ಮೋದಿ ಸರ್ಕಾರ 2 ವರ್ಷಗಳಲ್ಲಿ ಒತ್ತಡಕ್ಕೆ ಮಣಿದು ವಾಪಸ್ ತೆಗೆದುಕೊಂಡ ಪ್ರಮುಖ ನಿರ್ಧಾರ-ನೀತಿಗಳು

ಕೇಂದ್ರ ಸರ್ಕಾರದ 2 ವರ್ಷಗಳ ಅವಧಿಯಲ್ಲಿ ಗೊಂದಲ ಮೂಡಿಸಿ ಒತ್ತಡಕ್ಕೆ ಮಣಿದ ಸರ್ಕಾರ ವಾಪಸ್ ಪಡೆದ ಅಥವಾ ಕೈಬಿಟ್ಟ ನೀತಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕೇಂದ್ರ ಸಚಿವ ಸಂಪುಟ ಸಭೆ( ಸಂಗ್ರಹ ಚಿತ್ರ)
ಕೇಂದ್ರ ಸಚಿವ ಸಂಪುಟ ಸಭೆ( ಸಂಗ್ರಹ ಚಿತ್ರ)

ಯುಪಿಎ ಸರ್ಕಾರದ ಸತತ 2 ವರ್ಷಗಳ ಆಡಳಿತದ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಬದಲಾವಣೆಗೊಂಡ ಸರ್ಕಾರದ  ಯೋಜನೆಗಳು ಹಾಗೂ ಹೊಸ ನೀತಿಗಳೂ ಜನರ ಗಮನ ಸೆಳೆದಿವೆ. ಅಂತೆಯೇ ಕೆಲವೊಂದು ವಿಷಯಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರದ ನೀತಿಗಳು ಏಳು-ಬೀಳಿನ ಹಾದಿಯಲ್ಲಿ ಸಾಗಿದ್ದು ಉಂಟು. ಕೇಂದ್ರ ಸರ್ಕಾರದ 2 ವರ್ಷಗಳ ಅವಧಿಯಲ್ಲಿ ಗೊಂದಲ ಮೂಡಿಸಿ ಒತ್ತಡಕ್ಕೆ ಮಣಿದ ಸರ್ಕಾರ ವಾಪಸ್ ಪಡೆದ ಅಥವಾ ಕೈಬಿಟ್ಟ ನೀತಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆ:
ನರೇಂದ್ರ ಮೋದಿ ಸರ್ಕಾರ ರೂಪಿಸಿದ್ದ ನೀತಿಯ ಬಹುದೊಡ್ಡ ಹಿನ್ನಡೆ ಅಥವಾ ಒತ್ತಡಕ್ಕೆ ಮಣಿದು ವಾಪಸ್ ಪಡೆದ ನಿರ್ಧಾರವೆಂದರೆ ಅದು ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆ. ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದ ಅಂಶಗಳಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರ ಸೇರಿಸಿರುವ ಹೊಸ ಅಂಶಗಳು ರೈತರಿಗೆ ಮಾರಕವಾಗಲಿದೆ ಎಂಬ ಅಸಮಾಧಾನ ವ್ಯಾಪಕಾದ ಪರಿಣಾಮ  ತಿದ್ದುಪಡಿ ಮಸೂದೆ ಸಂಸತ್ ನಲ್ಲಿ ಅಂಗಿಕಾರಗೊಳ್ಳಲಿಲ್ಲ. ಹಲವು ಬಾರಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಯಿತಾದರೂ ವಿಪಕ್ಷಗಳ ಟೀಕೆಯ ಪರಿಣಾಮ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನೂ ವಾಪಸ್ ಪಡೆಯಬೇಕಾಗಿ ಬಂತು.  

ಕುಲಾಂತರಿ ತಳಿ ಬೀಜ ತಂತ್ರಜ್ಞಾನಕ್ಕೆ ಪರವಾನಗಿ: ಕುಲಾಂತರಿ ಬೀಜ ತಂತ್ರಜ್ಞಾನಕ್ಕೆ ಪರವಾನಗಿ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ವಾಪಸ್ ಪಡೆದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕೇಂದ್ರ ಕೃಷಿ ಸಚಿವಾಲಯ ಕುಲಾಂತರಿ ತಳಿ ತಂತ್ರಜ್ಞಾನದ ಪೂರೈಕೆದಾರರು ಸ್ಥಳೀಯ ಬೀಜ ಸಂಸ್ಥೆಗಳಿಗೆ ಪರವಾನಗಿ ನಿರಕಾರಿಸುವಂತಿಲ್ಲ ಹಾಗೂ ಅದಕ್ಕಾಗಿ ವಿಧಿಸಲಾಗುವ ಗೌರವಧನವನ್ನು ಶೇ.10 ಕ್ಕಿಂತ ಹೆಚ್ಚು ಪಡೆಯುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿತ್ತು. ಆದರೆ ನಂತರ ಅಧಿಸೂಚನೆಯನ್ನು ವಾಪಸ್ ಪಡೆದು ಇದನ್ನು ಚರ್ಚೆ ನಡೆಸಿತ್ತು.
ಕಾರ್ಮಿಕ ಕಾಯಿದೆ ಹಿಂತೆಗೆತ:
ನೂತನ ಕಾರ್ಮಿಕ ಕಾಯಿದೆಗೆ ದೇಶಾದ್ಯಂತ ಕಾರ್ಮಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪಿಎಫ್ ವಾಪಾಸಾತಿ ನಿಯಮಗಳನ್ನು ಕೇಂದ್ರ ಸರ್ಕಾರ ಹೊಸ ಕಾರ್ಮಿಕ ನೀತಿಯನ್ನು ಕೈಬಿಟ್ಟು ಹಳೆಯ ಕಾರ್ಮಿಕ ನೀತಿಯನ್ನೇ ಮುಂದುವರೆಸಲು ಇತ್ತೀಚೆಗಷ್ಟೇ ನಿರ್ಧರಿಸಿದೆ. ಕಾರ್ಮಿಕನೊಬ್ಬ ಕೆಲಸ ಬಿಟ್ಟ 2 ತಿಂಗಳ ಒಳಗಾಗಿ ಅಷ್ಟೂ ಭವಿಷ್ಯ ನಿಧಿಯ ಹಣ,ಬಡ್ಡಿಯನ್ನು ವಾಪಾಸ್‌ ಪಡೆಯ ಬಹುದಾಗಿತ್ತು. ಆದರೆ ಕೇಂದ್ರ ಸರ್ಕಾರ ಜಾರಿ ಮಾಡಲು ಮುಂದಾಗಿದ್ದ ನಿಯಮದ ಪ್ರಕಾರ ಕೇವಲ ಕಾರ್ಮಿಕನ ವೇತನದಲ್ಲಿ ಕಡಿತವಾಗಿದ್ದ 12% ಪಿಎಫ್ ಮೊತ್ತ ಮತ್ತು ಅದರ ಬಡ್ಡಿ ಮಾತ್ರ ಪಡೆಯಬಹುದಾಗಿತ್ತು. ಕಂಪೆನಿ ಕಟ್ಟಿದ್ದ ಹಣ ಮತ್ತುಬಡ್ಡಿ ಪಡೆಯಲು  58 ವರ್ಷ ತುಂಬುವ ವರೆಗೂ ಆತ ಕಾಯಬೇಕಾಗಿತ್ತು. ಇದರ ವಿರುದ್ದ ಕಾರ್ಮಿಕರು ಆಕ್ರೋಶ ವ್ಯಕ್ತ ಪಡಿಸಿದ್ದರು. ಇದೀಗ ನಿಯಮವನ್ನು ಸಡಿಲಿಸಲಾಗಿದೆ.

ಗೂಢಲಿಪಿ ನೀತಿ:  ರಾಷ್ಟ್ರೀಯ ಗೂಢಲಿಪಿ ಕಾಯ್ದೆ (National Encryption Policy) ಕರಡನ್ನು ಜಾರಿಗೆ ತರಲು ನಿರ್ಧರಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂಬ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ  ಕರಡನ್ನು ವಾಪಸ್ ಪಡೆದಿತ್ತು.
ಪಿಡಿಎಂಎ ಚೌಕಟ್ಟು: 
ಆರ್​ಬಿಐ ವ್ಯಾಪ್ತಿಯಿಂದ ಹೊರತುಪಡಿಸಿದ ಪ್ರತ್ಯೇಕ ಸಾರ್ವಜನಿಕ ಸಾಲ ನಿರ್ವಹಣಾ ಏಜೆನ್ಸಿಯನ್ನು (ಪಿಡಿಎಂಎ) ಸ್ಥಾಪಿಸುವ ಉದ್ದೇಶ ಹೊಂದಿದ್ದ ಕೇಂದ್ರ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು ಸಹ ಸರ್ಕಾರದ ನಿರ್ಧಾರ- ನೀತಿಗಳಲ್ಲಿನ ಹಿನ್ನಡೆಯನ್ನು ಸೂಚಿಸುತ್ತದೆ. ಪಿಡಿಎಂಎ ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರ ಒಮ್ಮತದ ನಿರ್ಧಾರ ಕೈಗೊಂಡಿತ್ತಾದರೂ ಏನಿದ್ದರೂ ರಿಸರ್ವ್ ಬ್ಯಾಂಕ್ ಜೊತೆಗೆ ಸಮಾಲೋಚಿಸಿ ಪ್ರತ್ಯೇಕ ಸಾಲ ನಿರ್ವಹಣಾ ವ್ಯವಸ್ಥೆಯನ್ನು ಮುಂದೆ ಜಾಗತಿಕ ನೀತಿಗೆ ಅನುಗುಣವಾಗಿ ತರಲು ಸರ್ಕಾರ ಯತ್ನಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟನೆ ನೀಡಬೇಕಾಗಿ ಬಂತು.
ಪೋರ್ನ್ ವೆಬ್ ಸೈಟ್ ಗಳ ನಿಷೇಧ: ಕಳೆದ ವರ್ಷದ ಅಂತ್ಯದಲ್ಲಿ ಕೇಂದ್ರ ಸರ್ಕಾರ ಸುಮಾರು 857 ಪೋರ್ನ್ ವೆಬ್ ಸೈಟ್ ಗಳನ್ನು ನಿಷೆಧಿಸಿತ್ತಾದರೂ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಲಿದೆ ಎಂಬ ಕೂಗು ಕೇಳಿಬಂದಿದ್ದರಿಂದ ಕೇಂದ್ರ ಸರ್ಕಾರ ನಿಷೇಧವನ್ನು ಮಕ್ಕಳ ಅಶ್ಲೀಲ ವೆಬ್ ತಾಣಗಳಿಗೆ ಮಾತ್ರ ಸೀಮಿತಗೊಳಿಸಬೇಕಾಗಿ ಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com