ಪ್ರೇಮಿಗಳ ದಿನದ ಸ್ಪೆಷಲ್ 'ತಾಜ್ ಮಹಲ್ ಗುಲಾಬಿ'

ಪ್ರೀತಿ ಎಂಬ ಸಾಗರಕ್ಕೆ ಇನ್ನೂ ಕಾಲಿಡದವರು, ಹೊಸದಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕಾತರದಿಂದ ಕಾಯುತ್ತಿರುವವರು, ಈಗಾಗಲೇ ಪ್ರೀತಿಯಲ್ಲಿ ಬಿದ್ದವರು...
ಪ್ರೇಮಿಗಳ ದಿನದ ಸ್ಪೆಷಲ್ 'ತಾಜ್ ಮಹಲ್ ಗುಲಾಬಿ'
Updated on

ಪ್ರೀತಿ ಎಂಬ ಸಾಗರಕ್ಕೆ ಇನ್ನೂ ಕಾಲಿಡದವರು, ಹೊಸದಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕಾತರದಿಂದ ಕಾಯುತ್ತಿರುವವರು, ಈಗಾಗಲೇ ಪ್ರೀತಿಯಲ್ಲಿ ಬಿದ್ದವರು... ಹೀಗೆ ಪ್ರೀತಿಯನ್ನು ಆರಾಧಿಸುವ ಪ್ರತಿಯೊಬ್ಬರ ಕೈಯಲ್ಲೂ ಪ್ರೇಮಿಗಳ ದಿನದಂದು ಕೆಂಪು  ಗುಲಾಬಿ ಇದ್ದೇ ಇರುತ್ತದೆ. ಇದರಿಂದಲೇ ಪ್ರೇಮಿಗಳ ದಿನದಂದು ಕೆಂಪು ಗುಲಾಬಿಗೆ ವಿಶೇಷ ಸ್ಥಾನ ಲಭಿಸಿದೆ.

ಕೆಂಪು ಗುಲಾಬಿ ಪ್ರೀತಿಯ ಸಂಕೇತ. ಗುಲಾಬಿ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದೇ ಪ್ರೀತಿ. ಎಷ್ಟೋ ಪ್ರೀತಿಗಳು ಪ್ರಾರಂಭವಾಗುವುದು ಗುಲಾಬಿ ನೀಡುವ ಮುಖಾಂತರವೇ. ಪ್ರೀತಿಯಲ್ಲಿ ಬಿದ್ದವರು ಪ್ರೀತಿಯನ್ನು ಆರಾಧಿಸುವ ಪ್ರತಿಯೊಬ್ಬರ ಕೈಯಲ್ಲೂ ಪ್ರೇಮಿಗಳ ದಿನದಂದು ಗುಲಾಬಿ ಹಿಡಿದು ತಮ್ಮ ಪ್ರೀತಿಯ ನಿವೇದನೆಯನ್ನು ಪ್ರೇಮಿಯೊಡನೆ ಮಾಡುತ್ತಾರೆ. ಆದರೆ ಈ ಗುಲಾಬಿ ಎಲ್ಲಿಂದ ಬರುತ್ತದೆ ಎಂಬುದು ಎಷ್ಟೋ ಜನರಿಗೆ ತಿಳಿದಿರುವುದಿಲ್ಲ.

ಭಾರತದಲ್ಲಿ ಕೆಂಪು ಗುಲಾಬಿಗೆ ಭಾರೀ ಬೇಡಿಕೆಯಿದ್ದು, ನೆರೆ ರಾಷ್ಟ್ರ ನೇಪಾಳದಿಂದ ಭಾರತ ಕೆಂಪು ಗುಲಾಬಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಈ ವರ್ಷವೂ ಕಠ್ಮಂಡು ಮಾರುಕಟ್ಟೆಯಿಂದ ಭಾರಿ ಪ್ರಮಾಣದಲ್ಲಿ ಗುಲಾಬಿ ಆಮದು ಮಾಡಿಕೊಳ್ಳಲಾಗುತ್ತಿದ್ದು, 40 ಲಕ್ಷ ಮೌಲ್ಯದ 1 ಲಕ್ಷ ಗುಲಾಬಿ ಹೂಗಳು ಈಗಾಗಲೇ ಬೆಂಗಳೂರಿಗೆ ಆಗಮಿಸಿವೆ.

ಬೆಂಗಳೂರಿಗೆ ಬರುವ ಗುಲಾಬಿಯನ್ನು ಹಾಲೆಂಡ್ ನಿಂದ ರಫ್ತು ಮಾಡಿಕೊಳ್ಳಲಾಗುತ್ತಿದ್ದು, ಗುಲಾಬಿ ಮಾರುಕಟ್ಟೆಗೆ ಬರುತ್ತಿದ್ದಂತೆ ಬೊಕೆ ( ಹೂ ಗುಚ್ಛ) ತಯಾರು ಮಾಡುವ ಮಾರಾಟಗಾರರು ಹೆಚ್ಚಿನ ರೀತಿಯಲ್ಲಿ ತೆಗೆದುಕೊಂಡು ಹೋಗಿ ಬಿಡುತ್ತಾರೆ. ಅವುಗಳಲ್ಲಿ ಉಳಿದ ಹೂವುಗಳನ್ನು ಇನ್ನಿತರೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ ಎಂದು ಮಾರುಕಟ್ಟೆಯ ಹೂವಿನ ವ್ಯಾಪಾರಸ್ಥ ಮರಿಯಪ್ಪ ಮಾಹಿತಿ ಹೇಳುತ್ತಾರೆ.

ಇನ್ನು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ 50 ಲಕ್ಷ ಡಚ್ ವೆರೈಟಿಯ ಕೆಂಪು ಗುಲಾಬಿ ವಿದೇಶಕ್ಕೆ ರಫ್ತಾಗಿವೆ. ಪ್ರೇಮಿಗಳ ದಿನಕ್ಕೆಂದೇ ಬೆಂಗಳೂರಿನ ಸುತ್ತಮುತ್ತ ಬೆಳೆಯುವ 'ಡಚ್' ಕೆಲವು ಗುಲಾಬಿಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಡಚ್ ಗುಲಾಬಿ ಬೆಳೆಯುವ ರೈತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಗುಲಾಬಿ ಬೆಳೆಯುವ ರೈತರ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಡಚ್ ಗುಲಾಬಿ ಮುಳ್ಳು ರಹಿತವಾಗಿದ್ದು, ಇದರಲ್ಲೇ ಗ್ರ್ಯಾಂಡ್ ಗಾಲ, ಫಸ್ಟ್ ರೆಡ್ ಹಾಗೂ ತಾಜ್ ಮಹಲ್ ಎಂಬ ಉಪಜಾತಿಯ ಹೂಗಳಿವೆ. ಕಳೆದ ಬಾರಿಗಿಂತ ಈಬಾರಿ 40 ಲಕ್ಷಕ್ಕೂ ಹೆಚ್ಚು ಡಚ್ ಗುಲಾಬಿಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ.

ಇತ್ತೀಚೆಗೆ ತಾಜ್ ಮಹಲ್ ಗುಲಾಬಿಗೆ ಹೆಚ್ಚು ಬೇಡಿಕೆ ಉಂಟಾಗಿದ್ದು, ಎತೇಚ್ಚವಾಗಿ ಮಾರಾಟವಾಗುತ್ತಿದೆ. ಕಳೆದ ಬಾರಿ ಒಂದು ಹೂವಿನ ಬೆಲೆ 15 ರಿಂದ 20 ಇತ್ತು. ಇದರಿಂದ ಪ್ರೇರಿತರಾಗಿದ್ದ ರೈತರು ಈ ಬಾರಿ ಹೆಚ್ಚಾಗಿ ತಾಜ್ ಮಹಲ್ ವೆರೈಟಿ ಗುಲಾಬಿಯನ್ನೇ ಬೆಳೆದಿದ್ದಾರೆ. ಇದರಿಂದಾಗಿ ಈ ಬಾರಿ ಮಾರುಕಟ್ಟೆಯಲ್ಲಿ ತಾಜ್ ಮಹಲ್ ಗುಲಾಬಿ ಪೂರೈಕೆ ಹೆಚ್ಚಾಗಿದ್ದು ಬೆಲೆ ಸ್ವಲ್ಪ ಇಳಿದಿದೆ. ಸದ್ಯಕ್ಕೆ ಒಂದು ತಾಜ್ ಮಹಲ್ ಗುಲಾಬಿ ಬೆಲೆ 12 ರಿಂದ  17 ರುಪಾಯಿ ಇದೆ. ಇನ್ನು ಗ್ರ್ಯಾಂಡ್ ಗಾಲ ಹಾಗೂ ಫಸ್ಟ್ ರೆಡ್ ಗುಲಾಬಿ ಒಂದರ ಬೆಲೆ 15 ರಿಂದ 20 ಇದೆ. ಆದರೆ ಪ್ರೇಮಿಗಳ ದಿನದಂದು ಈ ಗುಲಾಬಿಗೆ ಬೇಡಿಕೆ ಹೆಚ್ಚಾದರೆ ಬೆಲೆ ಜಾಸ್ತಿಯಾಗುವುದರಲ್ಲಿ ಆಶ್ಚರ್ಯವೇನು ಇಲ್ಲ.


ಹಾಲೆಂಡ್ ಹಾಗೂ ಜರ್ಮನಿ ಮೂಲದ ಡಚ್ ಗುಲಾಬಿ ಬೆಳೆಯಲು ಬೆಂಗಳೂರಿನ ವಾತಾವರಣ ಅನುಕೂಲಕರವಾಗಿದ್ದು, ಪುಣೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಡಚ್ ಗುಲಾಬಿ ಬೆಳೆಯಲಾಗುತ್ತಿದೆ.  'ಗಲ್ಫ್, ಸಿಂಗಪುರ ಹಾಗೂ ಮಲೇಶಿಯಾಗಳಿಂದ ತಾಜ್ ಮಹಲ್ ವೆರೈಟಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಯುರೋಪ್ ಹಾಗೂ ಆಸ್ಟ್ರೇಲಿಯಾಗಳಿಂದ ಗ್ರ್ಯಾಂಡ್ ಗಾಲ ಮತ್ತು ಫಸ್ಟ್ರೆಡ್ ಗುಲಾಬಿಗಳಿಗೆ ಬೇಡಿಕೆ ಬಂದಿದೆ. ಇದರಿಂದ ಜನವರಿ 27 ರಿಂದಲೇ ವಿದೇಶಗಳಿಗೆ ಗುಲಾಬಿಗಳನ್ನು ರಫ್ತು ಮಾಡಲಾಗಿತ್ತು, ಫೆ.11ರವರೆಗೆ ಈ ರಫ್ತು ಪ್ರಕ್ರಿಯೆ ಮುಂದುವರಿಯಲಿದೆ. ವಿದೇಶಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರೇಮಿಗಳ ದಿನಕ್ಕೆ 7 ದಿನಗಳ ಮುಂಚಿತವಾಗಿ ರೋಸ್ ಡೇ, ಪ್ರೊಪೋಸ್ ಡೇ, ಟೆಡ್ಡಿ ಡೇ, ಚಾಕೊಲೆಟ್ ಡೇ, ಪ್ರಾಮಿಸ್ ಡೇ,  ಹಗ್ ಡೇ, ಕಿಸ್ ಡೇ ಸೇರಿದಂತೆ ನಾನಾ ರೀತಿಯ ಡೇಗಳನ್ನು ಆಚರಿಸಲಾಗುತ್ತದೆ. ಅದಕ್ಕಾಗಿಯೇ ಒಂದು ತಿಂಗಳು ಮುಂಚಿತವಾಗಿ ಗುಲಾಬಿಗಳ ರಫ್ತು ಮಾಡಲಾಗುತ್ತದೆ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com