ಅನು'ರಾಗ'ದ ಶ್ರುತಿ ತಪ್ಪಿದೆಯೇ?

ನಮ್ಮ ಕಾಲದ ಪ್ರೀತಿಯೇ ಚೆನ್ನಾಗಿತ್ತು. ಈಗ ಅದರ ಅರ್ಥವೇ ಬದಲಾಗಿ ಹೋಗಿದೆ ಎಂಬ ಗೊಣಗಾಟ. ಹಾಗಾದರೆ ಪ್ರೀತಿ ಬದಲಾಗಿದೆಯಾ?...
ಪ್ರೀತಿ
ಪ್ರೀತಿ

ನಮ್ಮ ಕಾಲದ ಪ್ರೀತಿಯೇ ಚೆನ್ನಾಗಿತ್ತು. ಈಗ ಅದರ ಅರ್ಥವೇ ಬದಲಾಗಿ ಹೋಗಿದೆ ಎಂಬ ಗೊಣಗಾಟ. ಹಾಗಾದರೆ ಪ್ರೀತಿ ಬದಲಾಗಿದೆಯಾ? ಇಲ್ಲ...ಪ್ರೀತಿ ಮಾಡುವ ಜನರು ಬದಲಾಗಿದ್ದಾರೆ, ಜನರೇಷನ್ ಬದಲಾಗಿದೆ. ಜತೆಗೆ ಪ್ರೀತಿ ಮಾಡುವ ರೀತಿ ಬದಲಾಗಿದೆ ಅಷ್ಟೇ. ಈ ಪ್ರೇಮಿಗಳ ದಿನದಂದು ಆ ಕಾಲ ಎಷ್ಟೊಂದು ಚೆನ್ನಾಗಿತ್ತು ! ಎಂದು ಉದ್ಗರಿಸುವಾಗ ಬದಲಾದ ಪ್ರೀತಿ ಮತ್ತು ರೀತಿಗಳನ್ನು ನೆನಪಿಸಿಕೊಂಡು ಮತ್ತೊಮ್ಮೆ ಆ ಕಾಲದ ಪ್ರೀತಿಯನ್ನು ನೆನಪಿಸಿಕೊಳ್ಳೋಣ.

ಕದ್ದು ಮುಚ್ಚಿ ಬರೆದ ಪ್ರೇಮ ಪತ್ರ
ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದಂತೆ ಮನುಷ್ಯನ ನಡುವಿನ ಅಂತರಗಳೂ ಜಾಸ್ತಿಯಾಗುತ್ತಿವೆ. ಇಮೇಲ್, ವಾಟ್ಸಾಪ್, ಚಾಟಿಂಗ್ ಸೈಟ್ಸ್ , ಸೋಷ್ಯಲ್ ಮೀಡಿಯಾಗಳು ನಮ್ಮ ಜೀವನದ ಪ್ರಮುಖ ಭಾಗಗಳು ಎಂದು ಪರಿಗಣಿಸುವ ಕಾಲವಿದು. ಇದೆಲ್ಲಾ ಬರುವ ಮುನ್ನ ಪ್ರೇಮಿಗಳು ಪ್ರೇಮಪತ್ರಗಳ ಮೂಲಕವೇ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು, ಆ ಪ್ರೇಮಪತ್ರ ಬರೆದ ಶಾಯಿಯಲ್ಲಿಯೂ ಪ್ರೇಮದ ಸುಗಂಧ ಇರುತ್ತಿತ್ತು. ಆ ಪತ್ರಕ್ಕಾಗಿ ಕಾಯುವುದು, ಕದ್ದು ಮುಚ್ಚಿ ಓದುವುದು..ಅಷ್ಟೇ ಜೋಪಾನವಾಗಿರಿಸಿ ಅದನ್ನು ಮತ್ತೆ ಮತ್ತೆ ಓದುವ ಪುಳಕ! ಆ ಸಂಭ್ರಮ ಸಂತಸಗಳು ಈಗೆಲ್ಲಿ ಹೋದವು?

ಅವನು ಅಂಜದ ಗಂಡು, ಇವಳು ಸ್ನಿಗ್ಧ ಸುಂದರಿ
ನೀನು ಇಷ್ಟಪಡುವ ಹುಡುಗ ಹೇಗಿರಬೇಕು? ನೀನಿಷ್ಟಪಡುವ ಹುಡುಗಿ ಹೇಗಿರಬೇಕು? ಎಂಬ ಪ್ರಶ್ನೆಗೆ ಈಗಿನ ಕಾಲದ ಯುವಕ ಯುವತಿಯರು ಕೊಡುವ ಉತ್ತರ- ಹುಡುಗ ಮ್ಯಾಚೋ ಆಗಿರ್ಬೇಕು. ಹುಡುಗಿ ತೆಳ್ಳಗೆ ಬೆಳ್ಳಗೆ ಬಳುಕುವ ಬಳ್ಳಿ. ಜಿಮ್‌ಗೆ ಹೋಗಿ ಫಿಟ್ ಆಗಿರುವ ಹುಡುಗ, ಸಣ್ಣ ನಡುವಿನ ಸ್ಟೈಲಿಷ್ ಆಗಿರುವ ಹುಡುಗಿ! ಅಭಿರುಚಿಗಳು ಭಿನ್ನವಾಗುತ್ತಲೇ ಇರುತ್ತವೆ. ಹಿಂದಿನ ಕಾಲದಲ್ಲಾಗಿದ್ದರೆ ವ್ಯಕ್ತಿಯ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಒತ್ತುಕೊಡುತ್ತಿದ್ದರು. ಹುಡುಗ ಧೈರ್ಯವಂತನಾಗಿರಬೇಕು, ತಕ್ಕಮಟ್ಟಿಗೆ ಒಂದು ಕೆಲಸ ಇದ್ದರೆ ಸಾಕು ಎಂದು ಹುಡುಗಿಯರು ಬಯಸಿದರೆ  ಎಲ್ಲರನ್ನೂ ಗೌರವಿಸುವ ಹುಡುಗಿ, ಸಹಜ ನಾಚಿಕೆಯಿರುವ ಹುಡುಗಿಯರಿಗೆ ಹುಡುಗರು ಫಿದಾ ಆಗುತ್ತಿದ್ದರು. ಹುಡುಗ ಎಂದರೆ ಹೀಗೆ ಇರಬೇಕು, ಹುಡುಗಿ ಎಂದರೆ ಹೀಗೆ ಇರಬೇಕು ಎಂಬ ಚೌಕಟ್ಟನ್ನು ದಾಟಿ ನಾವು ಮುಂದೆ ಬಂದಿದ್ದೇವೆ. ಇಲ್ಲಿ ಎಲ್ಲರೂ ಸಮಾನರು ಎನ್ನುವಾಗ ಹುಡುಗ ಹುಡುಗಿ ನಡುವಿನ ಮಾನದಂಡಗಳೂ ಬದಲಾವಣೆ ಕಂಡುಕೊಂಡಿದೆ.

ಭೇಟಿಗಾಗಿ ಕಾಯುತ್ತಿದ್ದ ದಿನಗಳು
ನಲ್ಲನನ್ನು ಬಿಟ್ಟಿರಲಾರದ ನಲ್ಲೆ ಅವನಿಗಾಗಿ ಕಾಯುತ್ತಾ ಕನಸುಗಳನ್ನು ಹೆಣೆಯುತ್ತಿದ್ದಳು. ಇವನು ಅವಳಿಗಾಗಿ ಪ್ರೇಮಕವಿತೆಗಳನ್ನು ಬರೆಯುತ್ತಿದ್ದ. ಒಂದು ಭೇಟಿಗಾಗಿ ಹಲವಾರು ಪ್ಲಾನ್‌ಗಳನ್ನು ಮಾಡಬೇಕಾಗಿತ್ತು. ಪ್ರೇಮಿಯನ್ನು ಭೇಟಿ ಮಾಡುವ ಸಲುವಾಗಿ ಅದೆಷ್ಟು ಸುಳ್ಳುಗಳು..ನೆಪಗಳು! ಆದರೆ ಈಗ ಒಂದು ಸಂದೇಶ ಅಥವಾ ಕಾಲ್ ಮಾಡಿ ಭೇಟಿ ಮಾಡುವ ದಿನ ಫಿಕ್ಸ್ ಮಾಡಿದರೆ ಮುಗೀತು. ಇಬ್ಬರ ಅನುಕೂಲಕ್ಕೆ ತಕ್ಕಂತೆ ಒಂದಷ್ಟು ಗಳಿಗೆ ಫ್ರೀ ಮಾಡಿಕೊಂಡು ಜತೆಯಾಗಿ ಕಳೆದರೆ..ಅದೇ ಡೇಟಿಂಗ್!

ಎಷ್ಟೊಂದು ಮಾತಾಡ್ತಿದ್ವಿ!
ಮನೆಯವರ ಕಣ್ತಪ್ಪಿಸಿ ರಾತ್ರಿಯೆಲ್ಲಾ ಫೋನಲ್ಲಿ ಮಾತಾಡುವ ಖುಷಿಯೇ ಬೇರೆ ಇತ್ತು. ನಿದ್ದೆಗೆಟ್ಟು ಯಾರಿಗೂ ಕೇಳದಂತೆ ಪಿಸುಗುಡುತ್ತಾ ಮಾತನಾಡುವುದು, ಫೋನ್‌ನ್ನು ಬಚ್ಚಿಟ್ಟುಕೊಂಡು ಬಾತ್‌ರೂಂನಲ್ಲಿ ಮಾತಾಡುವುದೂ ಖುಷಿ ಕೊಡುತ್ತಿತ್ತು. ಆ ಮಾತುಗಳಲ್ಲಿ ನಮ್ಮ ಮನದ ಭಾವನೆಗಳು ವ್ಯಕ್ತ ವಾಗುತ್ತಿದ್ದವು. ಆದರೀಗ ನಮಗೆ ಮಾತನಾಡಲೂ ಪುರುಸೋತ್ತಿಲ್ಲ. ನಮ್ಮ ಭಾವನೆಗಳು ಫೇಸ್‌ಬುಕ್ ನ ಸ್ಟೇಟಸ್ ಆಗುತ್ತಿವೆ. ನಮ್ಮ ಭಾವಾಭಿವ್ಯಕ್ತಿಗೆ ಸ್ಮೈಲಿಗಳು ಮಾಧ್ಯಮಗಳಾಗಿವೆ.

ಪ್ರೀತಿ ನಿವೇದನೆಯ ಪರಿ
ಮನಸ್ಸಲ್ಲಿ ಹುಟ್ಟಿದ ಪ್ರೀತಿಯನ್ನು ಅವನಲ್ಲಿ/ ಅವಳಲ್ಲಿ ಹೇಳಿಕೊಳ್ಳಲು ಅದೆಷ್ಟು ಚಡಪಡಿಸುತ್ತಿದ್ದೆವು? ಪ್ರೀತಿ ನಿವೇದನೆ ಮಾಡುವ ರೀತಿಯಂತೂ ಇನ್ನೂ ವಿಶೇಷವಾಗಿತ್ತು. ಸಿನಿಮಾದಲ್ಲಿ ಹೀರೋ ಮಂಡಿಯೂರಿ ತನ್ನ ಪ್ರೇಯಸಿಗೆ ಕೆಂಗುಲಾಬಿ ನೀಡಿ ಪ್ರೇಮ ನಿವೇದನೆ ಮಾಡುವ ರೀತಿಯೇ ಪ್ರೀತಿಗೆ ಮುನ್ನುಡಿ ಬರೆಯುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಸುತ್ತೀಯಾ? ಎಂದು ಕೇಳುವ ರೀತಿ! ವ್ಹಾವ್... ಈಗ ಆ ರೀತಿ ಪ್ರೇಮ ನಿವೇದನೆ ಮಾಡಲು ನಮ್ಮಿಂದ ಸಾಧ್ಯವೆ? ಅಷ್ಟೊಂದು ಕಷ್ಟ ಪಡಬೇಕಾ? ಒಂದು ಮೆಸೇಜ್ ಕಳಿಸಿದರೆ ಸಾಕು....ಎಂಬುದೇ ಈ ಪ್ರಶ್ನೆಗೆ ಉತ್ತರವಾಗಿರುತ್ತದೆ.


ಜತೆಯಾಗಿ ಕೈ ಹಿಡಿದು ನಡೆವ ಸುಖ

ಪ್ರೀತಿಸಿದ ಹುಡುಗಿಯ ಕೈಬೆರಳು ಹಿಡಿದು ಪಾರ್ಕ್‌ನಲ್ಲಿ ನಡೆಯುವ ಸುಖ ಅದೆಷ್ಟು ಖುಷಿಕೊಡುತ್ತಿತ್ತು! ಅವನ ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತ್ತಾ, ಮೆಲ್ಲನೆ ನಗುತ್ತಾ, ಮಾತನಾಡುತ್ತಾ ನಡೆಯುವಾಗ ಮನಸ್ಸು ಸಂಭ್ರಮಿಸುತ್ತಿತ್ತು. ಈಗಲೂ ಪ್ರೇಮಿಗಳು ಜತೆಯಾಗಿ ಕೈ ಹಿಡಿದುಕೊಂಡೇ ಓಡಾಡುತ್ತಾರೆ. ಮಾಲ್, ಪಾರ್ಕ್‌ಗಳಲ್ಲಿ ಪರಸ್ಪರ ಅಂಟಿಕೊಂಡೇ ಇರುತ್ತಾರೆ. ಆದರೆ ಪ್ರಶಾಂತವಾದ ಸ್ಥಳದಲ್ಲಿ ಬೆರಳು ಬೆಸೆದು ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾ ಸುಮ್ಮನೆ ಹೆಜ್ಜೆ ಹಾಕುವ ಸುಖ ಅವರಿಗೆ ದಕ್ಕಿದೆಯೆ? ಮೊದಲ ಭೇಟಿ, ಮೊದಲ ಸ್ಪರ್ಶ ಎಲ್ಲವನ್ನೂ ನೆನಪಿನ ಜೋಳಿಗೆಗೆ ತುಂಬುವ ಹೊತ್ತಲ್ಲಿ ಜತೆಯಾಗಿ ಕಳೆದ ಕ್ಷಣಗಳು ಹೆಚ್ಚು ಅಮೂಲ್ಯ ಎನಿಸುತ್ತವೆ. ಅಂಥಾ ಕ್ಷಣಗಳ ಲೆಕ್ಕ ಬರೆದಿಡಬೇಕಿದೆ

ರೊಮ್ಯಾನ್ಸ್  ಕೂಡಾ ಸೂಪರ್ ಫಾಸ್ಟ್

ಅವಳಿಗೆ ಪ್ರೇಮ ನಿವೇದನೆ ಮಾಡಿದೆ, ಅವಳು ಒಪ್ಪಿ ಬಿಟ್ಟಳು. ಜತೆಯಾಗಿ ಮಾಲ್ ಪಾರ್ಕ್ ಸುತ್ತಾಡಿದ್ವಿ. ಕೆಲವು ದಿನಗಳ ನಂತರ ಜತೆಯಾಗಿ ವಾಸಿಸಲು ತೊಡಗಿದೆವು..ಹೀಗೆ ಸಾಗುತ್ತದೆ ಲವ್‌ಸ್ಟೋರಿ. ಇದೆಲ್ಲವೂ ನಡೆಯುವುದು ಕೆಲವೇ ದಿನಗಳಲ್ಲಿ. ಬದುಕು ವೇಗವಾಗಿ ನಡೆಯುತ್ತಿರುವಾಗ ಇಲ್ಲಿ ಪ್ರೀತಿಯೂ ಅಷ್ಟೇ ವೇಗದಲ್ಲಿ ಹುಟ್ಟಿಕೊಳ್ಳುತ್ತದೆ. ಅಷ್ಟೇ ವೇಗದಲ್ಲಿಯೂ ಮುರಿದು ಬೀಳುತ್ತದೆ. ಪರಸ್ಪರ ತಿಳಿದುಕೊಂಡು ಆಮೇಲೆ ಹೃದಯ ಒಪ್ಪಿಸುವಷ್ಟು ಕಾಲಾವಕಾಶವೂ ಇಲ್ಲಿರುವುದಿಲ್ಲ. ಚಾಟಿಂಗ್‌ನಲ್ಲಿ ತುಂಬಾ ಹೊತ್ತು ಕಳೆಯುತ್ತೇವೆ ಆ ಮೂಲಕವೇ ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎನ್ನುವ ಭ್ರಮೆಯೇ ಇಂಥಾ ತಪ್ಪುಗಳಿಗೆ ಕಾರಣವಾಗುತ್ತದೆ. ಮೂವತ್ತು ವರುಷಗಳ ಹಿಂದೆಯಾದರೆ ಹುಡುಗ ಹುಡುಗಿ ಜತೆಯಾಗಿ ಕುಳಿತು ಮಾತನಾಡಿ ತಮ್ಮ ಭಾವನೆಗಳು ಹಂಚಿಕೊಳ್ಳುತ್ತಿದ್ದರು. ಈಗ ಅಷ್ಟೊಂದು ಮಾತಾಡುವುದಕ್ಕೆ ಸಮಯವೆಲ್ಲಿದೆ? 

ಸ್ಟೇಟಸ್ ಎಲ್ಲವೂ ಹೇಳುತ್ತೆ

ಫೇಸ್‌ಬುಕ್‌ನಲ್ಲಿ ರಿಲೇಶನ್‌ಶಿಪ್ ಸ್ಟೇಟಸ್ ಚೇಂಜ್ ಮಾಡುವ ಮೂಲಕ ತಾವು ಸಿಂಗಲ್ ಆಗಿದ್ದೇವೆಯೇ ಅಥವಾ ರಿಲೇಶನ್‌ಶಿಪ್‌ನಲ್ಲಿ ಇದ್ದೀವಾ? ಎಂಬುದನ್ನು ಹೇಳಿಬಿಡುತ್ತೇವೆ. ಪ್ರೇಮಿಗಳಿಬ್ಬರ ನಡುವಿನ ಪ್ರೀತಿಯ ಸಂಬಂಧವನ್ನು ಬಿಚ್ಚಿಡುವ ಕಾಲವೊಂದಿತ್ತು. ಆದರೆ ಈಗ ಎಲ್ಲವೂ ಪ್ರದರ್ಶನದ ವಸ್ತುವೆಂಬಂತೆ ಖುಲ್ಲಂಖುಲ್ಲಾ...ಪ್ರೀತಿಯನ್ನು ವ್ಯಕ್ತ ಪಡಿಸುವ ರೀತಿಯೂ...

-ಸಾರಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com