ಹೃದಯ ತುಂಬ ನಿನ್ನ ಭಾವ ಚಿತ್ರ .. ಅದಕ್ಕೆ ಈ ಪ್ರೇಮ ಪತ್ರ!

ವರುಷಗಳೇ ಕಳೆದವು...ಆದರೆ ನನ್ನ ಹೃದಯದಿಂದ ಕಿತ್ತಾಕಲಾಗಲಿಲ್ಲ ಅವಳ ಚಿತ್ರ ...ಮತ್ತೆ ಬರುತಿರುವ ಈ "ಪ್ರೇಮಿಗಳ ದಿನ" ತರುತಿದೆ ಅವಳ ನೆನಪು ಪುನಃ ..
ಹೃದಯ ತುಂಬ ನಿನ್ನ ಭಾವ ಚಿತ್ರ .. ಅದಕ್ಕೆ ಈ ಪ್ರೇಮ ಪತ್ರ!

ವರುಷಗಳೇ ಕಳೆದವು...ಆದರೆ ನನ್ನ ಹೃದಯದಿಂದ ಕಿತ್ತಾಕಲಾಗಲಿಲ್ಲ ಅವಳ ಚಿತ್ರ ...ಮತ್ತೆ ಬರುತಿರುವ ಈ "ಪ್ರೇಮಿಗಳ ದಿನ" ತರುತಿದೆ ಅವಳ ನೆನಪು ಪುನಃ ..

ಹಾಗು ಹೀಗೂ ಮಾಡಿ ೪ ವರ್ಷಕ್ಕೇ ಇಂಜಿನಿಯರಿಂಗ್ ಓದಿ ಮುಗಿಸಿದಾಗ , ಮುಂದೆ ಮಾಸ್ಟರ್ಸ್ ಮಾಡ್ತೀಯ ಅಂತ ಅಪ್ಪ ಕೇಳಿದಾಗ ಒಲ್ಲೆ ಅಂತಾ ನಾ ಹೇಳಿ, ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲಲ್ಲಿ ಅಜ್ಜಿ ಕಾಲದ ಟ್ರಂಕು ಹಿಡಿದು ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಬಂದಿಳಿದಿದ್ದೆ ಕೆಲಸ ಹುಡುಕಲು. ಅಬ್ಬಬ್ಬ ..! ಅಲ್ಲಿನ ಜನಜಂಗುಳಿ, ಬರ್ರಂತ ಸಂದಿಯಲ್ಲೇ ನುಗ್ಗೋ ಆಟೋಗಳು,ಮೈಮೇಲೆ ಹಾದಂಗೆ ಬರೋ ಬಿಟ್ರೆ ತಿರುಗಿ ಸಿಗೋದಾ(BTS) ಕೆಂಪು ಬಸ್ಸುಗಳು.. ಇವೆಲ್ಲ ನೋಡಿ ಬಾವಿಯಿಂದ ಹಾರಿ ಸಮುದ್ರದಲ್ಲಿ ಬಿದ್ದ ಕಪ್ಪೆ ಸ್ಥಿತಿ ಹಾಗೆ ಅನ್ನಿಸಿತ್ತು !

ಹೇಗೋ ಕಷ್ಟಪಟ್ಟು BTS ಬಸ್ ಹಿಡಿದು ಮಲ್ಲೇಶ್ವರಂ ನಲ್ಲಿದ್ದ ದೋಸ್ತ ಒಬ್ಬನ ರೂಮ್ಗೆ ಬಂದು ಸೇರಿದ್ದೆ. ಮಾರನೆ ದಿನ ಬೆಳೆಗ್ಗೆನೆ ಎದ್ದು ಅಲ್ಲೇ ಇದ್ದ DTP ಸೆಂಟರ್ನಲ್ಲಿ ಬಯೋ-ಡಾಟಾ ಟೈಪ್ ಮಾಡಿಸಿ ಒಂದೆರಡು ಕಾಪಿ ಜೆರಾಕ್ಸ ಮಾಡಿಸಿಕೊಂಡು ಹತ್ತಿರದಲ್ಲೇ ಇದ್ದ ಶ್ರೀ ಗಣೇಶ ದೇವಸ್ಥಾನದಲ್ಲಿ ಕೈಮುಗಿದು ಬೇಡಿಕೊಂಡು ಕೆಲಸ ಹುಡುಕಲು ಹೊರಟಿದ್ದೆ. ಇನ್ನು ಇಂಟರ್ನೆಟ್ , ಇಮೇಲ್ ಬಗ್ಗೆ ಅಸ್ಟೊಂದು ಅರಿವಿಲ್ಲದ್ದ ಕಾಲ ಅದು. ಹಾಗಾಗಿ ಎಲೆಕ್ಟ್ರಾನಿಕ್ ಸಿಟಿ , ಬೆಲ್, HAL ಹೀಗೆ ಹತ್ತು ಹಲವಾರು ಕಂಪನಿಗಳ ಗೇಟುಗಳ ಬಳಿ ಹೋಗಿ ಕೆಲಸಗಳ ಬಗ್ಗೆ ವಿಚಾರಣೆ ಮಾಡಿ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ಗಳ ಕೈಯಲ್ಲಿ ಬಯೋ-ಡಾಟ ಕಾಪಿ ಕೊಟ್ಟು ಒಳಗಡೆ ಖಂಡಿತಾ ತಲುಪಿಸಿ ಅಂತಾ ಎರಡೆರಡು ಬಾರಿ ಒತ್ತಿ ಹೇಳಿ ಉಸ್ಸ್ ಅಂತಾ ಮತ್ತೆ ರೂಮ್ಗೆ ಬಂದು ಸೇರೋದ್ರಲ್ಲಿ ರಾತ್ರಿಯಾಗಿರುತ್ತಿತ್ತು.ಹೀಗೆ ಕೆಲಸದ ಹುಡುಕಾಟದಲ್ಲಿ ಒಂದು ತಿಂಗಳು ಕಳೆದು ಕೈಯಲ್ಲಿದ್ದ ಕಾಸು ಖಾಲಿಯಾಗುತ್ತಿರುವುದ ನೋಡಿ ಸ್ಟುಡೆಂಟ್ ಲೈಫ್ ಎಸ್ಟೊಂದು ಚೆನ್ನಾಗಿತ್ತಲ್ಲ ಅಂತ ಮನಸ್ಸು ಕೊರಗುತ್ತಿತ್ತು.

ಅಂತು ಒಂದು ಸಣ್ಣ ಕಂಪನಿಯಲ್ಲಿ ಪರಿಚಯದವರೊಬ್ಬರ ಮೂಲಕ ಮೊದಲ ಕೆಲಸ ಸಿಕ್ಕಾಗ ಆದ ಸಂತೋಷ ಅಷ್ಟಿಷ್ಟಲ್ಲ ! ಮೊದಲ ತಿಂಗಳ ಸಂಬಳ ಬಂದ ತಕ್ಷಣ ಊರಿಗೆ ಓಡಿ ಅಪ್ಪ-ಅಮ್ಮನ ಕೈಗೆ ಕೊಟ್ಟಾಗ ಅವರ ಕಣ್ಣಲ್ಲಿ ಆನಂದ ಭಾಷ್ಪ..ನನ್ನಲ್ಲಿ ಏನೋ ಒಂತರ ನೆಮ್ಮದಿ. ಒಂದೈದು ತಿಂಗಳು ದುಡಿದ ನಂತರ ಕೆಲಸದ ಮೇಲೆ ಓಡಾಡಲು ಒಂದು ಸೆಕೆಂಡ್ ಹ್ಯಾಂಡ್ ಯಮಹ ಮೋಟೊರ್ ಬೈಕ್ ಖರೀದಿ ಮಾಡಿದಾಗ ನನ್ನ ಬಹಳ ದಿನಗಳ ಆಸೆಯೊಂದು ಈಡೇರಿತ್ತು.

ಆಹಾ ..ಸ್ವಂತ ಬೈಕ್ ಓಡಿಸೋ ಮಜಾನೆ ಮಜಾ ... ಆ ದಿನ ಆಫೀಸಿಗೆ ಲೇಟ್ ಬೇರೆ ಆಗಿತ್ತು ...ಬೈಕ್ ಯಾಕೋ ನಾನು ಸ್ಟಾರ್ಟ್ ಆಗೋಲ್ಲ ಅಂತ ರಂಪ ಮಾಡುತ್ತಿತ್ತು ..ಕಿಕ್ ಮಾಡಿ ಮಾಡಿ ಉಸ್ಸ್ ಅಂತ ಏನಾಗಿದೆ ಇದಕ್ಕೆ ನೋಡನ ಅಂತ ಬಗ್ಗಿ ನೋಡುತ್ತಿರುವಾಗ ಯಾರೋ ಮೆಲ್ಲಗೆ ನನ್ನ ನೋಡಿ ನಕ್ಕಂಗಾಯಿತು ..ಯಾರಿರಬಹುದು ಅಂತ ಅತ್ತ ಇತ್ತ ಕಣ್ಣಾಯಿಸಿದೆ..ಯಾರೂ ಕಾಣಿಸಲಿಲ್ಲ ...ಮತ್ತೆ ನಗುವ ಶಬ್ದ ಕೇಳಿ ನೋಡಿದರೆ , ಎದುರಿನ ಮಹಡಿ ಮೇಲೆ ಅವಳು ನನ್ನ ನೋಡಿ ನಗುತ್ತಿರುವುದು ಕಾಣಿಸಿತು...ಯಾಕೋ ನನಗೆ ಕಸಿವಿಸಿಯಾದಂತೆ ಆಗಿ ಅವಳನ್ನು ಕಣ್ಣೆತ್ತಿ ನೋಡಲಾಗದೆ ಬೈಕಿನ ಮಿರರ್ ನಲ್ಲಿ ನೋಡಿದೆ ..ಹಾ ಹಾ ಯಾರಿವಳು ಈ ಸುಂದರ ಹುಡುಗಿ...ಇಲ್ಲಿವರೆಗೆ ಕಣ್ಣಿಗೆ ಬಿದ್ದೆ ಇದ್ದಿಲ್ಲವಲ್ಲ ಅಂತ ಅಂದುಕೊಂಡು ನನ್ನ ಕ್ರಾಪ್ ಸರಿಮಾಡಿಕೊಳ್ಳಲು ಮಿರರ್ ನಲ್ಲಿ ಮುಖ ನೋಡಿಕೊಂಡೆ...ನೋಡಿದರೆ ಹಣೆಯ ಮೇಲೆ ಬೈಕಿನ ಕರಿ ಮಸಿ ...ಓಹ್ ಇದಕ್ಕೆ ಇರಬೇಕು ಅವಳು ನಕ್ಕಿದ್ದು ಅಂದುಕೊಂಡು ಅಲ್ಲಿಂದ ಬೇಗ ದಾರಿಕಿತ್ತೆ ಬೈಕ್ ನ ನೂಕಿಕೊಂಡು ಹತ್ತಿರದ ಗ್ಯಾರಜಿಗೆ.

ಆ ದಿನದಿಂದ ಕಣ್ಣುಗಳು ನನಗೇ ಅರಿವಿಲ್ಲದಂತೆ ಆ ಮಹಡಿ ಮನೆಕಡೆ ನೋಡಹತ್ತಿದವು. ಹೀಗೆ ಒಂದು ದಿನ ಆಫೀಸಿಗೆ ಹೊರಟಾಗ ಆ ಸುಂದರಿ ವಯ್ಯಾರದಿಂದ ಮೆಟ್ಟಿಲಿಳಿದು ಬರುತ್ತಿರುವುದ ಕಂಡು , ಆ ಹಸಿರು ಚೂಡಿಯಲ್ಲಿ ಇನ್ನು ಹೆಚ್ಚು ಸುಂದರವಾಗಿ ಕಾಣುತ್ತಿದ್ದ ಅವಳ ಚಿತ್ರ ಹಾಗೆ ಮನಸ್ಸಿನ ಮೇಲೆ ಅಚ್ಚೊತ್ತಿತ್ತು. ಹಾಗೆ ನಾನು ಬಾಯ್ಬಿಟ್ಟು ಎಲ್ಲ ಮರೆತು ನಿಂತಿರುವಾಗ "ಹಾಯ್" ಅಂತ ಅವಳೇ ಹೇಳಿ ಪಕ್ಕದಿಂದ ಹಾದುಹೋದಳು. ದಿಲ್ ಫುಲ್ ಖುಷ್ ಆಗಿ ಕಿಕ್ ಮಾಡಿದರೆ ಬೈಕು ಸಹ ಒಂದೇ ಕಿಕ್ಕಿಗೆ ಸ್ಟಾರ್ಟ್ ಆಗಿತ್ತು :) .....ಹೀಗೆ ದಿನಾ ಕಣ್ಣೋಟ , ಹಾಯ್ - ಬಾಯ್ ನಲ್ಲೆ ಕಳೆದಾಗ , ಒಂದು ದಿನ ನಾನೆ ಧೈರ್ಯ ಮಾಡಿ ಹೆಸರು ಕೇಳಿದೆ ... ಅವಳ ಕೋಮಲ ಕಂಠದಿಂದ ಬಂದಿತ್ತು "ಚಿತ್ರ" . ಕೈಯಲ್ಲಿ ಎದೆಗೆ ಆನಿಸಿಕೊಂಡು ಹಿಡಿದಿದ್ದ ಬುಕ್ಸ್ ನೋಡಿ ..ಯಾವ ಕಾಲೇಜ್? ಅಂದೆ..ಮಹಾರಾಣಿ ಅಮ್ಮಣ್ಣಿ ಕಾಲೇಜು ಮಲ್ಲೇಶ್ವರಂ ಉತ್ತರ ಬಂದಿತ್ತು !

ಹೀಗೆ ಆದ ಪರಿಚಯ ಗೆಳೆತನಕ್ಕೆ ತಿರುಗಿತ್ತು ...ಒಮ್ಮೆ ಅವಳು ಬಸ್ ಸ್ಟ್ಯಾಂಡ್ ನಲ್ಲೆ ಇದ್ದಿದ್ದು ನೋಡಿ

ಏನಾಯಿತು ಅಂತ,
ನೋಡಿದರೆ ಅವತ್ತು ಬಸ್ striku ...
ಆಗ ನಾನು ಅಂದುಕೊಂಡೆ,
ಬಂತಲ್ಲ ಇವತ್ತು ನಂಗೆ ಲಕ್ಕು!


ಇಂಟರ್ನಲ್ಸ್ ಇದೆ ಈ ದಿನ ..ಮಿಸ್ ಮಾಡೋ ಹಾಗಿಲ್ಲ ..ಸ್ವಲ್ಪ ಡ್ರಾಪ್ ಮಾಡ್ಲಿಕ್ಕೆ ಆಗುತ್ತ ಅಂತ ಅವಳು ಕೇಳಿದಾಗ ..ಇಲ್ಲ ಅಂತ ನಾ ಹೇಗೆ ಹೇಳಲಿ ?
ಹಿಂದೆ ಕುಳಿತ ಚಿತ್ರಳ ಮುಂಗುರುಳು ಗಾಳಿಗೆ ಹಾರಿ ನನಗೆ ತಗಲಿದಾಗ ಮೈಯೆಲ್ಲ ಕಚಗುಳಿ ಇಟ್ಟನ್ತಾದರೆ , ನನ್ನ ಬೆನ್ನಿಗೆ ಬಡಿಯುತ್ತಿದ್ದ ಅವಳ ಆ ಬಿಸಿಯುಸಿರಿಗೆ ನನ್ನ ಉಸಿರೇ ನಿಂತಾಗಿತ್ತು. ಈ ಮರೆಯಲಾರದ ಡ್ರಾಪ್ ನಿಂದ ಇನ್ನು ಕ್ಲೋಸ್ ಆದ ಮೇಲೆ ಕೆಲವು ಸಲ ಅಲ್ಲೇ ಇದ್ದ ಸ್ಯಾಂಕಿ ಕೆರೆ ಬಳಿಯ ಪಾರ್ಕ್ನಲ್ಲಿ ಸುತ್ತಾಟ , ದರ್ಶಿನಿಯಲ್ಲಿ ಬಿಸಿ ಬಿಸಿ ತಿಂಡಿ , ಐಸ್ ಕ್ರೀಂ,ಲಾಲ್ ಬಾಗ್ ಅಂತಾ ಹೀಗೆ ಸಾಗಿತ್ತು ನಮ್ಮ ಗೆಳೆತನ .
ದಿನಗಳು ಹೀಗೆ ಉರುಳುತ್ತಿರುವಂತೆ ಅವಳು ನನ್ನ ಮನದಲ್ಲಿ ಸದ್ದಿಲ್ಲದೇ ಬಂದು ಜಾಗವ ಆಕ್ರಮಿಸಿದ್ದು ಕಂಡು ಆಗಿತ್ತು ನನಗೇ ಪ್ರೇಮಾಶ್ಚರ್ಯ !
ಆಗ ತಾನೇ ಇಂಡಿಯಾದಲ್ಲೂ ಪರದೇಶದ "ಪ್ರೇಮಿಗಳ ದಿನಾಚರಣೆ" ಹಬ್ಬ ಹೆಜ್ಜೆ ಇಟ್ಟ ದಿನಗಳು. ಅದು ನನ್ನ ಕಿವಿಗೂ ಬಿದ್ದಾಗ , ಸರಿ ಹೇಗಾದರೂ ಧೈರ್ಯ ಮಾಡಿ ಆ ದಿನ ಅವಳಿಗೆ ನನ್ನಲ್ಲಿ ಹುಟ್ಟಿರುವ ಈ ಪ್ರೀತಿಯ ಬಗ್ಗೆ ಹೇಳಬೇಕೆಂದು ಅಂದುಕೊಂಡು ..ಯಾವ ರೀತಿ ಹೇಳಬೇಕೆಂದು ತಿಳಿಯದೆ ಒದ್ದಾಡಿ, ಕೊನೆಗೂ ತೀರ್ಮಾನಿಸಿದೆ ಒಂದು ಪತ್ರ ಬರೆದು ಕೊಡುವುದು ಎಂದು.

ನನ್ನ ಪ್ರೀತಿಯ ಗೆಳತಿ ..
ನನ್ನ ಹೃದಯದ ತುಂಬ
ತುಂಬಿದೆ ನಿನ್ನ ಭಾವ ಚಿತ್ರ ..
ಅದ ಹೇಳಲೆಂದೇ ನಾ ನಿನಗೆ
ಬರೆಯುತ್ತಿರುವೆ ಈ ಪ್ರೇಮ ಪತ್ರ !


ರಾತ್ರಿಯಾದರೆ ಸಾಕು ಎಲ್ಲರ ಕನಸಲ್ಲಿ
ಬರುವಳು , ಆ ಕನಸಿನ ಕನ್ಯೆ ಹೇಮಮಾಲಿನಿ ..
ಆದರೆ ನಾ ಕಾಣುತ್ತಿರುವೆ ಹಗಲಿರುಳು ನಿನ್ನದೇ ಕನಸ,
ಆಗಿ ಬರುವೆಯಾ ನೀ ನನ್ನ ಹೃದಯದ ಮಾಲಿನಿ ?


- ನಿನ್ನ ಉತ್ತರಕ್ಕಾಗಿ ಕಾಯುತ್ತಿರುವ ಮಿತ್ರ

ಹತ್ತಾರು ಬಾರಿ ಗೀಚಿ,ಬರೆದು ಕಿತ್ತಾಕಿ ಕೊನೆಗೂ ಈ ಪತ್ರವನ್ನು ರೆಡಿ ಮಾಡಿ ಅವಳು ಕಾಲೇಜ್ಗೆ ಹೋಗಲು ಕೆಳಗಿಳಿದು ಬಂದು ಹಾಯ್ ಅಂದಾಗ , ಎಲ್ಲಿಲ್ಲದ ಧೈರ್ಯ ತಂದುಕೊಂಡು ಅವಳ ಕೈಗಿತ್ತು ಬಾಯ್ ಎಂದು ಕಾಲ್ಕಿತ್ತಿದ್ದೆ ಅಲ್ಲಿಂದ !
ಆ ದಿನವಿಡೀ ಏನೋ ಒಂತರ ಮನದಲ್ಲಿ ಕಸಿವಿಸಿ, ಅವಳುತ್ತರ ಎನಿರುವುದೋ? ಸಿಟ್ಟಾಗಿ ಮಾತನಾಡಿಸುವುದನ್ನೇ ಬಿಟ್ಟರೆ? ಓಹ್ ..ಯೋಚಿಸಿದಷ್ಟು ಏರುತ್ತಿತ್ತು ಹೃದಯದ ಬಡಿತ...ಯಾವಾಗ ಮರುದಿನ ಬೆಳಿಗ್ಗೆ ಬರುವುದೋ ಅನ್ನೋ ಯೋಚನೆಯಲ್ಲಿ ನಿದ್ದೆಗೆ ಜಾರಿದ್ದೆ. ಮರುದಿನ ಬೆಳಿಗ್ಗೆ ಬೇಗನೆ ಎದ್ದು ರೆಡಿ ಆಗಿ ಎದುರು ಮಹಡಿಯ ಮೆಟ್ಟಿಲ ಕಡೆಗೇ ಕಣ್ಣು ನೆಟ್ಟಿದ್ದೆ. 8 ಆಯ್ತು, 9 ಆಯ್ತು ..ಹೂ ಹುಂ ...ಅವಳ ಪತ್ತೇನೆ ಇಲ್ಲ ..ಏನಾರ ಬಸ್ ಸ್ಟಾಪ್ ಬಳಿ ನಿಂತಿರಬಹುದೇ ಅಂತ ಯೋಚನೆ ಮಾಡಿ ಹೋದರೆ ಅಲ್ಲೂ ಇಲ್ಲ... ಯಾಕೋ ಎಡವಟ್ಟು ಮಾಡಿಕೊಂಡೆನಲ್ಲ...ಏನಾರು ಅವಳು ಸಿಟ್ಟಾಗಿ ದಾಂಡಿಗನಂತಿದ್ದ ಅವಳಣ್ಣನ ಬಳಿಯೇನಾದರೂ ಹೇಳಿದರೆ ನನ್ನ ಗತಿ ??? ಮೆದುಳು ಅಲ್ಲಿಂದ ಮುಂದೆ ಓಡಲೇ ಇಲ್ಲ ...ಹಾಗೆ ಮರುದಿನ ಬಂತು..ಹೂ ಹುಂ ...ಕೊನೆಗೆ ಮೂರನೇ ದಿನ ಕಂಡೆ ಅವಳನ್ನು ಬಸ್ ಸ್ಟಾಪ್ನಲ್ಲಿ ...ಅಬ್ಬ ಸದ್ಯ ಕಂಡಳಲ್ಲ...ನಾನೇ ಸ್ವಲ್ಪ ದೂರದಲ್ಲೇ (ಭಯ ...ಕೆನ್ನೆ ಏಟು ನೆನೆಸಿಕೊಂಡು) ನಿಂತು ..ಮಾತಾಡಿದ್ದೆ ಮೊದಲಿಗೇ "ಸಾರೀಚಿತ್ರ ..." ಎಂದು ...ತಪ್ಪು ತಿಳಿದುಕೊಬೇಡ ಪತ್ರ ನೋಡಿ ..ನಿನಗಿಷ್ಟವಿರದಿದ್ದರೆ ಇಲ್ಲ ಅಂತ ಹೇಳಿಬಿಡು ...ಆದರೆ ನೀ ಮಾತಾಡಿಸುವುದ ನಿಲ್ಲಿಸಬೇಡ ...ಅಷ್ಟು ಹೇಳೋವತ್ತಿಗೆ ಬಂದಿತ್ತು ಕೆಂಪು ಬಸ್ಸು..ಆಗ ಸರಸರನೆ ನನ್ನ ಕೈಯಲ್ಲೊಂದು ಚೀಟಿ ಇಟ್ಟು ಅವಳು ಬರಬರನೆ ಬಸ್ಸತ್ತಿದ್ದಳು. ತರತರನೆ ನಡುಗುತ್ತಿದ್ದ ಕೈಗಳಿಂದ ಚೀಟಿ ಬಿಡಿಸಿ ಓದಿದ್ದೆ...ಬರೆದಿತ್ತು ಅದರಲ್ಲಿ .....

ನಾ ನೋಡಿ ಮೆಚ್ಚಿದೆ
ನಿನ್ನ ಆ ಪ್ರೇಮ ಪತ್ರ ..
ನಾ ಇರ ಬಯಸುವೆ
ಯಾವಾಗಲು ನಿನ್ನ ಹತ್ರ !


ಬರಬಹುದು ಸಾವಿರಾರು ಜನರ
ಕನಸಲ್ಲಿ ಆ ಹೇಮಮಾಲಿನಿ ..
ಆದರೆ ನಿನ್ನ ಕನಸಲ್ಲಿ ನಾನೊಬ್ಬಳೆ ಇರಬೇಕು
ಹಾಗಿದ್ದರೆ ಬರುವೆ ಆಗಿ ನಿನ್ನ ಹೃದಯದ ಮಾಲಿನಿ !


- ನಿನ್ನ ಚಿತ್ರ

ಹುರ್ರೇ..ಮನ ಹುಚ್ಚೆದ್ದು ಕುಣಿದಿತ್ತು ..ಅವಳನ್ನು ಎತ್ತಿ ಕುಣಿದಾಡೋಣವೆಂದರೆ ಛೇ ..ಹೋಗಿಬಿಟ್ಟಳಲ್ಲ...ಅಂದುಕೊಂಡೆ "ಎಲಾ ಇವಳ ...ನನ್ನ ಕವಿತೆ ಪದಗಳನ್ನ ನಂಗೆ ಹೇಳ್ತಾಳಲ್ಲ !! ಜೋರಾಗೆ ಇದಾಳೆ ಹುಡುಗಿ " . ಹೀಗೆ ಸ್ಟಾರ್ಟ್ ಆದ ಪ್ರೀತಿ ನಮ್ಮನ್ನು ಬೆಂಗಳೂರು ಸುತ್ತಮುತ್ತೆಡೆ ಅಲೆದಾಡಿಸಿತ್ತು..
ಆಗುತ್ತಿತ್ತು ಕೆಲವೊಮ್ಮೆ ಆಫೀಸ್ಗೆ ಚಕ್ಕರ್ ,
ಆಗುತ್ತಿತ್ತು ಬೋರು ಆ ಕಾಲೇಜ್ ಲೆಕ್ಚುರ್
ಪಾರ್ಕು- ಸಿನಿಮಾ ಥಿಯೇಟರ್ಗೆ ಹಾಜರ್..

ಹೃತ್ವಿಕ್ ರೋಶನ್ ಮೊದಲ ಮೂವಿ "ಕಹೋ ನಾ ಪ್ಯಾರ್ ಹೈ?" ಗೆ ಮೊದಲದಿನವೇ ಹಾಜರಾಗಿ ನೋಡಿ ಹೊರ ಬರುವಾಗ ಅವಳನ್ದಿದ್ದಳು..."ಹಾ ಹಾ ಎಷ್ಟೊಂದು ಹ್ಯಾಂಡ್ಸಂ ಆಲ್ವಾ ಹೀರೋ ..ಸೂಪರ್ ಬೈಕ್, ಏನು ಸ್ಟೈಲು..ಹುಡುಗರು ಅಂದ್ರೆ ಅವನಂಗಿರಬೇಕು" ಅಂತ ಉಲಿದಾಗ..ಯಾಕೋ ಮನದಲ್ಲಿ ಅಸೂಯೆ ಜೊತೆಗೆ "ಎಲಾ ಇವಳ ...ಮತ್ತೆ ಅಂತವನು ಸಿಕ್ಕರೆ ನನ್ನ ಕೈಬಿಟ್ಟಿಯಾ ಮತ್ತೆ" ಎಂದೆ ಮೆಲ್ಲಗೆ ನಗುತ್ತಾ ...
ದಿನಗಳು ಉರುಳಿದ್ದೆ ಗೊತ್ತಾಗಲಿಲ್ಲ..ಜೇಬಲ್ಲಿದ್ದ ಪರ್ಸು ತೆಳ್ಳಗಾಗಿದ್ದು ಅರಿವಾಗಲಿಲ್ಲ.

ಒಂದು ದಿನ ಆಫೀಸಿನಲ್ಲಿ ಮ್ಯಾನೇಜರ್ ಕರೆದು ೬ ತಿಂಗಳು ಪ್ರಾಜೆಕ್ಟ್ ವರ್ಕ್ ಮೇಲೆ ಡೆಲ್ಲಿಗೆ ಹೋಗ್ಬೇಕು ಎಂದಾಗ ಏನ್ ಮಾಡ್ಬೇಕು ಅಂತಾನೆ ಗೊತ್ತಾಗಲಿಲ್ಲ ...ಹೇಗೋ ಅಳುತ್ತಿದ್ದ ಅವಳಿಗೂ ಸಮಾಧಾನ ಮಾಡಿ ಒಲ್ಲದ ಮನಸ್ಸಿಂದ ಪ್ರಯಾಣ ಬೆಳೆಸಿದ್ದೆ ..೬ ದಿನ ಆಗೋದು ಆರು ವರ್ಷಗಳ ತರ ಅನ್ನಿಸಿತ್ತು ..ಆಗಿನ್ನೂ ಮೊಬೈಲ್ ಫೋನ್ ಶ್ರೀಮಂತರ ಸ್ವತ್ತಾಗಿದ್ದ ಕಾಲ ..ಅವಳ ಮನೆಗೆ ಕಾಲ್ ಮಾಡ್ಬೇಕಂದರೆ ಅವರನ್ನನ ಕಾಟ...ಪತ್ರ ಬರಿ ಅಂತ ನನ್ನ ವಿಳಾಸ ಕೊಟ್ಟಿದ್ದೆ ..ಅವಳಿಂದ ಬಂದ ಪತ್ರ ನೋಡಿ ಡೆಲ್ಲಿಯಲ್ಲಿ ಅಲೆಮಾರಿಯಂತಿದ್ದ ನಂಗೆ ಜೀವ ಬಂದಾಗೆ ಆಗಿತ್ತು ..
ಹೀಗೆ ದಿನಗಳು ವರುಷಗಳಂತೆ ಉರುಳುತ್ತಿದ್ದವು ..ಅವಳಿಂದ ಯಾಕೋ ಪತ್ರ / ಫೋನ್ ಬರೋದು ನಿಂತಿತ್ತು ...ನಾನೇ ಮಾಡಿ ಕೇಳೋಣ ಅಂದರೆ ಅವರ ಮನೆಯಲ್ಲಿ ಫೋನ್ ಬಂದ್ ಆಗಿತ್ತು. ಕೊನೆಗೆ ನನ್ನ ರೂಂಮೇಟ್ ಗೆಳೆಯನಿಗೆ ಹೇಳಿ ಒಂದು ಬಾರಿ ನೋಡಿ ಮಾತಾಡಿ ಬಾ ಅಂದೆ..ಅವನಿಂದ "ಗುರು ..ಯಾಕೋ ಅವಳು ಒಂತರಾ ಚೇಂಜ್ ಆಗಿದಾಳೆ ಗುರು ..ಸರಿಯಾಗಿ ಮಾತಾಡಲಿಲ್ಲ" ಬಂದ ಉತ್ತರ ಕೇಳಿ ಏನೋ ಎಡವಟ್ಟು ಹಾಗಿರೋ ಹಾಗಿದೆ ಅನ್ನಿಸಿತ್ತು ..ಹೇಗೋ ಅವಳ ಕಾಲೇಜ್ನ ಫೋನ್ ನಂಬರ್ ಹುಡುಕಿ, ಕಾಲ್ ಮಾಡಿದರೆ "ಹೇಗಿದಿಯಾ ..?" ಅಂತ ಒಂತರಾ ಒರಟು ದ್ವನಿಯಲ್ಲಿ ಮಾತಾಡಿ ಟಕ್ ಅಂತ ಇಟ್ಟುಬಿಟ್ಟಿದ್ದಳು. ವಾಪಸು ಹೋಗಿ ಏನಾಗಿದೆ ಅಂತ ವಿಚಾರಿಸೋಣ ಅಂತ ರಜಾ ಕೇಳಿದರೆ ಬಾಸ್ ..ಇನ್ನು ಒಂದೇ ತಿಂಗಳಿದೆ..ಬೇಗ ಪ್ರಾಜೆಕ್ಟ್ ಕೆಲಸ ಮುಗಿಸಿ ಬೆಂಗಳೂರು ಆಫೀಸಿಗೆ ಹೋಗುವೆಯಂತೆ ಅಂದಾಗ ದಿಕ್ಕೇ ತೋಚದಂತಾಗಿ ಅವಳದೇ ಚಿಂತೆಯಲ್ಲಿದ್ದೆ ..
ಒಂದು ದಿನ ಬೆಳಿಗ್ಗೆನೆ ಫೋನ್ ರಿಂಗಾದಾಗ ..ಖುಷಿಯಾಗಿ ಚಿತ್ರಳೇ ಇರಬೇಕೆಂದು "ಹಲೋ ಹನಿ" ಅಂದಿದ್ದೆ ...ಲೇ ..ನಾನು ಕಣೋ ನಿನ್ನ ರೂಂಮೇಟ್ ರಘು ಮಾತಾಡ್ತಿರೋದು ಅಂದಾಗ ..ಯಾಕೋ ಎಡಗಣ್ಣು ಪಟ ಪಟ ಅಂತ ಬಡಿದುಕೊಂಡಿತ್ತು.."ಗುರು ...ಅರ್ಜೆಂಟ್ ಆಗಿ ನೀ ಬೆಂಗಳೂರಿಗೆ ಬರಬೇಕು ...ಚಿತ್ರಳ ಮದುವೆ ಕಣೋ ಈದಿನ" ಅಂತ ಅವ ಅಂದಾಗ ಆಕಾಶವೇ ತಲೆಮೇಲೆ ಬಿದ್ದಂತಾಗಿ ಅಲ್ಲೇ ಕುಸಿದು ಕುಳಿತಿದ್ದೆ ..ಫೋನ್ ನಲ್ಲಿ ಅವನ ವಾಯ್ಸ್ ಇನ್ನು ಕೇಳಿಸಿ ಬರುತ್ತಿತ್ತು.

ಅಂದೇ ಹೊರಟು ಮರುದಿನವೇ ಬೆಂಗಳೂರಿಗೆ ಬಂದಿಳಿದಿದ್ದೆ ...ಹೋಗಿ ನೋಡಿದರೆ ಅವಳ ಮನೆ ಮದುವೆ ಮನೆ ಅಲಂಕಾರದಿಂದ ಇನ್ನು ಕಂಗೊಳಿಸುತ್ತಿತ್ತು ... ಒಳಗಡೆ ಕಿಲ ಕಿಲ ಅಂತ ಗೆಳತಿಯರೊಂದಿಗೆ ನಗಾಡುತ್ತ ನಿಂತಿದ್ದಳು ನನ್ನಚಿತ್ರ ...ಕೈಯಲ್ಲಿ ಇನ್ನು ಹಸಿ ಹಸಿಯಾಗಿ ಕಾಣುತ್ತಿದ್ದ ಮೆಹಂದಿ, ಕಾಲಲ್ಲಿ ಅರಿಸಿನದ ಕಲೆ...ಹೇಗೋ ಅವಳನ್ನು ಒಂಟಿಯಾಗಿ ಭೇಟಿ ಮಾಡಿ ..ಏನಿದೆಲ್ಲ ವಿಚಿತ್ರ ಅಂತಾ ಕೇಳಿದ್ದಕ್ಕೆ ತೋರಿದ್ದಳು ಅವಳ ಕತ್ತಿನಲ್ಲಿದ್ದ ಕರಿಮಣಿ ಸರವ ! ನಂಗೆ ಜಾಸ್ತಿ ಹೊತ್ತು ಮಾತಾಡಲು ಸಮಯವಿಲ್ಲ ...ನಾ ಇವರನ್ನು ಮೆಚ್ಚಿ ಮದುವೆಯಾಗಿದ್ದೇನೆ ..ಒಳ್ಳೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಲಕ್ಷಾಂತರ ದುಡ್ಡು ಬಾರೋ ಕೆಲಸ ಇವರಿಗೆ ..ಅಲ್ಲದೆ ಮುಂದಿನ ತಿಂಗಳು ಅಮೆರಿಕಾಕ್ಕೆ ಹೋಗುವ ಚಾನ್ಸ್ ಇದೆ ...ನೀ ಹಿಂದಿನದೆಲ್ಲ ಮರೆತು ಬೇರೆ ಯಾರನ್ನಾದರು ಮದುವೆ ಆಗು ಅಂತಾ ಹೇಳಿ ಬರ್ರಂತ ಹೋದಳು ...ಆಕಾಶವೆ ತಲೆಮೇಲೆ ಬಿದ್ದ ಹಾಗೆ ಆಗಿ ಇನ್ನೇನು ಭೂಮಿ ಬಿರಿಯುವುದೊಂದೇ ಬಾಕಿ ಇತ್ತು ನಂಗೆ ..ಅಳುವುದೋ , ನಗುವುದೋ ಒಂದು ಗೊತ್ತಾಗದೆ ಅಲ್ಲಿಂದ ಹೊರಬಂದು ಸೀದಾ ಮತ್ತೆ ಪರ್ಮನೆಂಟಾಗಿ ಡೆಲ್ಲಿಗೆ ಟ್ರಾನ್ಸ್ ಪರ್ ಮಾಡಿಸಿಕೊಂಡು ಬಂದಿದ್ದೆ ..

ಅಂದು ತೋರಿಸಿದೆ ನಿನಗೆ
ಸಿನಿಮಾ "ಕಹೋ ನಾ ಪ್ಯಾರ್ ಹೈ"
ಇಂದು ಕೇಳುತ್ತಿರುವೆ ನಿನಗೆ
ಹೇಳು " ಐಸ ಕ್ಯೋ ಕಿಯಾ ಹೈ? "


ವರುಷಗಳೇ ಕಳೆದವು...ಆದರೆ ನನ್ನ ಹೃದಯದಿಂದ ಕಿತ್ತಾಕಲಾಗಲಿಲ್ಲ ಅವಳ ಚಿತ್ರ ...ಮತ್ತೆ ಬರುತಿರುವ ಈ "ಪ್ರೇಮಿಗಳ ದಿನ" ತರುತಿದೆ ಅವಳ ನೆನಪು ಪುನಃ ..

ಮನ ಬೇಡವೆಂದರೂ, ಕೈಗಳು
ಬರೆಯುತ್ತಿರುವುದು ನಿನ್ನ ಈ ಚಿತ್ರ ..
ಮನ ಬಯಸುತ್ತಿದೆ ಆಗು ನೀ
ಮುಂದಿನ ಜನ್ಮದಲ್ಲಾದರೂ ನನ್ನ "ಚಿತ್ರ" !

- ನಾಗರಾಜ್.ಎಂ
inchara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com