ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಟಾಪ್ 10 ಯೋಜನೆಗಳು

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಇದೇ ಮೇ 26ಕ್ಕೆ ಎರಡು ವರ್ಷ ಪೂರೈಸಲಿದ್ದು, ಕಳೆದ ಎರಡು ವರ್ಷದಲ್ಲಿ ಮೋದಿ ಸರ್ಕಾರ...
ಟಾಪ್ 10 ಯೋಜನೆಗಳು
ಟಾಪ್ 10 ಯೋಜನೆಗಳು

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಇದೇ ಮೇ 26ಕ್ಕೆ ಎರಡು ವರ್ಷ ಪೂರೈಸಲಿದ್ದು, ಕಳೆದ ಎರಡು ವರ್ಷದಲ್ಲಿ ಮೋದಿ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳು ಈ ಕೆಳಕಂಡಂತಿವೆ.

ಸುಕನ್ಯಾ ಸಮೃದ್ಧಿ ಯೋಜನೆ
ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಬೇಟಿ ಬಚಾವೋ ಬೇಟಿ ಪಡಾವೇ ಅಶಯದಡಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಸಹಯವಾಗುವದು ಈ ಯೋಜನೆ ಉದ್ದೇಶ.

ಪ್ರಧಾನಮಂತ್ರಿ ಜನಧನ ಯೋಜನೆ
ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇರಬೇಕೆಂಬ ಮಹಾನ್ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯಾಗಿದೆ. ಈ ಯೋಜನೆಯಡಿ ಸುಮಾರು 10 ಕೋಟಿಗೂ ಹೆಚ್ಚು ಜನರು ಬ್ಯಾಂಕ್ ಖಾತೆ ತೆರೆದಿದ್ದಾರೆ.

ಸಬ್ಸಿಡಿ ನೇರ ನಗದು ವರ್ಗಾವಣೆ
ಗ್ಯಾಸ್ ಹಾಗೂ ಇನ್ನಿತರ ಸಬ್ಸಿಡಿಗಳನ್ನು ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲದೆ ನೇರ ನಗದು ವರ್ಗಾವಣೆ ಯೋಜನೆಯನ್ನು ಪ್ರಧಾನಿ ಮೋದಿ ಸರ್ಕಾರ ಮರುಜಾರಿ ಮಾಡಿತು. ಬ್ಯಾಂಕ್ ಖಾತೆ ಮತ್ತು ಗ್ಯಾಸ್ ನಂಬರನ್ನು ಸಂಯೋಜಿಸಿದರೆ ಸಾಕು ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಪ್ರಧಾನಮಂತ್ರಿ ಸುರಕ್ಷಾ ವಿಮೆ
ಅಪಘಾತ ವಿಮೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ಜಾರಿಗೆ ತಂದಿತು. ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಎಲ್ಲ ಗ್ರಾಹಕರಿಗೂ ಈ ಯೋಜನೆಯಡಿ ಅಪಘಾತ ವಿಮಾ ಸೌಲಭ್ಯ ಲಭಿಸಲಿದೆ. ಇದಕ್ಕಾಗಿ ಗ್ರಾಹಕರ ಖಾತೆಯಿಂದ ನೇರವಾಗಿ ಮಾಸಿಕ 1 ರು, ವಿಮಾ ಕಂತನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯಕ್ಕೆ ತುತ್ತಾದರೆ 2 ಲಕ್ಷ ರು. ವಿಮೆ ಸಿಗಲಿದೆ. 18 ರಿಂದ 70 ವರ್ಷದವರಿಗೆ ಈ ಸೌಲಭ್ಯ ಲಭಿಸಲಿದೆ.

ಜೀವನಜ್ಯೋತಿ ವಿಮೆ ಯೋಜನೆ
ಜೀವನಜ್ಯೋತಿ ವಿಮೆ ಯೋಜನೆ ಅಡಿಯಲ್ಲಿ ವಾರ್ಷಿಕ 330 ರು. ಕಂತು ಪಾವತಿಸುವ 18 ರಿಂದ 50 ವರ್ಷದೊಳಗಿನ ವ್ಯಕ್ತಿಗಳು ಯಾವುದೇ ರೀತಿಯ ಸಾವಿಗೆ ತುತ್ತಾದರೂ ಅವರ ಕುಟುಂಬದವರಿಗೆ 2 ಲಕ್ಷ ರು ವಿಮೆ ನೀಡುವ ಯೋಜನೆ ಇದಾಗಿದೆ.

ಮೇಕ್ ಇನ್ ಇಂಡಿಯಾ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೆ ತರಲಾಗಿದೆ. ಭಾರತದಲ್ಲೇ ತಯಾರಿಸಿ ಅಭಿಯಾನದ ಮೂಲಕ ಸ್ಥಳೀಯ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿ ರೈಲ್ವೇ ಇಲಾಖೆಯಲ್ಲಿ ಕೆಲ ಭಾಗಗಳನ್ನು ತಯಾರಿಸಲಾಗುತ್ತಿದೆ.

ಚಿನ್ನ ನಗದೀಕರಣ ಯೋಜನೆ
ಪ್ರಧಾನಿ ನರೇಂದ್ರ ಮೋದಿ ಅವರ ಬಹು ಮಹಾತ್ವಕಾಂಕ್ಷೆಯ ಚಿನ್ನ ನಗದೀಕರಣ ಯೋಜನೆಯನ್ನು 2015ರ ಅಕ್ಟೋಬರ್ 22ರಂದು ಜಾರಿಗೆ ತರಲಾಯಿತು. ಗೋಲ್ಡ್ ಬಾಂಡ್ ಮತ್ತು ಗೋಲ್ಡ್ ಡೆಪಾಸಿಟ್ ಎಂಬ ಎರಡು ವಿಧದ ಯೋಜನೆಗಳಾಗಿವೆ. ಆದರೆ ಈ ಎರಡು ಯೋಜನೆಗಳಿಗೆ ಸದ್ಯ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೈಫಲ್ಯ ಕಾಣುತ್ತಿದೆ.

ನಮಾಮಿ ಗಂಗೆ
ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಾರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ. ಇದಕ್ಕಾಗಿ ಕೇಂದ್ರ ಸರ್ಕಾರ ತನ್ನ ಮೊದಲ ಬಜೆಟ್ನಲ್ಲಿ 2,037 ಕೋಟಿ ರೂ. ಮೀಸಲಿರಿಸಿತ್ತು. ಐದು ವರ್ಷಗಳ ಅವಧಿಗಾಗಿ 20,000 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಮೀಸಲಿರಿಸಲಾಗಿದೆ. 2022ರ ವೇಳೆಗೆ ಗಂಗಾನದಿ ದಡದಲ್ಲಿರುವ 1,632 ಗ್ರಾಮಪಂಚಾಯಿತಿಗಳು ಬಯಲುಶೌಚದಿಂದ ಮುಕ್ತವಾಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಗಂಗಾ ನದಿಯ ಶುದ್ಧೀಕರಣದ ಭಾಗವಾಗಿ ನದಿಯನ್ನು ಕಲುಶಿತಗೊಳಿಸುವ ತ್ಯಾಜ್ಯ ಬಿಡುಗಡೆ ಮಾಡುವ ಕೈಗಾರಿಕೆಗಳು ಅಥವಾ ವ್ಯಕ್ತಿಗಳ ಕುರಿತು ಫೋಟೊ ಸಹಿತ ಮಾಹಿತಿಯನ್ನು ಸರ್ಕಾರಕ್ಕೆ ದೂರು ನೀಡಲು ‘ಭುವನ ಗಂಗಾ’ ಮೊಬೈಲ್ ಆಪ್ ಬಿಡುಗಡೆ.

ಬೇಟಿ ಬಚಾವೋ ಬೇಟಿ ಪಢಾವೋ
ಲಿಂಗಾನುಪಾತದಲ್ಲಿ ಅಸಮಾನತೆ, ಹೆಣ್ಣು ಭ್ರೂಣಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಹೆಣ್ಣುಮಕ್ಕಳನ್ನು ರಕ್ಷಿಸಲು 2015 ರ ಜನವರಿ 22 ರಂದು ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜಾರಿಗೊಳಿಸಿತ್ತು. ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದು, ಹೆಣ್ಣುಮಕ್ಕಳ ರಕ್ಷಣೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಯೋಜನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ 2015 ರ ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಸೆಲ್ಫಿ ವಿತ್ ಡಾಟರ್ ಎಂಬ ಹ್ಯಾಶ್ ಟ್ಯಾಗ್ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಭಾರತದಲ್ಲಷ್ಟೇ ಅಲ್ಲದೇ, ವಿದೇಶಗಳಲ್ಲೂ ಸೆಲ್ಫಿ ವಿತ್ ಡಾಟರ್ ಅಭಿಯಾನ ಸದ್ದು ಮಾಡಿದ್ದು ವಿಶೇಷ. ಈ ಯೋಜನೆ ಘೋಷಣೆಯಾದ ಬಳಿಕ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಹೆಣ್ಣುಭ್ರೂಣ ಹತ್ಯೆ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಅಟಲ್ ಪಿಂಚಣಿ ಯೋಜನೆ
ಅಸಂಘಟಿತ ವಲಯದ ಉದ್ಯೋಗಿಗಳ ವಿಮೆ ಮತ್ತು ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. 1 ಸಾವಿರದಿಂದ 5 ಸಾವಿರದವರೆಗೂ ಕನಿಷ್ಠ ನಿಶ್ಚಿತ ಪಿಂಚಣಿ ನೀಡುವ ಯೋಜನೆ ಇದಾಗಿದೆ. 60ನೇ ವಯಸ್ಸಿನಿಂದ ಪಿಂಚಣಿ ಆರಂಭವಾಗಲಿದೆ. 18 ರಿಂದ 40 ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದು. ಪಿಂಚಣಿ ಪಡೆಯಬೇಕಾದರೆ 20 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವರ್ಷ ಈ ಯೋಜನೆಯಲ್ಲಿ ಹಣ ತೊಡಗಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com