಾಗುವಂತಹ ಎಲ್ ಇಡಿ ಬಲ್ಬ್ ಗಳ ಬೆಲೆಯನ್ನು ಸಾಮಾನ್ಯ ಜನರಿಗೂ ಎಟಕುವ ದರಕ್ಕೆ ಇಳಿಸಿದ್ದರ ಹಿಂದೆಯೂ ಪಿಯೂಷ್ ಗೋಯಲ್ ಅವರ ಶ್ರಮವಿದೆ. ಇದರಿಂದಾಗಿ ಎಲ್ ಇಡಿ ಬಲ್ಬ್ ಗಳ ದರದಲ್ಲಿ ಗಣನೀಯ ಪ್ರಮಾಣದ ಬೆಲೆ ಇಳಿಕೆಯಾಗಿದ್ದು ಮಿತ ಬಳಕೆ ಗುರಿ ಹಂತ ಹಂತವಾಗಿ ಈಡೇರುತ್ತಿದೆ.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್: ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲನೇ ಸಂಪುಟ ವಿಸ್ತರಣೆ ವೇಳೆ ಸೇರಿಸಿಕೊಂಡರು. ವಿವಾದಗಳಿಂದ ದೂರ ಇದ್ದು ಸದ್ದಿಲ್ಲದೇ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವುದರಲ್ಲಿ ನಿಸ್ಸೀಮರು ಮನೋಹರ್ ಪರಿಕ್ಕರ್. ಉಪಕರಣಗಳ ಆಧುನೀಕರಣ, ದೇಶೀಯವಾಗಿ ಯುದ್ಧವಿಮಾನಗಳ ನಿರ್ಮಾಣ, ಯುದ್ಧವಿಮಾನಗಳ ಆಧುನೀಕರಣ ಸೇರಿದಂತೆ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಾಗಿನಿಂದ ರಕ್ಷಣಾ ಇಲಾಖೆಯಲ್ಲಿಯೂ ಮಹತ್ತರ ಬದಲಾವಣೆಗಳಾಗಿವೆ. ಅಮೆರಿಕದಲ್ಲಿ ಪೆಂಟಗನ್ ನಲ್ಲಿ ಬಳಕೆಯಾಗದೆ ಉಳಿದಿದ್ದ 20096 ಕೋಟಿ ರೂಪಾಯಿ ಹಣವನ್ನು ಪತ್ತೆ ಮಾಡಿ 2015 -16 ರಲ್ಲಿ ರಕ್ಷಣಾ ವೆಚ್ಚಕ್ಕೆ ಬಳಸಿಕೊಂಡಿದ್ದು ಮನೋಹರ್ ಪರಿಕ್ಕರ್ ಅವರ ಪ್ರಮುಖ ಸಾಧನೆಯಾಗಿದೆ.
ರೈಲ್ವೆ ಸಚಿವ  ಸುರೇಶ್ ಪ್ರಭು: ಆಡಳಿತವನ್ನು ತಂತ್ರಜ್ಞಾನದೊಂದಿಗೆ ಬೆಸೆದು, ರೈಲ್ವೆ  ಇಲಾಖೆಗೆ ಹೊಸ ಆಯಾಮ ನೀಡಿದ ಸಚಿವ ಸುರೇಶ್ ಪ್ರಭು. ರೈಲ್ವೆ ಬಜೆಟ್ ಗಳಲ್ಲಿ ಇಲಾಖೆಯ  ಅಭಿವೃದ್ಧಿ ಹಾಗೂ ಪ್ರಯಾಣಿಕ ಸ್ನೇಹಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎರಡು ರೈಲ್ವೆ  ಬಜೆಟ್ ನ್ನು ಮಂಡಿಸಿದ್ದಾರೆ. ಪ್ರಯಾಣಿಕರ ಸಮಸ್ಯೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಉತ್ತರಿಸುವುದು ಪ್ರಭು ಅವರ ಮತ್ತೊಂದು ಸ್ಪೆಷಾಲಿಟಿ. ಹಾಗೂ ಅಧಿಕಾರಿಗಳನ್ನು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿ ರೈಲ್ವೆಯನ್ನು ಬದಲಾವಣೆ ಪಥದಲ್ಲಿ  ಕೊಂಡೊಯ್ಯುತ್ತಿರುವುದು ಸುರೇಶ್ ಪ್ರಭು ಅವರ ಸಾಧನೆಯಾಗಿದ್ದು ಮೋದಿ ಸಂಪುಟದಲ್ಲಿ ಅತ್ಯುತ್ತಮವಾಗಿ  ಕಾರ್ಯನಿರ್ವಹಣೆ ಮಾಡುತ್ತಿರುವ ಸಚಿವರೆಂದೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ.
ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್: ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದ ಮತ್ತೊಬ್ಬ ಸಚಿವರು ಸುಷ್ಮಾ ಸ್ವರಾಜ್ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸುಷ್ಮಾ ಸ್ವರಾಜ್ ಎಂದರೆ ತಕ್ಷಣ ನೆನಪಿಗೆ ಬರುವುದು ಯೆಮೆನ್ ಕಾರ್ಯಾಚರಣೆ. ಯುದ್ಧಪೀಡಿತ ಯೆಮೆನ್‌ನಲ್ಲಿ ಸಿಲುಕಿರುವ 4 ಸಾವಿರ ಭಾರತೀಯರನ್ನು ರಕ್ಷಿಸಿ, ತಾಯ್ನಾಡಿಗೆ ಕರೆತಂದ ಹೆಗ್ಗಳಿಕೆ ಸುಷ್ಮಾ ಸ್ವರಾಜ್ ಹಾಗೂ ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಅವರಿಗೆ ಸಲ್ಲುತ್ತದೆ. ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವಿದೇಶದಲ್ಲಿರುವ ಭಾರತೀಯರೊಂದಿಗಿನ ಸಂಪರ್ಕ. ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ವಿದೇಶಾಂಗ ನೀತಿಯನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುವುದರಲ್ಲಿ ಸುಷ್ಮಾ ಸ್ವರಾಜ್ ಯಶಸ್ವಿ ಸಚಿವೆ ಎನಿಸಿಕೊಂಡಿದ್ದಾರೆ. ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲಿರುವ ಭಾರತೀಯರಿಂದಲೂ ಸುಷ್ಮಾ ಸ್ವರಾಜ್ ಅವರ ಕಾರ್ಯನಿರ್ವಹಣೆ ಮೆಚ್ಚುಗೆ ಪಡೆದಿದೆ.
ಗೃಹ ಸಚಿವ ರಾಜನಾಥ್ ಸಿಂಗ್: ಪ್ರಧಾನಿ ಮೋದಿ ಸಂಪುಟದಲ್ಲಿ ನಂ.2 ನೇ ಸ್ಥಾನದಲ್ಲಿರುವ ರಾಜನಾಥ್ ಸಿಂಗ್ ಆಪರೇಷನ್ ಸ್ಮೈಲ್ ಕಾರ್ಯಾಚಾರಣೆಯನ್ನು ಪ್ರಾರಂಭಿಸಿ, ಗುಲಾಮಗಿರಿ, ಶೋಷಣೆಗೆ ಒಳಗಾಗಿದ್ದ ಹಾಗೂ ಕುಟುಂಬದಿಂದ ಕಳೆದುಹೋಗಿದ್ದ 19,000 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾರೆ. ದೇಶದ ಭದ್ರತೆ ವಿಷಯದಲ್ಲಿ ಜಾಗರೂಕರಾಗಿರುವ ರಾಜನಾಥ್ ಸಿಂಗ್ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಭಯೋತ್ಪಾದನೆ ಹೆಚ್ಚು ಸಂಭವಿಸಿಲ್ಲ ಎಂಬುದು ಪ್ಲಸ್ ಪಾಯಿಂಟ್. ಅಷ್ಟೇ ಅಲ್ಲದೇ ಜಮ್ಮು-ಕಾಶ್ಮೀರ, ತಮಿಳುನಾಡು ಸೇರಿದಂತೆ ಕೆಲವೆಡೆ ನೈಸರ್ಗಿಕ ವಿಪತ್ತು ಸಂಭವಿಸಿದಾಗ, ಯಶಸ್ವಿಯಾಗಿ ವಿಪತ್ತು ನಿರ್ವಹಣೆಯನ್ನು ಮಾಡಿದ್ದೂ  ಗೃಹ ಸಚಿವರ ಸಾಮರ್ಥ್ಯವನ್ನು ತೋರಿಸುತ್ತದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ಹಣಕಾಸು ಖಾತೆಯನ್ನು ನಿರ್ವಹಿಸುತ್ತಿರುವ ಅರುಣ್ ಜೇಟ್ಲಿ, ಕಪ್ಪು ಹಣದ ವಾಪಸ್ ತರುವ ಪ್ರಕ್ರಿಯೆ ವಿಷಯದಲ್ಲಿ ಭಾರಿ ಟೀಕೆ ಎದುರಿಸಬೇಕಾಯಿತು. ಆದರೆ ಹಣದುಬ್ಬರ ನಿಯಂತ್ರಣ, ಹಣಕಾಸು ನೀತಿಗಳಲ್ಲಿ ಸುಧಾರಣೆ ತಂದಿರುವುದು, ಜಿಎಸ್ ಟಿ ಮಸೂದೆ ಅಂಗೀಕಾರಕ್ಕೆ ಶ್ರಮಿಸಿದ್ದು ಹಾಗೂ ಉತ್ತಮ ಬಜೆಟ್ ನೀಡುವುದೇ ಅವರ ಪ್ರಮುಖ ಸಾಧನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com